ADVERTISEMENT

ಸೂರ್ಯಕುಮಾರ್ ಅಜೇಯ ಶತಕ; ಕಿವೀಸ್ ಗೆಲುವಿಗೆ 192 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2022, 8:57 IST
Last Updated 20 ನವೆಂಬರ್ 2022, 8:57 IST
ಸೂರ್ಯಕುಮಾರ್ ಕುಮಾರ್
ಸೂರ್ಯಕುಮಾರ್ ಕುಮಾರ್   

ಮೌಂಟ್‌ ಮಾಂಗನೂಯಿ: ಸೂರ್ಯಕುಮಾರ್ ಯಾದವ್ ಅಜೇಯ ಶತಕದ ನೆರವಿನಿಂದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಆರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ.

ಈ ನಡುವೆ ಕಿವೀಸ್ ಬೌಲರ್ ಟಿಮ್ ಸೌಥಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ಮೌಂಟ್‌ ಮಾಂಗನೂಯಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಕೇವಲ 49 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು.

ADVERTISEMENT

ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಭಾರತದ ಆರಂಭ ಉತ್ತಮವಾಗಿರಲಿಲ್ಲ. ರಿಷಭ್ ಪಂತ್ 13 ಎಸೆತಗಳಲ್ಲಿ 6 ರನ್ ಗಳಿಸಿ ಔಟ್ ಆದರು. ಇಶಾನ್ ಕಿಶನ್ 36 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಈ ನಡುವೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಬಳಿಕ ಪಂದ್ಯ ಪುನರಾರಂಭಗೊಂಡಾಗ ಸೂರ್ಯಕುಮಾರ್ ಅಬ್ಬರಿಸಿದರು.

ಕಿವೀಸ್ ಬೌಲರ್‌ಗಳನ್ನು ದಂಡಿಸಿದ ಸೂರ್ಯಕುಮಾರ್ 51 ಎಸೆತಗಳಲ್ಲಿ 111 ರನ್ ಗಳಿಸಿ ಔಟಾಗದೆ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಹಾಗೂ 11 ಬೌಂಡರಿಗಳು ಸೇರಿದ್ದವು.

ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ತಲಾ 13 ರನ್ ಗಳಿಸಿದರು. ದೀಪಕ್ ಹೂಡಾ ಹಾಗೂ ವಾಷಿಂಗ್ಟನ್ ಸುಂದರ್ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ನ್ಯೂಜಿಲೆಂಡ್ ಪರ ಟಿಮ್ ಸೌಥಿ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.