ಕ್ವಾಲಾಲಂಪುರ: ಬಿರುಸಿನ ಅರ್ಧಶತಕ ಗಳಿಸಿದ ಗೊಂಗಡಿ ತ್ರಿಷಾ ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡವು 19 ವರ್ಷದೊಳಗಿನವರ ಏಷ್ಯಾ ಮಹಿಳೆಯರ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.
ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಭಾರತದ ಯುವ ತಂಡವು 41 ರನ್‌ಗಳಿಂದ ಬಾಂಗ್ಲಾದೇಶ ಎದುರು ಗೆದ್ದಿತು.
ಟಾಸ್ ಗೆದ್ದ ಬಾಂಗ್ಲಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ತ್ರಿಷಾ (52; 47ಎ, 4X5, 6X2) ಅವರ ಅರ್ಧಶತಕದ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 117 ರನ್ ಗಳಿಸಿತು.
ತ್ರಿಷಾ ಅವರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ದೊಡ್ಡ ಮೊತ್ತಗಳು ದಾಖಲಾಗಲಿಲ್ಲ. ನಾಯಕಿ ನಿಕಿ ಪ್ರಸಾದ್ (12 ರನ್), ಮಿಥಿಲಾ ವಿನೋದ್ (17 ರನ್) ಹಾಗೂ ಆಯುಷಿ ಶುಕ್ಲಾ (10 ರನ್) ಅವರು ಮಾತ್ರ ಎರಡಂಕಿಯಲ್ಲಿ ರನ್ ಗಳಿಸಿದರು.
ಇದೆಲ್ಲದರ ನಡುವೆ ತ್ರಿಷಾ ಏಕಾಂಗಿ ಹೋರಾಟ ನಡೆಸಿದರು. ಅವರು 110.63ರ ಸ್ಟ್ರೈಕ್‌ರೇಟ್‌ನಲ್ಲಿ ತ್ರಿಷಾ ರನ್ ಗಳಿಸಿದರು.
ಬಾಂಗ್ಲಾ ತಂಡದ ಫರ್ಜಾನಾ ಯಾಸ್ಮೀನ್ (31ಕ್ಕೆ4) ಭಾರತದ ಬ್ಯಾಟಿಂಗ್ ಪಡೆಯನ್ನು ಕಾಡಿದರು. ಅಗ್ರಕ್ರಮಾಂಕ ಮತ್ತು ಮಧ್ಯಮ ಕ್ರಮಂಕದ ವಿಕೆಟ್ ಗಳನ್ನು ಉರುಳಿಸಿದರು. ಅವರಿಗೆ ನಿಶಿತಾ ಅಖ್ತರ್ ನಿಶಿ (23ಕ್ಕೆ2) ಅವರು ಉತ್ತಮ ಜೊತೆ ನೀಡಿದರು.
ಸಾಧಾರಣ ಗುರಿ ಬೆನ್ನಟ್ಟಿದ್ದ ಬಾಂಗ್ಲಾ ತಂಡವು 18.3 ಓವರ್‌ಗಳಲ್ಲಿ 76 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಆಯುಷಿ ಶುಕ್ಲಾ (17ಕ್ಕೆ3) ಅವರು ಬಾಂಗ್ಲಾ ತಂಡಕ್ಕೆ ಸವಾಲೊಡ್ಡಿದರು. ಅವರೊಂದಿಗೆ ಸೋನಮ್ ಯಾದವ್ ಮತ್ತು ಪರುಣಿಕಾ ಸಿಸೊಡಿಯಾ ಅವರೂ ಉತ್ತಮವಾಗಿ ಬೌಲಿಂಗ್ ಮಾಡಿದರು. ತಲಾ ಎರಡು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 117 (ಜಿ. ತ್ರಿಷಾ 52, ಫರ್ಜಾನಾ ಯಾಸ್ಮಿನ್ 32ಕ್ಕೆ4) ಬಾಂಗ್ಲಾದೇಶ: 18.3 ಓವರ್‌ಗಳಲ್ಲಿ 76 (ಜೈರಿಯಾ ಫಿರ್ದೋಸ್ 22, ಆಯುಷಿ ಶುಕ್ಲಾ 17ಕ್ಕೆ3, ಸೋನಮ್ ಯಾದವ್ 13ಕ್ಕೆ2, ಪರುಣಿಕಾ ಸಿಸೊಡಿಯಾ 12ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 41 ರನ್‌ಗಳಿಂದ ಜಯ. ಪಂದ್ಯದ ಆಟಗಾರ್ತಿ: ಜಿ. ತ್ರಿಷಾ.
ಭಾರತೀಯ ಆಟಗಾರ್ತಿಯರ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.