ADVERTISEMENT

T20 WC ಸೆಮಿಫೈನಲ್ | ಭಾರತಕ್ಕೆ 10 ವಿಕೆಟ್ ಅಂತರದ ಸೋಲು; ಫೈನಲ್‌ಗೆ ಇಂಗ್ಲೆಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2022, 14:07 IST
Last Updated 10 ನವೆಂಬರ್ 2022, 14:07 IST
ಇಂಗ್ಲೆಂಡ್ ತಂಡದ ಜಾಸ್‌ ಬಟ್ಲರ್‌ ಹಾಗೂ ಅಲೆಕ್ಸ್‌ ಹೇಲ್ಸ್‌ (ಚಿತ್ರಕೃಪೆ: Twitter / @ICC)
ಇಂಗ್ಲೆಂಡ್ ತಂಡದ ಜಾಸ್‌ ಬಟ್ಲರ್‌ ಹಾಗೂ ಅಲೆಕ್ಸ್‌ ಹೇಲ್ಸ್‌ (ಚಿತ್ರಕೃಪೆ: Twitter / @ICC)   

ಅಡಿಲೇಡ್‌: ಈ ಬಾರಿಯ ಟಿ20ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌, ಭಾರತದ ವಿರುದ್ಧ 10 ವಿಕೆಟ್ ಅಂತರದ ಸುಲಭ ಜಯ ಸಾಧಿಸಿದೆ.

ಇಲ್ಲಿನ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 168 ರನ್‌ ಕಲೆಹಾಕಿತ್ತು.

ಈ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಪರ ಆರಂಭಿಕರಾದ ನಾಯಕ ಜಾಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಅತ್ಯುತ್ತಮವಾಗಿ ಬ್ಯಾಟ್‌ ಬೀಸಿದರು. ಭಾರತದ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಈ ಇಬ್ಬರು ತಮ್ಮ ತಂಡಕ್ಕೆ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ ಜಯ ತಂದುಕೊಟ್ಟರು.

ADVERTISEMENT

ಬೀಸಾಟವಾಡಿದ ಹೇಲ್ಸ್‌ ಮತ್ತು ಬಟ್ಲರ್‌ 16 ಓವರ್‌ಗಳಲ್ಲಿ 170ರನ್‌ ಕಲೆಹಾಕಿದರು. ಹೇಲ್ಸ್‌ಕೇವಲ 47 ಎಸೆತಗಳಲ್ಲಿ 7ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 89 ರನ್‌ ಚಚ್ಚಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಬಟ್ಲರ್‌ 49 ಎಸೆತಗಳಲ್ಲಿ 3ಸಿಕ್ಸರ್‌ ಮತ್ತು 9 ಬೌಂಡರಿ ಸಹಿತ80ರನ್‌ ಸಿಡಿಸಿದರು.

ಇದು ಈ ಬಾರಿಯ ವಿಶ್ವಕಪ್‌ನಲ್ಲಿ ಯಾವುದೇ ತಂಡದ ಪರ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಬಂದ ಅತ್ಯಧಿಕ ಮೊತ್ತವಾಗಿದೆ. ನ್ಯೂಜಿಲೆಂಡ್‌ ವಿರುದ್ಧ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್‌ ಅಜಂ ಮತ್ತು ಮೊಹಮ್ಮದ್‌ ರಿಜ್ವಾನ್‌ 105 ರನ್‌ ಗಳಿಸಿದ್ದರು. ಇದು ಎರಡನೇ ಅತ್ಯುತ್ತಮ ಜೊತೆಯಾಟವಾಗಿದೆ.

ಟೂರ್ನಿಯ ಫೈನಲ್‌ ಪಂದ್ಯವು ನವೆಂಬರ್‌ 13ರಂದು ಮೆಲ್ಬರ್ನ್‌ನಲ್ಲಿ ನಡೆಯಲಿದೆ. ಈಗಾಗಲೇ ಫೈನಲ್‌ ತಲುಪಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಭಾರತ ವೈಫಲ್ಯ
ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಭಾರತ ಪರ ಇನಿಂಗ್ಸ್‌ ಆರಂಭಿಸಿದಉಪನಾಯಕ ಕೆ.ಎಲ್‌.ರಾಹುಲ್‌ ಕೇವಲ 5 ರನ್‌ ಗಳಿಸಿ ಔಟಾದರೆ, ನಾಯಕ ರೋಹಿತ್‌ ಶರ್ಮಾ 27 ಗಳಿಸಿದ್ದಾಗ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಸ್ಫೋಟಕ ಬ್ಯಾಟರ್‌ಸೂರ್ಯಕುಮಾರ್‌ ಯಾದವ್‌ (14) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ, ರನ್‌ ಗಳಿಕೆಗೆ ಕಡಿವಾಣ ಬಿದ್ದಿತು.

ಈ ವೇಳೆ ವಿಕೆಟ್‌ ಬೀಳದಂತೆ ಎಚ್ಚರಿಕೆಯ ಆಟವಾಡಿದ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ, ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 61 ರನ್‌ ಕೂಡಿಸಿದರು. ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಿದ ಇವರಿಬ್ಬರೂ ನಿಧಾನವಾಗಿ ರನ್‌ ಗತಿ ಹೆಚ್ಚಿಸುವ ಪ್ರಯತ್ನ ಮಾಡಿದರು.

ಈ ಟೂರ್ನಿಯಲ್ಲಿ 4ನೇ ಅರ್ಧಶತಕ ಗಳಿಸಿದ ಕೊಹ್ಲಿ, 40 ಎಸೆತಗಳಲ್ಲಿ 50 ರನ್‌ ಗಳಿಸಿದರೆ, ಪಾಂಡ್ಯ 33 ಎಸೆತಗಳಿಂದ 63 ರನ್ ಬಾರಿಸಿದರು. ಹೀಗಾಗಿ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಬಳಿಕ ಬೌಲಿಂಗ್‌ನಲ್ಲಿಯೂ ವೈಫಲ್ಯ ಅನುಭವಿಸಿದ ಭಾರತ, ಎದುರಾಳಿ ತಂಡದ ಒಂದೇ ಒಂದು ವಿಕೆಟ್‌ ಸಹ ಪಡೆಯದೆ ಮುಖಭಂಗ ಅನುಭವಿಸಿತು.

ಇಂಗ್ಲೆಂಡ್‌ ಪರಕ್ರಿಸ್‌ ಜೋರ್ಡನ್‌ ಮೂರು ವಿಕೆಟ್‌ ಪಡೆದರೆ, ಕ್ರಿಸ್‌ ವೋಕ್ಸ್‌, ಆದಿಲ್‌ ರಶೀದ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.