
ಭಾರತ ಎ ತಂಡದ ಸ್ಪಿನ್ನರ್ ತನುಷ್ ಕೋಟ್ಯಾನ್
– ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್
ಬೆಂಗಳೂರು: ಸ್ಪಿನ್ ಬೌಲರ್‌ಗಳಿಗೆ ಅಷ್ಟೇನೂ ನೆರವು ಸಿಗದ ಅಂಗಣದಲ್ಲಿಯೂ ಆಫ್‌ಸ್ಪಿನ್ನರ್ ತನುಷ್ ಕೋಟ್ಯಾನ್ ಮೋಡಿ ಮಾಡಿದರು. ದಕ್ಷಿಣ ಆಫ್ರಿಕಾ ಎ ತಂಡವು ಗುರುವಾರ ಆರಂಭವಾದ ‘ಟೆಸ್ಟ್’ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸುವುದನ್ನೂ ತಡೆದರು.
ನಗರದ ಹೊರವಲಯದಲ್ಲಿರುವ ಬಿಸಿಸಿಐ–ಸಿಒಇ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ರಿಷಭ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ದಿನದಾಟದ ಒಂದು ಹಂತದಲ್ಲಿ ಬ್ಯಾಟರ್‌ಗಳು ಪೂರ್ಣವಾಗಿ ಹಿಡಿತ ಸಾಧಿಸುವಂತೆ ಕಂಡಿದ್ದರು. ಆದರೆ ತನುಷ್ (83ಕ್ಕೆ4) ತಮ್ಮ ಕೈಚಳಕದ ಮೂಲಕ ರನ್ ಗಳಿಕೆಗೆ ಕಡಿವಾಣ ಹಾಕಿದರು. ಅದರಿಂದಾಗಿ ಪ್ರವಾಸಿ ತಂಡವು ದಿನದಾಟದ ಮುಕ್ತಾಯಕ್ಕೆ 85.2 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 299 ರನ್ ಗಳಿಸಿತು.
ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿಯೇ ಲೆಸೆಗೊ ಸೆನೆಕ್ವಾನೆ ವಿಕೆಟ್ ಪಡೆಯುವಲ್ಲಿ ಅನ್ಷುಲ್ ಕಂಬೋಜ್ ಯಶಸ್ವಿಯಾದರು. ಆದರೆ ಜೋರ್ಡಾನ್ ಹರ್ಮನ್ (71; 140ಎ, 4X8) ಮತ್ತು ಜುಬೇರ್ ಹಮ್ಜಾ (66; 109ಎ, 4X9, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಿದರು. ಪಿಚ್ ಕೂಡ ಬ್ಯಾಟಿಂಗ್ ಸ್ನೇಹಿಯಾಗಿತ್ತು. ಇದರಿಂದಾಗಿ ಪಂತ್ ಫೀಲ್ಡಿಂಗ್ ನಿರ್ಧಾರ ತಪ್ಪಾಯಿತೇನೋ ಎಂಬ ಸಂಶಯ ಕೂಡ ಸುಳಿದಿತ್ತು.ಆದರೂ ಎದೆಗುಂದದ ರಿಷಭ್ ಬೌಲರ್‌ಗ ನಿಯೋಜನೆ ಮತ್ತು ಬದಲಾವಣೆಯಲ್ಲಿ ಚಾಣಾಕ್ಷತೆ ಮೆರೆದರು. ಇದರಿಂದಾಗಿ ಊಟದ ವಿರಾಮದ ನಂತರ ಫಲ ಸಿಕ್ಕಿತು.
ಗುರ್ನೂರ್ ಬ್ರಾರ್ ಹಾಕಿದ ಓವರ್‌ನಲ್ಲಿ ಜುಬೇರ್ ಅವರ ಕ್ಯಾಚ್ ಪಡೆದ ವಿಕೆಟ್‌ಕೀಪರ್ ರಿಷಭ್ ಸಂಭ್ರಮಿಸಿದರು. ಇದರ ನಂತರ ಮುಂಬೈ ಹುಡುಗ ತನುಷ್ ಬೇಟೆ ಆರಂಭವಾಯಿತು. ತಮ್ಮ ಎರಡನೇ ಸ್ಪೆಲ್‌ನಲ್ಲಿ ಜೋರ್ಡನ್ ಹರ್ಮನ್ ಮತ್ತು ರುಬಿನ್ ಹರ್ಮನ್ (54; 87ಎ) ಸಹೋದರರ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಜೋರ್ಡನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ತನುಷ್ ಅವರು, ರುಬಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಪ್ರವಾಸಿ ಬಳಗದ ನಾಯಕ ಮಾರ್ಕಸ್ ಎಕರ್‌ಮನ್ (18 ರನ್) ಅವರಿಗೂ ಪೆವಿಲಿಯನ್ ದಾರಿ ತೋರಿಸುವಲ್ಲಿ ತನುಷ್ ಯಶಸ್ವಿಯಾದರು. ದಿನದ ಕೊನೆಯ ಅವಧಿಯಲ್ಲಿ ಪ್ರೆನೆಲನ್ ಸುಬರೇಯನ್ ಅವರ ವಿಕೆಟ್ ಉರುಳಿಸುವಲ್ಲಿಯೂ ತನುಷ್ ಮೇಲುಗೈ ಸಾಧಿಸಿದರು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ಎ: 85.2 ಓವರ್‌ಗಳಲ್ಲಿ 9ಕ್ಕೆ299 (ಜೋರ್ಡಾನ್ ಹರ್ಮನ್ 71, ಝುಬೇರ್ ಹಂಜಾ 66, ರುಬಿನ್ ಹರ್ಮನ್ 54, ಟಿಯಾನ್ ವ್ಯಾನ್ ವಿವುರ್ನ್ 46, ಮಾನವ್ ಸುತಾರ್ 62ಕ್ಕೆ2, ತನುಷ್ ಕೋಟ್ಯಾನ್ 83ಕ್ಕೆ4) ವಿರುದ್ಧ ಭಾರತ ಎ.
ಸುಮಾರು ಮೂರು ತಿಂಗಳುಗಳ ನಂತರ ಕ್ರಿಕೆಟ್ ಅಂಗಳಕ್ಕೆ ಮರಳಿರುವ ರಿಷಭ್ ಪಂತ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ದಕ್ಷಿಣ ಆಫ್ರಿಕಾ ಎ ತಂಡದ ಎದುರಿನ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. 28 ವರ್ಷದ ಪಂತ್ ಅವರು ವಿಕೆಟ್‌ಕೀಪಿಂಗ್ ಮಾಡುವಾಗ ತಮ್ಮ ಚಟಾಕಿ ಹಾರಿಸುವ ಪ್ರವೃತ್ತಿಯನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಚುರುಕಾಗಿ ಡೈವ್ ಮತ್ತು ಕ್ಯಾಚಿಂಗ್ ಮಾಡುವಲ್ಲಿಯೂ ಯಶಸ್ವಿಯಾದರು. ಬೌಲಿಂಗ್ ಮತ್ತು ಫೀಲ್ಡಿಂಗ್ ನಿಯೋಜನೆಯಲ್ಲಿ ಚಾಣಾಕ್ಷತೆ ಮೆರೆದರು. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ಅವರ ಪಾದಕ್ಕೆ ಅಪ್ಪಳಿಸಿ ಗಾಯಗೊಂಡಿದ್ದರು. ಅದರ ನಂತರ ದೀರ್ಘ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದು ಮರಳಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಎದುರು ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡಲು ಸಿದ್ಧರಾಗುತ್ತಿದ್ದಾರೆ.

ಮುಂಬೈ ತಂಡದಲ್ಲಿ ಅಜಿಂಕ್ಯ ರಹಾನೆ ಮತ್ತಿತರ ಅನುಭವಿಗಳಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವುದರಿಂದ ನನ್ನ ಕೌಶಲ ಬಹಳ ಸುಧಾರಣೆಯಾಗಿದೆ. ಭಾರತ ಎ ತಂಡದಲ್ಲಿ ಕೋಚ್ ಸುನೀಲ್ ಜೋಶಿ ಅವರ ಮಾರ್ಗದರ್ಶನದಿಂದ ನನಗೆ ಅಪಾರ ನೆರವಾಯಿತು.–ತನುಷ್ ಕೋಟ್ಯಾನ್, ಭಾರತ ಎ ತಂಡದ ಆಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.