ADVERTISEMENT

IND vs ENG: ಅಶ್ವಿನ್ 400 ವಿಕೆಟ್ ಕ್ಲಬ್‌ಗೆ ಸೇರ್ಪಡೆ; ಭಾರತದ 4ನೇ ಬೌಲರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2021, 16:48 IST
Last Updated 25 ಫೆಬ್ರುವರಿ 2021, 16:48 IST
ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್   

ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೆಸ್ಟ್ ವೃತ್ತಿ ಜೀವನದಲ್ಲಿ 400 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಈ ಮೂಲಕ 400 ವಿಕೆಟ್‌ಗಳ ಕ್ಲಬ್ ಸೇರಿದ ಭಾರತದ ನಾಲ್ಕನೇ ಬೌಲರ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ ಈ ಮಹಾನ್ ಸಾಧನೆ ಮಾಡಿದ್ದಾರೆ.

ADVERTISEMENT

ಅಷ್ಟೇ ಯಾಕೆ ವಿಶ್ವ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಬಳಿಕ ಅತಿ ವೇಗದಲ್ಲಿ 400 ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎಂಬ ಖ್ಯಾತಿಗೂ ಅಶ್ವಿನ್ ಪಾತ್ರವಾಗಿದ್ದಾರೆ.

ಭಾರತದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದು, 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮಾಜಿ ದಿಗ್ಗಜ ಕಪಿಲ್ ದೇವ್ 434 ಮತ್ತು ಮೂರನೇ ಸ್ಥಾನದಲ್ಲಿರುವ ಹರಭಜನ್ ಸಿಂಗ್ 417 ವಿಕೆಟ್‌ಗಳನ್ನುಪಡೆದಿದ್ದಾರೆ.

ಆರ್. ಅಶ್ವಿನ್ ತಮ್ಮ 77ನೇ ಟೆಸ್ಟ್ ಪಂದ್ಯದ 144ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಫ್ರಾ ಆರ್ಚರ್ ವಿಕೆಟ್ ಪಡೆಯುವ ಮೂಲಕ 400 ವಿಕೆಟ್‌ಗಳ ದಾಖಲೆ ಬರೆದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 29 ಬಾರಿ ಐದು ವಿಕೆಟ್ ಸಾಧನೆ ಮಾಡಿರುವ ಅಶ್ವಿನ್ ಪಂದ್ಯವೊಂದರಲ್ಲಿ ಏಳು ಬಾರಿ 10 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಟೆಸ್ಟ್‌ನಲ್ಲಿ ಅತಿ ವೇಗದಲ್ಲಿ 400 ವಿಕೆಟ್ ಸಾಧನೆ:
ಮುತ್ತಯ್ಯ ಮುರಳೀಧರನ್: 72 ಪಂದ್ಯ
ಆರ್. ಅಶ್ವಿನ್: 77 ಪಂದ್ಯ
ರಿಚರ್ಡ್ ಹಾಡ್ಲಿ/ಡೇಲ್ ಸ್ಟೇನ್: 80 ಪಂದ್ಯ
ರಂಗನಾ ಹೇರಾತ್: 84 ಪಂದ್ಯ
ಅನಿಲ್ ಕುಂಬ್ಳೆ: 85 ಪಂದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.