ADVERTISEMENT

IND vs ENG 1st Test: ರೂಟ್ ದ್ವಿಶತಕ; ಟೀ ವಿರಾಮಕ್ಕೆ ಇಂಗ್ಲೆಂಡ್ 454/4

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 8:58 IST
Last Updated 6 ಫೆಬ್ರುವರಿ 2021, 8:58 IST
ಇಂಗ್ಲೆಂಡ್ ನಾಯಕ ಜೋ ರೂಟ್ ಅಮೋಘ ದ್ವಿಶತಕ ಸಾಧನೆ
ಇಂಗ್ಲೆಂಡ್ ನಾಯಕ ಜೋ ರೂಟ್ ಅಮೋಘ ದ್ವಿಶತಕ ಸಾಧನೆ   

ಚೆನ್ನೈ: ನಾಯಕ ಜೋ ರೂಟ್ ಭರ್ಜರಿ ದ್ವಿಶತಕದ (209*) ಬೆಂಬಲದೊಂದಿಗೆ ಇಂಗ್ಲೆಂಡ್ ತಂಡವು ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ.

ಎರಡನೇ ದಿನದಾಟದ ಟೀ ವಿರಾಮದ ಹೊತ್ತಿಗೆ ಇಂಗ್ಲೆಂಡ್ ತಂಡವು 147 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 454 ರನ್ ಪೇರಿಸಿದೆ.

ಭಾರತೀಯ ಬೌಲರ್‌ಗಳನ್ನು ಕಾಡಿದ ರೂಟ್, ಅಮೋಘ ದ್ವಿಶತಕ ಸಾಧನೆ ಮಾಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರೂಟ್ ಬ್ಯಾಟ್‌ನಿಂದ ಸಿಡಿದ ಐದನೇ ದ್ವಿಶತಕ ಸಾಧನೆಯಾಗಿದೆ. ಈ ಮೂಲಕ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನವಾದರು.

ADVERTISEMENT

ಮೂರು ವಿಕೆಟ್ ನಷ್ಟಕ್ಕೆ 263 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಎರಡನೇ ದಿನದಾಟದಲ್ಲೂ ಭಾರತೀಯ ಬೌಲರ್‌ಗಳನ್ನು ಕಾಡಿದರು.

100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿರುವ ಜೋ ರೋಟ್ ಕ್ರೀಸಿನಲ್ಲಿ ನೆಲೆಯೂರಿ ಭಾರತೀಯ ಬೌಲರ್‌ಗಳನ್ನು ಬೆನ್ನಟ್ಟಿದರು. ಇವರಿಗೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರಿಂದ ಉತ್ತಮ ಬೆಂಬಲ ದೊರಕಿತು.

ಭಾರತೀಯ ಬೌಲರ್‌ಗಳನ್ನು ಬೆವರಿಳಿಸಿದ ರೂಟ್, ಸತತ ಮೂರನೇ ಪಂದ್ಯದಲ್ಲೂ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದರು. ಇನ್ನೊಂದೆಡೆ ಸ್ಟೋಕ್ಸ್ ಅರ್ಧಶತಕವನ್ನು ಪೂರ್ಣಗೊಳಿಸಿದರು.

ಊಟದ ವಿರಾಮದ ಹೊತ್ತಿಗೆ ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 355 ರನ್ ಗಳಿಸಿತ್ತು. ಭೋಜನ ವಿರಾಮದ ಬಳಿಕವೂ ಇಂಗ್ಲೆಂಡ್ ದಾಂಡಿಗರು ಅತ್ಯುತ್ತಮ ಆಟವನ್ನು ಮುಂದುವರಿಸಿದರು. ಈ ಮಧ್ಯೆ ಶತಕದತ್ತ ಮುನ್ನುಗ್ಗುತ್ತಿದ್ದ ಸ್ಟೋಕ್ಸ್ ಅವರನ್ನು ಶಹಬಾಜ್ ನದೀಂ ಹೊರದಬ್ಬಿದರು. ಆಗಲೇ 118 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 82 ರನ್ ಗಳಿಸಿದ್ದರು.

ರೂಟ್ ಹಾಗೂ ಸ್ಟೋಕ್ಸ್ ಮೂರನೇ ವಿಕೆಟ್‌ಗೆ 124 ರನ್‌ಗಳ ಜೊತೆಯಾಟ ನೀಡಿದರು. ಸ್ಟೋಕ್ಸ್ ಪತನದ ಬಳಿಕ ಒಲ್ಲಿ ಪಾಪ್ ಜೊತೆಗೂಡಿದ ರೂಟ್, ತಂಡವನ್ನು ಮುನ್ನಡೆಸಿದರು.

ಟೀ ವಿರಾಮಕ್ಕೆ ಸ್ವಲ್ಪ ಹೊತ್ತು ಇರುವಾಗ ರೂಟ್, ಸಿಕ್ಸರ್ ಮೂಲಕ ವೃತ್ತಿ ಜೀವನದ 5ನೇ ದ್ವಿಶತಕ ಸಾಧನೆ ಮಾಡಿದರು.

353 ಎಸೆತಗಳನ್ನು ಎದುರಿಸಿರುವ ರೂಟ್ 19 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 209 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ಪಾಪ್, 74 ಎಸೆತಗಳಲ್ಲಿ ಎರಡು ಬೌಂಡರಿ ನೆರವಿನಿಂದ 24 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪ್ರಸ್ತುತ ಪಂದ್ಯದಲ್ಲಿ ಅಧಿಪತ್ಯ ಸ್ಥಾಪಿಸಿರುವ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸುವ ಇರಾದೆಯಲ್ಲಿದೆ. ಮೊದಲ ದಿನದಾಟದಲ್ಲಿ ನಾಯಕ ರೂಟ್‌ಗೆ ಉತ್ತಮ ಬೆಂಬಲ ನೀಡಿರುವ ಆರಂಭಿಕ ಡಾಮಿನಿಕ್ ಸಿಬ್ಲಿ 87 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.