ADVERTISEMENT

WTC Final: ಟೀಮ್ ಇಂಡಿಯಾ ಆಡುವ ಬಳಗ ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜೂನ್ 2021, 15:37 IST
Last Updated 17 ಜೂನ್ 2021, 15:37 IST
ಅಜಿಂಕ್ಯ ರಹಾನೆ ಹಾಗೂ ವಿರಾಟ್ ಕೊಹ್ಲಿ
ಅಜಿಂಕ್ಯ ರಹಾನೆ ಹಾಗೂ ವಿರಾಟ್ ಕೊಹ್ಲಿ   

ಸೌತಾಂಪ್ಟನ್: ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ಫೈನಲ್ (ಡಬ್ಲ್ಯುಟಿಸಿ) ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಡುವ ಬಳಗವನ್ನು ಪ್ರಕಟಿಸಲಾಗಿದೆ.

ಜೂನ್ 18ರಿಂದ (ಶುಕ್ರವಾರ) ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ.

ಭಾರತದ ಪ್ಲೇಯಿಂಗ್ ಇಲೆವೆನ್ ಅನ್ನು ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸಕ್ಕೆ ಅಲಭ್ಯರಾಗಿದ್ದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆರಂಭಿಕರಾಗಿ ಅನುಭವಿ ರೋಹಿತ್ ಶರ್ಮಾ ಜೊತೆಗೆ ಯುವ ಆಟಗಾರ ಶುಭಮನ್ ಗಿಲ್ ಪ್ಯಾಡ್ ಕಟ್ಟಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ಉಪ ನಾಯಕ ಅಜಿಂಕ್ಯ ರಹಾನೆ ಬಲ ತುಂಬಲಿದ್ದಾರೆ. ರಿಷಬ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಭಾರತ ತಂಡವು ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳು ಸೇರಿದಂತೆ ಒಟ್ಟು ಐವರು ಬೌಲರ್‌ಗಳ ರಣತಂತ್ರದೊಂದಿಗೆ ಕಣಕ್ಕಿಳಿಯಲಿದೆ. ಇದರಿಂದಾಗಿ ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರು ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ತ್ರಿವಳಿ ವೇಗಿಗಳು.

ಏತನ್ಮಧ್ಯೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಐತಿಹಾಸಿಕ ಗೆಲುವಿಗೆ ಕಾರಣವಾಗಿರುವ ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಹನುಮ ವಿಹಾರಿ ಮುಂತಾದ ಆಟಗಾರರು ಅವಕಾಶ ವಂಚಿತರಾಗಿದ್ದಾರೆ.

ಟೀಮ್ ಇಂಡಿಯಾ ಆಡುವ ಬಳಗ ಇಂತಿದೆ:
1. ವಿರಾಟ್ ಕೊಹ್ಲಿ (ನಾಯಕ)
2. ರೋಹಿತ್ ಶರ್ಮಾ
3. ಶುಭಮನ್ ಗಿಲ್
4. ಚೇತೇಶ್ವರ್ ಪೂಜಾರ್
5. ಅಜಿಂಕ್ಯ ರಹಾನೆ (ಉಪ ನಾಯಕ)
6. ರಿಷಬ್ ಪಂತ್ (ವಿಕೆಟ್ ಕೀಪರ್)
7. ರವೀಂದ್ರ ಜಡೇಜ
8. ರವಿಚಂದ್ರನ್ ಅಶ್ವಿನ್
9. ಜಸ್‌ಪ್ರೀತ್ ಬೂಮ್ರಾ
10. ಇಶಾಂತ್ ಶರ್ಮಾ
11. ಮೊಹಮ್ಮದ್ ಶಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.