ADVERTISEMENT

IND vs ENG: ಬೆಸ್ಟೊ, ಸ್ಟೋಕ್ಸ್ ಅಬ್ಬರಕ್ಕೆ ಭಾರತ ಸ್ಟನ್; ಸರಣಿ ಸಮಬಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2021, 18:33 IST
Last Updated 26 ಮಾರ್ಚ್ 2021, 18:33 IST
ಬೆನ್ ಸ್ಟೋಕ್ಸ್ ಮತ್ತು ಜಾನಿ ಬೆಸ್ಟೊ
ಬೆನ್ ಸ್ಟೋಕ್ಸ್ ಮತ್ತು ಜಾನಿ ಬೆಸ್ಟೊ   

ಪುಣೆ: ಜಾನಿ ಬೆಸ್ಟೊ (124), ಬೆನ್ ಸ್ಟೋಕ್ಸ್ (99) ಹಾಗೂ ಜೇಸನ್ ರಾಯ್ (55) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡವು ಭಾರತ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಪುಣೆಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಒಡ್ಡಿದ 337 ರನ್ ಗೆಲುವಿನ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್, 43.3 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದ್ದು, ಭಾನುವಾರ ಇದೇ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೆ ಹೆಚ್ಚಿನ ರೋಚಕತೆ ಮನೆ ಮಾಡಿದೆ. ಇದಕ್ಕೂ ಮೊದಲು ನಡೆದ ಮೊದಲ ಏಕದಿನದಲ್ಲಿ ಭಾರತ 66 ರನ್ ಅಂತರದ ಗೆಲುವು ದಾಖಲಿಸಿತ್ತು.

ADVERTISEMENT

ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಭಾರತ ಒಡ್ಡಿದ ಮೊತ್ತವು ಸವಾಲೆನಿಸಲಿಲ್ಲ. ಮೊದಲ ಏಕದಿನದಂತೆ ಆರಂಭಿಕರಾದ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಬಿರುಸಿನ ಆರಂಭವೊದಗಿಸಿದರು.

ಇವರಿಬ್ಬರು ಮೊದಲ ವಿಕೆಟ್‌ಗೆ 16.3 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟ ನೀಡಿ ಭದ್ರ ಬುನಾದಿ ಹಾಕಿದರು. ಈ ಹಂತದಲ್ಲಿ ಅದ್ಭುತ ಕ್ಷೇತ್ರರಕ್ಷಣೆ ಮಾಡಿದ ರೋಹಿತ್ ಶರ್ಮಾ, ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ಅವರನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾದರು.

52 ಎಸೆತಗಳನ್ನು ಎದುರಿಸಿದ ರಾಯ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು.

ಬೆಸ್ಟೊ 'ಬೆಸ್ಟ್', ಸ್ಟೋಕ್ಸ್ 'ಸ್ಟನ್'...
ಈ ಹಂತದಲ್ಲಿ ಜೊತೆಗೂಡಿದ ಜಾನಿ ಬೆಸ್ಟೊ ಮತ್ತು ಬೆನ್ ಸ್ಟೋಕ್ಸ್ ಬಿರುಸಿನ ಆಟವಾಡಿದರು. ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಇದರಿಂದಾಗಿ ನಾಯಕ ವಿರಾಟ್ ಕೊಹ್ಲಿ ರಣನೀತಿಯು ವಿಫಲವಾದವು.

ಪುಣೆ ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದರು. ಕಳೆದ ಪಂದ್ಯದ ತಪ್ಪು ಪುನಾರವರ್ತಿಸದಂತೆ ನೋಡಿಕೊಂಡ ಈ ಜೋಡಿಯು ದ್ವಿತೀಯ ವಿಕೆಟ್‌ಗೆ 177 ರನ್‌ಗಳ ಬೃಹತ್ ಜೊತೆಯಾಟ ನೀಡಿ ತಂಡದ ಗೆಲುವನ್ನು ಖಚಿತಗೊಳಿಸಿದರು.

ಕಳೆದ ಪಂದ್ಯದಲ್ಲಿ ಕೇವಲ ಆರು ರನ್ ಅಂತರದಿಂದ ಶತಕವನ್ನು ಮಿಸ್ ಮಾಡಿಕೊಂಡಿದ್ದ ಬೆಸ್ಟೊ, ಈ ಬಾರಿ ಅಮೋಘ ಶತಕ ಬಾರಿಸಿದರು. ಅಲ್ಲದೆ 112 ಎಸೆತಗಳಲ್ಲಿ 11 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳ ನೆರವಿನಿಂದ 124 ರನ್ ಗಳಿಸಿದರು.

ಅತ್ತ ಬೆಸ್ಟೊಗಿಂತಲೂ ಬಿರುಸಾಗಿ ಬ್ಯಾಟ್ ಬೀಸಿದ ಸ್ಟೋಕ್ಸ್ ಕೇವಲ ಒಂದು ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡರು. ಆಗಲೇ 52 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 99 ರನ್ ಗಳಿಸಿದ್ದರು.

ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಬೆಸ್ಟೊ ಹಾಗೂ ನಾಯಕ ಜೋ ಬಟ್ಲರ್ (0) ಅವರನ್ನು ಪ್ರಸಿದ್ಧ ಕೃಷ್ಣ ಹೊರದಬ್ಬಿದ್ದರೂ ಆಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಅಂತಿಮ ಹಂತದಲ್ಲಿ ಬಿರುಸಿನ 27* ರನ್ ಗಳಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೇವಿಡ್ ಮಲಾನ್ ಸಹ 16* ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಭಾರತದ ಪರ ಕುಲ್‌ದೀಪ್ ಯಾದವ್, ಕೃಣಾಲ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ದುಬಾರಿಯೆನಿಸಿದರು.

ರಾಹುಲ್ ಸೆಂಚುರಿ, ಪಂತ್-ಕೊಹ್ಲಿ ಫಿಫ್ಟಿ; ಭಾರತ 336/6...
ಈ ಮೊದಲು ಕೆಎಲ್ ರಾಹುಲ್ ಭರ್ಜರಿ ಶತಕ (108) ಮತ್ತು ರಿಷಭ್ ಪಂತ್ (77) ಹಾಗೂ ನಾಯಕ ವಿರಾಟ್ ಕೊಹ್ಲಿ (66) ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಆರು ವಿಕೆಟ್ ನಷ್ಟಕ್ಕೆ 336 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡವು 9 ರನ್ ಗಳಿಸುವುವಷ್ಟರಲ್ಲಿ ಕಳೆದ ಪಂದ್ಯದ ಶತಕವೀರ ಶಿಖರ್ ಧವನ್ (4) ವಿಕೆಟ್ ನಷ್ಟವಾಗಿತ್ತು.

ರೋಹಿತ್ ಶರ್ಮಾ ಐದು ಬೌಂಡರಿಗಳ ನೆರವಿನಿಂದ ಎಸೆತಕ್ಕೊಂದರಂತೆ 25 ರನ್ ಗಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದರು.

ಗಾಯಾಳು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ರಾಹುಲ್, ನಾಯಕನಿಗೆ ಉತ್ತಮ ಸಾಥ್ ನೀಡಿದರು.

ಇವರಿಬ್ಬರು ಮೂರನೇ ವಿಕೆಟ್‌ಗೆ 121 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಸತತ ಎರಡನೇ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಸಾಧನೆ ಮಾಡಿದ ವಿರಾಟ್ 79 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು.

ವಿರಾಟ್ ಪತನದ ಬಳಿಕ ಕ್ರೀಸಿಗಿಳಿದ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಪಂದ್ಯದ ಗತಿಯನ್ನು ಬದಲಾಯಿಸಿದರು. ರಾಹುಲ್ ಹಾಗೂ ಪಂತ್ ಜೋಡಿ ಆಂಗ್ಲರ ಪಡೆಯ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು.

ಈ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಟೀಕೆಗಳಿಗೆ ತಕ್ಕ ಉತ್ತರ ನೀಡಿದ ರಾಹುಲ್ ಮನಮೋಹಕ ಶತಕ ಸಾಧನೆ ಮಾಡಿದರು. ಅತ್ತ ಪಂತ್ 28 ಎಸೆತಗಳಲ್ಲಿ ಬಿರುಸಿನ ಅರ್ಧಶತಕದ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡರು.

114 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 106 ರನ್ ಗಳಿಸಿದರು. ಅಲ್ಲದೆ ಪಂತ್ ಜೊತೆಗೆ ನಾಲ್ಕನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ತಂಡವನ್ನು 300ರ ಗಡಿ ದಾಟಿಸಲು ನೆರವಾದರು. ಕೊನೆಯ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಕೂಡಾ ಕೈಜೋಡಿಸಿದರು.

ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 336 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 40 ಎಸೆತಗಳನ್ನು ಎದುರಿಸಿದ ಪಂತ್ ಮೂರು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದರು.

ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 35 ರನ್ ಗಳಿಸಿದರು. ಪಾಂಡ್ಯ ಇನ್ನಿಂಗ್ಸ್‌ನಲ್ಲೂ ನಾಲ್ಕು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸೇರಿದ್ದವು. ಇನ್ನುಳಿದಂತೆ ಕೃಣಾಲ್ ಪಾಂಡ್ಯ 9 ಎಸೆತಗಳಲ್ಲಿ ಬೌಂಡರಿ ನೆರವಿನಿಂದ 12 ರನ್ ಗಳಿಸಿ ಅಜೇಯರಾಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.