ADVERTISEMENT

ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯ: ಆತ್ಮವಿಶ್ವಾಸದಲ್ಲಿ ಭಾರತ ತಂಡ

ಪಿಟಿಐ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
<div class="paragraphs"><p>ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ವರುಣ್‌ ಚಕ್ರವರ್ತಿ</p></div>

ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ವರುಣ್‌ ಚಕ್ರವರ್ತಿ

   

ಕೃಪೆ: ಪಿಟಿಐ

ಮೆಲ್ಬರ್ನ್‌: ನಾಯಕ ಸೂರ್ಯಕುಮಾರ್ ಯಾದವ್ ಅವರು ಲಯಕ್ಕೆ ಮರಳಿರುವುದರಿಂದ ಭಾರತ ತಂಡಶುಕ್ರವಾರ ಎರಡನೇ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು  ಹೆಚ್ಚಿನ ವಿಶ್ವಾಸದೊಡನೆ ಎದುರಿಸಲಿದೆ.

ADVERTISEMENT

ಅಭಿಷೇಕ್ ಶರ್ಮಾ, ತಿಲಕ್‌ ವರ್ಮಾ ಮತ್ತು ಶಿವಂ ದುಬೆ ಅಂಥ ಪವರ್‌ಹಿಟ್ಟರ್‌ಗಳ ಮೂಲಕ ಭಾರತದ ಯುವ ಪಡೆ ಇತ್ತೀಚಿನ ವರ್ಷಗಳಲ್ಲಿ ಟಿ20 ಕ್ರಿಕೆಟ್‌ನ ವಾಖ್ಯಾನ ಬದಲಾಯಿಸಿದೆ.

ಕೆನ್‌ಬೆರಾದಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯ ಪಾಲಾಗಿತ್ತು. ಆದರೆ ಮಳೆಗಿಂತ ಮೊದಲು ‘ಬೆಳಗಿದ’ ಸೂರ್ಯ ಕುಮಾರ್ (ಅಜೇಯ 39, 24ಎ) ಸತತ ವೈಫಲ್ಯಗಳಿಂದ ಹೊರಬರುವ ಸಂಕೇತ ರವಾನಿಸಿದ್ದಾರೆ. ಜೋಶ್ ಹ್ಯಾಜಲ್‌ವುಡ್‌ ಬೌಲಿಂಗ್‌ನಲ್ಲಿ ಅವರು ಎತ್ತಿದ ಸಿಕ್ಸರ್‌ ನೆನಪಿನಲ್ಲಿ ಉಳಿಯುವಂಥದ್ದು. ಭಾರತ ಕೇವಲ 9.4 ಓವರುಗಳಲ್ಲಿ 97 ರನ್ ಬಾಚಿತ್ತು. ನಾಯಕನಿಗೆ, ಆರಂಭ ಆಟಗಾರ ಮತ್ತು ಉಪನಾಯಕ ಶುಭಮನ್ ಗಿಲ್ (ಅಜೇಯ 37, 20ಎ) ಸಮರ್ಥ ಬೆಂಬಲ ನೀಡಿದ್ದರು.

ಶುಕ್ರವಾರದ ಪಂದ್ಯಕ್ಕೂ ಮಳೆಯಾಗುವ ಮುನ್ಸೂಚನೆಯಿಂದೆ. ಆದರೆ ಮೊದಲ ಪಂದ್ಯದಲ್ಲಿ ಆಡಿದ ಆಟದಿಂದ ಭಾರತ ತಂಡ ಹೆಚ್ಚಿನ ಉಮೇದಿನಲ್ಲಿದೆ.

ಸೂರ್ಯ ಅವರು ಆಡಿದ ರೀತಿ ತಂಡದಲ್ಲಿ ಸಂತಸ ಮೂಡಿಸಿದೆ. ‘ಹೈ ರಿಸ್ಕ್‌, ಹೈ ರಿವಾರ್ಡ್‌’ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿರುವ ಕೋಚ್‌ ಗೌತಮ್ ಗಂಭೀರ್‌ ಅವರು ತಮ್ಮ ತಂಡ ಪ್ರತಿಯೊಂದು ಪಂದ್ಯದಲ್ಲಿ 250–260ಕ್ಕಿಂತ ಹೆಚ್ಚು ಮೊತ್ತ ಗಳಿಸಬೇಕೆಂದು ಬಯಸುವವರು. ಮುಂದಿನ ವರ್ಷದ ಫೆಬ್ರುವರಿ– ಮಾರ್ಚ್‌ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್‌ಗೆ ತಂಡ ಸಜ್ಜುಗೊಳಿಸುವ ಗುರಿಯಲ್ಲಿ ಅವರು ಇದ್ದಾರೆ.

ಮಳೆಯ ಪರಿಣಾಮ ಭಾರತಕ್ಕೆ ಬೌಲಿಂಗ್ ಅವಕಾಶ ದೊರೆಯಲಿಲ್ಲ. ಆದರೆ ಜಸ್‌ಪ್ರೀತ್ ಬೂಮ್ರಾ ಅವರ ಗುಣಮಟ್ಟದ ವೇಗದ ಬೌಲಿಂಗ್‌ ಜೊತೆಗೆ, ವರುಣ್‌ ಚಕ್ರವರ್ತಿ, ಕುಲದೀಪ್‌ ಯಾದವ್‌, ಅಕ್ಷರ್ ಪಟೇಲ್ ಅವರ ಸ್ಪಿನ್‌ ವೈವಿಧ್ಯ ಎದುರಾಳಿಗಳಿಗೆ ಸವಾಲಾಗಬಲ್ಲದು.

ಬೀಸಾಟವಾಡುವ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್‌ ಹೆಡ್‌ ಅವರನ್ನು ನಿಯಂತ್ರಿಸುವ ಸವಾಲೂ ತಂಡದ ಮುಂದಿದೆ. ಇವರಿಬ್ಬರು ಈ ಹಿಂದೆ ಭಾರತ ತಂಡವನ್ನು ಸಾಕಷ್ಟು ಸಲ ಕಾಡಿದ್ದಾರೆ.

ಆಸ್ಟ್ರೇಲಿಯಾ ತಂಡದ ಟಿ20 ಟೆಂಪ್ಲೆಟ್‌ ಸಹ ಹೆಚ್ಚುಕಮ್ಮಿ ಭಾರತದ ಮಾದರಿಯಲ್ಲೇ ಇದೆ. ಹೆಡ್‌, ಮಾರ್ಷ್‌, ಮಾರ್ಕಸ್‌ ಸ್ಟೊಯಿನಿಸ್‌, ಟಿಮ್‌ ಡೇವಿಡ್‌, ಜೋಶ್‌ ಇಂಗ್ಲಿಸ್‌ ಕೂಡ ಭರ್ಜರಿ ಆಟ ಆಡಬಲ್ಲವರು.

ಆದರೆ ವೇಗದ ದಾಳಿಯ ಅಸ್ತ್ರವಾದ ಮಿಚೆಲ್‌ ಸ್ಟಾರ್ಕ್ ಟಿ20 ಮಾದರಿಯಿಂದ ನಿವೃತ್ತರಾಗಿರುವುದು, ಪ್ಯಾಟ್‌ ಕಮಿನ್ಸ್‌ ಗಾಯದಿಂದ ಚೇತರಿಕೆಯಲ್ಲಿರುವ ಕಾರಣ ತಂಡದ ಬೌಲಿಂಗ್ ಕೊಂಚ ದುರ್ಬಲವಾದಂತೆ ಕಾಣುತ್ತಿದೆ. ಹೀಗಾಗಿ ಅನುಭವಿ ಜೋಶ್‌ ಹ್ಯಾಜಲ್‌ವುಡ್‌ ಅವರ ಮೇಲೆಯೇ ಹೆಚ್ಚಿನ ಹೊಣೆಯಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.45.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.