ADVERTISEMENT

ಶಾರ್ದೂಲ್‌ಗಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ; ಅಚ್ಚರಿಪಟ್ಟ ನಾಯಕ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2021, 3:25 IST
Last Updated 29 ಮಾರ್ಚ್ 2021, 3:25 IST
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ   

ಪುಣೆ: ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಏಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿಲ್ಲ ಎಂಬುದು ಆಶ್ಚರ್ಯಕರವಾಗಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭುವನೇಶ್ವರ್ ಕುಮಾರ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಗದಿರುವುದು ಸಹ ಕೊಹ್ಲಿ ಅವರಲ್ಲಿ ಅಚ್ಚರಿ ಮೂಡಿಸಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಏಳು ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.

ADVERTISEMENT

ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. 'ಶಾರ್ದೂಲ್‌ಗೆ ಪಂದ್ಯಶ್ರೇಷ್ಠ ಮತ್ತು ಭುವಿಗೆ ಸರಣಿಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗದಿರುವುದು ನನ್ನಲ್ಲಿ ಅಚ್ಚರಿಯನ್ನುಂಟು ಮಾಡಿದೆ. ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಪರಿಣಾಮಕಾರಿ ದಾಳಿ ಸಂಘಟಿಸಿದ ಅವರಿಗೆ ಮನ್ನಣೆ ಸಲ್ಲಬೇಕಿದೆ' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

330 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತ್ತು. ಸೋಲಿನ ಹೊರತಾಗಿಯೂ ದಿಟ್ಟ ಹೋರಾಟ ನೀಡಿದ ಇಂಗ್ಲೆಂಡ್‌ನ ಸ್ಯಾಮ್ ಕರನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಸ್ಯಾಮ್ 83 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ಅಜೇಯರಾಗುಳಿದಿದ್ದರು.

ಇನ್ನೊಂದೆಡೆ ಇಂಗ್ಲೆಂಡ್ ಓಟಕ್ಕೆ ಕಡಿವಾಣ ಹಾಕಿದ ಶಾರ್ದೂಲ್, ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಅತ್ತ ಭುವಿ ಮೂರು ವಿಕೆಟ್ ಸೇರಿದಂತೆ ಸರಣಿಯಲ್ಲಿ ಒಟ್ಟು ಆರು ವಿಕೆಟ್‌ಗಳನ್ನು ಪಡೆದಿದ್ದರು.

ಅತ್ತ ಸರಣಿಯುದ್ಧಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೆಸ್ಟೊ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಕಳಪೆ ಫೀಲ್ಡಿಂಗ್, ತಲೆ ಕೆಡಿಸಿಕೊಳ್ಳದ ವಿರಾಟ್...
ಈ ನಡುವೆ ಅಂತಿಮ ಪಂದ್ಯದಲ್ಲಿ ಭಾರತೀಯ ಆಟಗಾರರು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಆದರೆ ಕಳಪೆ ಫಿಲ್ಡಿಂಗ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ ತಲೆಕೆಡಿಸಿಕೊಂಡಿಲ್ಲ. ಇವೆಲ್ಲವೂ ಪಂದ್ಯದ ಭಾಗವಾಗಿದೆ ಎಂದಿದ್ದಾರೆ.

'ಕ್ಯಾಚ್ ಕೈಬಿಟ್ಟ ಆಟಗಾರರು ನಿರಾಸೆಗೊಂಡಿದ್ದಾರೆ. ಹತಾಶರಾಗಿ ಕ್ಯಾಚ್ ಕೈಬಿಟ್ಟಾಗ ದೊಡ್ಡ ಬೆಲೆ ತೆರಬೇಕಾಗುತ್ತದೆ. ಆದರೆ ಇವೆಲ್ಲವೂ ಪಂದ್ಯದ ಭಾಗವಾಗಿದ್ದು, ಬದ್ಧತೆಯ ಕೊರತೆಯಿರಲಿಲ್ಲ. ಪ್ರತಿಯೊಬ್ಬ ಆಟಗಾರನ ದೇಹಭಾಷೆ ಅತ್ಯುತ್ತಮವಾಗಿತ್ತು. ಅಂತಿಮವಾಗಿ ಪಂದ್ಯ ಗೆಲ್ಲಲು ಯಶಸ್ವಿಯಾಗಿದ್ದೇವೆ' ಎಂದಿದ್ದಾರೆ.

ಅಗ್ರ ಎರಡು ತಂಡಗಳು ಪೈಪೋಟಿಗಿಳಿದಾಗ ಇಂತಹ ರೋಚಕ ಪಂದ್ಯಗಳನ್ನು ಪಡೆಯುತ್ತೇವೆ. ಇಂಗ್ಲೆಂಡ್ ಸುಲಭದಲ್ಲಿ ಸೋಲೊಪ್ಪಿಕೊಳ್ಳುವುದಿಲ್ಲ ಎಂಬುದು ನಮಗೆ ತಿಳಿದಿತ್ತು. ಸ್ಯಾಮ್ ಕರನ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.