ADVERTISEMENT

ಮಹಿಳಾ ಟಿ20 ವಿಶ್ವಕಪ್‌ ಸೆಮಿಫೈನಲ್: ಭಾರತಕ್ಕೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2023, 14:37 IST
Last Updated 23 ಫೆಬ್ರುವರಿ 2023, 14:37 IST
ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಅಲಿಸ್ಸಾ ಹೀಲಿ ಮತ್ತು ಬೆತ್‌ ಮೂನಿ ರನ್‌ಗಾಗಿ ಓಡುತ್ತಿರುವುದು (ಚಿತ್ರಕೃಪೆ: @T20WorldCup)
ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಅಲಿಸ್ಸಾ ಹೀಲಿ ಮತ್ತು ಬೆತ್‌ ಮೂನಿ ರನ್‌ಗಾಗಿ ಓಡುತ್ತಿರುವುದು (ಚಿತ್ರಕೃಪೆ: @T20WorldCup)   

ಕೇಪ್‌ಟೌನ್‌: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ, ಬೆತ್‌ ಮೂನಿ ಗಳಿಸಿದ ಅರ್ಧಶತಕ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌ ಬಿರುಸಿನ ಬ್ಯಾಟಿಂಗ್‌ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 172 ರನ್ ಗಳಿಸಿದೆ.

ಇನಿಂಗ್ಸ್ ಆರಂಭಿಸಿದ ಅಲಿಸ್ಸಾ ಹೀಲಿ (25) ಮತ್ತು ಬೆತ್‌ ಮೂನಿ ಮೊದಲ ವಿಕೆಟ್‌ಗೆ 52 ರನ್ ಕಲೆ ಹಾಕಿದರು. ಮೂನಿ 37 ಎಸೆತಗಳಲ್ಲಿ 54 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ADVERTISEMENT

11.5 ಓವರ್‌ಗಳಲ್ಲಿ 2 ವಿಕೆಟ್‌ಗೆ 88 ರನ್‌ ಆಗಿದ್ದಾಗ ಜೊತೆಯಾದ ಲ್ಯಾನಿಂಗ್‌ ಹಾಗೂ ಆ್ಯಶ್ಲೇ ಗಾರ್ಡನರ್‌ ಜೋಡಿ ಲೀಲಾಜಾಲವಾಗಿ ಬ್ಯಾಟ್‌ ಬೀಸಿತು. ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕೇವಲ 36 ಎಸೆತಗಳಲ್ಲಿ 53 ರನ್‌ ಕಲೆ ಹಾಕಿತು. ಆರಂಭದಿಂದಲೇ ಬೀಸಾಟಕ್ಕೆ ಒತ್ತು ಕೊಟ್ಟ ಆ್ಯಶ್ಲೇ ಕೇವಲ 18 ಎಸೆತಗಳಲ್ಲಿ 31 ರನ್‌ ಸಿಡಿಸಿದರು.

ಕೊನೆವರೆಗೂ ಆಡಿದ ಲ್ಯಾನಿಂಗ್‌, ರಕ್ಷಣಾತ್ಮಕವಾಗಿ ಆಡುತ್ತಲೇ ರನ್‌ ಗತಿ ಹೆಚ್ಚಿಸಿದರು. ಅವರು 34 ಎಸೆತಗಳಲ್ಲಿ ಅಜೇ 49 ರನ್ ಕಲೆಹಾಕಿದರು. ಹೀಗಾಗಿ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸಿದೆ.

ಭಾರತ ಪರ ಶಿಖಾ ಪಾಂಡೆ ಎರಡು ಹಾಗೂ ರಾಧಾ ಯಾದವ್‌, ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್‌ ಕಿತ್ತರು. ಪ್ರಮುಖ ಬೌಲರ್‌ ರೇಣುಕಾ ಸಿಂಗ್‌ 4 ಓವರ್‌ಗಳಲ್ಲಿ 41ರನ್‌ ಬಿಟ್ಟುಕೊಟ್ಟು ದುಬಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.