ADVERTISEMENT

ICC Womens World Cup | Ind vs Ban: ಭಾರತ ತಂಡಕ್ಕೆ 110 ರನ್‌ಗಳ ಭರ್ಜರಿ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2022, 8:06 IST
Last Updated 22 ಮಾರ್ಚ್ 2022, 8:06 IST
ಚೆಂಡು ಹಿಡಿಯುವ ಪ್ರಯತ್ನದಲ್ಲಿ ಭಾರತ ತಂಡದ ಆಟಗಾರ್ತಿಯರು
ಚೆಂಡು ಹಿಡಿಯುವ ಪ್ರಯತ್ನದಲ್ಲಿ ಭಾರತ ತಂಡದ ಆಟಗಾರ್ತಿಯರು   

ಹ್ಯಾಮಿಲ್ಟನ್ (ನ್ಯೂಜಿಲೆಂಡ್): ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಭಾರತ ತಂಡವು 110 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಸ್ನೇಹ್‌ ರಾಣಾ ನಾಲ್ಕು ವಿಕೆಟ್‌ ಪಡೆದು ಮಿಂಚಿದರು.

ಭಾರತ ತಂಡ ನೀಡಿದ 230 ರನ್‌ಗಳ ಸವಾಲು ಬೆನ್ನತ್ತಿದ ಬಾಂಗ್ಲಾಗೆ ಬೌಲರ್‌ಗಳು ಆರಂಭದಿಂದಲೂ ಕಡಿವಾಣ ಹಾಕಿದರು. ಲತಾ (24) ಮತ್ತು ಸಲ್ಮಾ ಖಾತೂನ್‌ (32) ಉತ್ತಮ ಪ್ರದರ್ಶನದ ಭರವಸೆ ಸೃಷ್ಟಿಸಿದರಾದರೂ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. 40.3 ಓವರ್‌ಗಳಲ್ಲಿ ಬಾಂಗ್ಲಾ ಎಲ್ಲ ವಿಕೆಟ್‌ ಕಳೆದುಕೊಂಡು 119 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು.

ಭಾರತದ ಪರ ಸ್ನೇಹ್‌ ರಾಣಾ 4 ವಿಕೆಟ್‌ , ಜೂಲನ್‌ ಗೋಸ್ವಾಮಿ ಮತ್ತು ಪೂಜಾ ತಲಾ ಎರಡು ವಿಕೆಟ್‌ ಕಬಳಿಸಿದರು.

ADVERTISEMENT

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಸ್ಮೃತಿ ಮಂದಾನ (30) ಮತ್ತು ಶಫಾಲಿ ವರ್ಮಾ (42) ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 74 ರನ್‌ ದಾಖಲಾಯಿತು. ಆದರೆ, 14ನೇ ಓವರ್‌ನಿಂದ ಹಿಡಿತ ಸಾಧಿಸಿದ ಬಾಂಗ್ಲಾ ಬೌಲರ್‌ಗಳು ಎರಡು ಓವರ್‌ ಅಂತರದಲ್ಲಿ ಮೂರು ವಿಕೆಟ್‌ ಕಬಳಿಸಿ ಭಾರತಕ್ಕೆ ಆಘಾತ ನೀಡಿದರು. ನಾಯಕಿ ಮಿಥಾಲಿ ರಾಜ್‌ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು.

ಬಾಂಗ್ಲಾದ ರಿತು ಮೋನಿ 3 ವಿಕೆಟ್‌ ಉರುಳಿಸಿದರೆ, ನಹೀದ ಅಕ್ತರ್‌ 2 ವಿಕೆಟ್‌ ಪಡೆಯುವ ಮೂಲಕ ಭಾರತದ ರನ್‌ ಓಘಕ್ಕೆ ಕಡಿವಾಣ ಹಾಕಿದರು.

43ನೇ ಓವರ್‌ ವರೆಗೂ ಗಟ್ಟಿಯಾಗಿ ನಿಂತು ಆಡಿದ ಯಷ್ಟಿಕಾ ಭಾಟಿಯಾ 80 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ರಿಚಾ ಘೋಷ್ (26), ಪೂಜಾ (30) ಹಾಗೂ ಸ್ನೇಹ್‌ ರಾಣಾ (27) ತೋರಿದ ಉತ್ತಮ ಪ್ರದರ್ಶನದಿಂದ ತಂಡದ ಮೊತ್ತ 200ರ ಗಡಿ ದಾಟಿತು. ನಿಗದಿತ 50 ಓವರ್‌ಗಳಲ್ಲಿ ಭಾರತ 229 ರನ್‌ ಗಳಿಸಿತು.

ಭಾರತವು ವಿಶ್ವಕಪ್‌ ಟೂರ್ನಿಯಲ್ಲಿ ಈವರೆಗೂ ಮೂರು ಪಂದ್ಯಗಳಲ್ಲಿ ಗೆಲುವು ಹಾಗೂ ಮೂರು ಪಂದ್ಯಗಳಲ್ಲಿ ಸೋತಿದೆ. ಟೂರ್ನಿಯಲ್ಲಿ ಮುಂದಿನ ಹಂತಕ್ಕೇರಲು (ಸೆಮಿಫೈನಲ್) ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.