ADVERTISEMENT

IND vs SA Test: ಬೂಮ್ರಾ ಬೌಲಿಂಗ್ ಬೆರಗು; ಸಾಧಾರಣ ಮೊತ್ತಕ್ಕೆ ಕುಸಿದ ದ.ಆಫ್ರಿಕಾ

ಮಧು ಜವಳಿ
Published 15 ನವೆಂಬರ್ 2025, 0:28 IST
Last Updated 15 ನವೆಂಬರ್ 2025, 0:28 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ</p></div>

ಜಸ್‌ಪ್ರೀತ್ ಬೂಮ್ರಾ

   

(ಚಿತ್ರ ಕೃಪೆ: ಬಿಸಿಸಿಐ)

ಕೋಲ್ಕತ್ತ: ಬಹಳ ದಿನಗಳ ನಂತರ ಜಸ್‌ಪ್ರೀತ್ ಬೂಮ್ರಾ ಅವರ ವೈಭವ ಕಣ್ಮನ ಸೆಳೆಯಿತು. ಅವರು ಈಡನ್ ಗಾರ್ಡನ್‌ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದರು.

ADVERTISEMENT

ಈ ವರ್ಷದ ಆರಂಭದಲ್ಲಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ ನಂತರ ಅವರ ಸುತ್ತ ‘ಕಾರ್ಯೋತ್ತಡ ನಿರ್ವಹಣೆ’ ಸೂತ್ರವು ಸುತ್ತುತ್ತಿದೆ. 31 ವರ್ಷದ ಬೂಮ್ರಾ ಅವರಿಗೆ ನಿಯಮಿತ ವಿಶ್ರಾಂತಿ ನೀಡುವ ಜೊತೆಗೆ ಪ್ರಮುಖ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಲಾಗುತ್ತಿದೆ. ಅವರನ್ನು ಜತನದಿಂದ ಕಾಪಿಟ್ಟುಕೊಳ್ಳ ಲಾಗುತ್ತಿದೆ. ಆದರೆ ಲಭಿಸುವ ಅವಕಾಶ ಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದು ಬೂಮ್ರಾ ಅವರಂತಹ ಉತ್ತಮ ಆಟಗಾರನಿಗಷ್ಟೇ ಸಾಧ್ಯ.

ಶುಕ್ರವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ (27ಕ್ಕೆ5) ಬಿರುಗಾಳಿಗೆ ದಕ್ಷಿಣ ಆಫ್ರಿಕಾ ಪಡೆ ತತ್ತರಿಸಿತು. 51ನೇ ಟೆಸ್ಟ್ ಪಂದ್ಯವಾಡಿದ ಗುಜರಾತ್ ವೇಗಿ 16ನೇ ಪಂಚಗೊಂಚಲು ಸಾಧನೆ ಮಾಡಿದರು. ಅವರಿಗೆ ಮೊಹಮ್ಮದ್ ಸಿರಾಜ್ (47ಕ್ಕೆ2) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (36ಕ್ಕೆ2) ಜೊತೆ ನೀಡಿದರು. ಇದರಿಂದಾಗಿ ಪ್ರವಾಸಿ ಪಡೆಯು 55 ಓವರ್‌ಗಳಲ್ಲಿ 159 ರನ್ ಗಳಿಸಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡದ ಯಶಸ್ವಿ ಜೈಸ್ವಾಲ್ (12 ರನ್) ಅವರ ವಿಕೆಟ್ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಅವರ ಪಾಲಾಯಿತು. ಮಂದಬೆಳಕಿನ ಕಾರಣಕ್ಕೆ ಪಂದ್ಯ ಸ್ಥಗಿತವಾದಾಗ ತಂಡವು 1 ವಿಕೆಟ್‌ಗೆ 37 ರನ್ ಗಳಿಸಿತ್ತು. ಕೆ.ಎಲ್. ರಾಹುಲ್ (ಬ್ಯಾಟಿಂಗ್ 13) ಮತ್ತು ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್ 6) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌ಗಳಿಗೆ ಒಂದಷ್ಟು ನೆರವಾಗುವ ಲಕ್ಷಣಗಳಿದ್ದ ಪಿಚ್‌ನಲ್ಲಿ ಸೀಮ್ ಚಲನೆ ವೇಗಿಗಳಿಗೆ ಖುಷಿ ಕೊಟ್ಟರೆ. ಚೆಂಡು ತಿರುವು ಪಡೆಯುವ ಲಕ್ಷಣಗಳು ಸ್ಪಿನ್ನರ್‌ಗಳಿಗೆ ವಿಶ್ವಾಸ ಕುದುರಿಸಿದ್ದವು. ವೇಗಿಗಳು ರಿವರ್ಸ್ ಸ್ವಿಂಗ್ ಕೂಡ ಪ್ರಯೋಗಿಸಿ ಯಶಸ್ವಿಯಾದರು. ಆದರೆ ಬ್ಯಾಟರ್‌ಗಳು ಆಡದಷ್ಟು ಕೆಟ್ಟ ಪಿಚ್ ಅದಾಗಿರಲಿಲ್ಲ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಇನಿಂಗ್ಸ್‌ನ ಮೊದಲ 50 ನಿಮಿಷಗಳ ಕಾಲ, ದಕ್ಷಿಣ ಆಫ್ರಿಕಾದ ಆರಂಭಿಕ ಜೋಡಿ ಏಡನ್ ಮರ್ಕರಂ ಮತ್ತು ರಿಯಾನ್ ರಿಕೆಲ್ಟನ್ ಅವರು ಬೂಮ್ರಾ ಮತ್ತು ಸಿರಾಜ್ ಇಬ್ಬರನ್ನೂ ಆತ್ಮವಿಶ್ವಾಸ ದಿಂದ ಎದುರಿಸಿದರು. ಅವರು ಬೂಮ್ರಾ ಎಸೆತಗಳನ್ನು ಎಚ್ಚರಿಕೆ ಹಾಗೂ ಏಕಾಗ್ರತೆಯಿಂದ ಆಡಿದರು. ಇವರಿಬ್ಬರೂ ಸಿರಾಜ್ ಅವರನ್ನು ದಂಡಿಸಿದರು. ಅವರ ಮೊದಲ ಮೂರು ಓವರ್‌ಗಳಲ್ಲಿ 25 ರನ್ ಗಳಿಸಿದರು.

ನಾಯಕ ಶುಭಮನ್ ಗಿಲ್ ಕಣಕ್ಕಿಳಿಸಿದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜ ಅವರ ಎಸೆತಗಳಲ್ಲಿ ಬ್ಯಾಟರ್‌ಗಳು ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಮೊದಲ ವಿಕೆಟ್ ಗಳಿಸುವ ಭಾರತದ ಬೌಲರ್‌ಗಳ ಪ್ರಯತ್ನ ನಿರಂತರವಾಗಿತ್ತು.

ಕ್ರೀಡಾಂಗಣದಲ್ಲಿ ಸೇರಿದ್ದ 36 ಸಾವಿರ ಪ್ರೇಕ್ಷಕರು ಕಾದಿದ್ದ ಕ್ಷಣ ಬಂದೇಬಿಟ್ಟಿತು. ಬೂಮ್ರಾ ಎಸೆತದ ವೇಗವನ್ನು ಅರಿಯುವಲ್ಲಿ ಎಡವಿದ ರಿಕೆಲ್ಟನ್ ಕ್ಲೀನ್‌ಬೌಲ್ಡ್ ಆದರು. ತಮ್ಮ ಇನ್ನೊಂದು ಓವರ್‌ನಲ್ಲಿ ಮರ್ಕರಂ ಅವರಿಗೂ ಪೆವಿಲಿಯನ್ ದಾರಿ ತೋರಿಸಿದರು. ಅವರ ಸ್ವಿಂಗ್ ಎಸೆತವನ್ನು ಕೆಣಕಿದ ಮರ್ಕರಂ (31 ರನ್) ಕೀಪರ್ ರಿಷಭ್ ಪಂತ್ ಡೈವ್ ಮಾಡಿ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಈ ಎರಡು ವಿಕೆಟ್‌ಗಳ ಪತನವು ಭಾರತದ ಪಾಳೆಯದಲ್ಲಿ ಹುರುಪು ಮೂಡಿಸಿದವು. ಬೌಲರ್‌ಗಳ ಪಾರುಪತ್ಯ ಆರಂಭವಾಯಿತು.

ಸ್ಪಿನ್ನರ್ ಕುಲದೀಪ್ ಯಾದವ್ ಸ್ಪಿನ್ ಬಲೆಗೆ ಪ್ರವಾಸಿ ತಂಡದ ನಾಯಕ ತೆಂಬಾ ಬವುಮಾ ಬಿದ್ದರು. ಒಂದು ಕಡೆಯಿಂದ ಬೂಮ್ರಾ ಅವರ ಇನ್‌ಸ್ವಿಂಗಿಂಗ್ ಯಾರ್ಕರ್, ಲೆಂಗ್ತ್ ಎಸೆತಗಳು ಬೆಂಕಿಯುಂಡೆಗಳಂತೆ ಅಪ್ಪಳಿಸಿದವು. ಇನ್ನೊಂದೆಡೆ ಸಿರಾಜ್ ಅವರ ನಿಖರ ದಾಳಿ ರಂಗೇರಿತು. ಕುಲದೀಪ್ ಮತ್ತುಳಿದ ಸ್ಪಿನ್ನರ್‌ಗಳೂ ಪ್ರಭಾವಿಗಳಾದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಸಾಧಾರಣ ಮೊತ್ತಕ್ಕೆ ಕುಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.