ADVERTISEMENT

IND vs ENG: ಸಿಬ್ಲಿ ಫಿಫ್ಟಿ, ರೂಟ್ 45*; ಟೀ ವಿರಾಮಕ್ಕೆ ಇಂಗ್ಲೆಂಡ್ 140/2

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 9:14 IST
Last Updated 5 ಫೆಬ್ರುವರಿ 2021, 9:14 IST
ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ ಸಂಭ್ರಮ
ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ ಸಂಭ್ರಮ   

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್, ಆರಂಭಿಕ ಡಾಮಿನಿಕ್ ಸಿಬ್ಲಿ ಆಕರ್ಷಕ ಅರ್ಧಶತಕ (53*) ಹಾಗೂ ನಾಯಕ ಜೋ ರೂಟ್ (45*) ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಮೊದಲ ದಿನದಾಟದ ಟೀ ವಿರಾಮದ ಹೊತ್ತಿಗೆ 57 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ತಂಡಕ್ಕೆ ಓಪನರ್‌ಗಳಾದ ರೋರಿ ಬರ್ನ್ಸ್ ಹಾಗೂ ಡಾಮಿನಿಕ್ ಸಿಬ್ಲಿ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 63 ರನ್‌ಗಳ ಜೊತೆಯಾಟ ನೀಡಿದರು.

17 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ಜಸ್‌ಪ್ರೀತ್ ಬೂಮ್ರಾ ಹಾಗೂ ಸುದೀರ್ಘ ಸಮಯದ ಬಳಿಕ ತಂಡಕ್ಕೆ ಪುನರಾಗಮನ ಮಾಡಿರುವ ಇಶಾಂತ್ ಶರ್ಮಾ ಪ್ರಭಾವಿ ದಾಳಿ ಸಂಘಟಿಸಿದರೂ ಆರಂಭದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಈ ನಡುವೆ ಊಟದ ವಿರಾಮಕ್ಕೆ ಸ್ವಲ್ಪ ಮೊದಲು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎದುರಾಳಿಗಳಿಗೆ ಮೊದಲ ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ರೋರಿ ಬರ್ನ್ಸ್ (33) ಹೊರದಬ್ಬುವಲ್ಲಿ ಯಶಸ್ವಿಯಾದರು. 60 ಎಸೆತಗಳನ್ನು ಎದುರಿಸಿದ ಬರ್ನ್ಸ್ ಎರಡು ಬೌಂಡರಿಗಳಿಂದ 33 ರನ್ ಗಳಿಸಿದರು.

ADVERTISEMENT

ಇದಾದ ಬೆನ್ನಲ್ಲೇ ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ ಡ್ಯಾನಿಯಲ್ ಲಾರೆನ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಬೂಮ್ರಾ ತವರು ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಸಾಧನೆ ಮಾಡಿದರು.

ಊಟದ ವಿರಾಮದ ಹೊತ್ತಿಗೆ ಆಂಗ್ಲರ ಪಡೆಯು ಎರಡು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ಭೋಜನ ವಿರಾಮದ ಬಳಿಕ ನಾಯಕ ಜೋ ರೂಟ್ ಜೊತೆಗೂಡಿದ ಡಾಮಿನಿಕ್ ಸಿಬ್ಲಿ ತಂಡವನ್ನು ದಿಟ್ಟವಾಗಿ ಮುನ್ನಡೆಸಿದರು.

ಇದರಿಂದಾಗಿ ಭಾರತೀಯ ಬೌಲರ್‌ಗಳು ಅಲ್ಪ ಹಿನ್ನೆಡೆ ಅನುಭವಿಸಿದರು. ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ ಸಿಬ್ಲಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ಭಾರತೀಯ ಬೌಲರ್‌ಗಳ ಮೇಲೆ ಒತ್ತಡವನ್ನು ಹೇರಿದರು.

ಡಾಮಿನಿಕ್ ಸಿಬ್ಲಿ ಹಾಗೂ ಜೋ ರೂಟ್ ಮುರಿಯದ ಮೂರನೇ ವಿಕೆಟ್‌ಗೆ 77 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದ್ದು, ದಿನದಾಟದ ಅಂತಿಮ ಅವಧಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

186 ಎಸೆತಗಳನ್ನು ಎದುರಿಸಿರುವ ಸಿಬ್ಲಿ ಏಳು ಬೌಂಡರಿಗಳಿಂದ ಅಜೇಯ 53 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಅರ್ಧಶತಕದ ಸನಿಹದಲ್ಲಿರುವ ರೂಟ್ 100 ಎಸೆತಗಳಲ್ಲಿ ಐದು ಬೌಂಡರಿ ನೆರವಿನಿಂದ 45 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ಈ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಜೋ ರೂಟ್ ಪಾಲಿಗಿದು ಸ್ಮರಣೀಯ 100ನೇ ಟೆಸ್ಟ್ ಪಂದ್ಯವಾಗಿದೆ.

ಅಚ್ಚರಿಯೆಂಬಂತೆ ಭಾರತ ತಂಡದಲ್ಲಿ ಕುಲ್‌ದೀಪ್ ಸ್ಥಾನಕ್ಕೆ ಶಹಬಾಜ್ ನದೀಂ ಆಯ್ಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಗಾಯಾಳು ಅಕ್ಷರ್ ಪಟೇಲ್ ಸ್ಥಾನಕ್ಕೆ ನದೀಂ ಹಾಗೂ ರಾಹುಲ್ ಚಹರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು.

ಸುದೀರ್ಘ ಸಮಯದ ಬಳಿಕ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಭಾರತ ತಂಡವು ಮೂವರು ಸ್ಪಿನ್ನರ್‌ಗಳ ರಣತಂತ್ರಕ್ಕೆ ಮೊರೆ ಹೋಗಿದ್ದು, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್ ಜೊತೆಗೆ ಎಡಗೈ ಸ್ಪಿನ್ನರ್ ಶಹಬಾಜ್ ನದೀಂ ಕಾಣಿಸಿಕೊಂಡಿದ್ದಾರೆ.

ಮುಂಬರುವ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಯಾರು ಆಡಲಿದ್ದಾರೆ ಎಂಬುದು ಕೂಡಾ ಇದೇ ಸರಣಿಯಲ್ಲಿ ನಿರ್ಧಾರವಾಗಲಿದೆ. ಹಾಗಾಗಿ ಪ್ರಸ್ತುತ ಸರಣಿಯು ಹೆಚ್ಚಿನ ರೋಚಕತೆ ಮನೆ ಮಾಡಿದೆ.

ಇನ್ನುಳಿದಂತೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್ ಹಾಗೂ ರಾಹುಲ್ ಚಹರ್ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ.

ಆಡುವ ಬಳಗ ಇಂತಿದೆ:

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ ಮತ್ತು ಶಹಬಾಜ್ ನದೀಂ.

ಇಂಗ್ಲೆಂಡ್: ರೋರಿ ಬರ್ನ್ಸ್, ಡಾಮಿನಿಕ್ ಸಿಬ್ಲಿ, ಡ್ಯಾನಿಯಲ್ ಲಾರೆನ್ಸ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಒಲ್ಲಿ ಪಾಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡಾಮಿನಿಕ್ ಬೆಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡ್ರೆಸನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.