ADVERTISEMENT

IND Vs AUS T20I: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಜಯ: 4–1 ಅಂತರದಿಂದ ಸರಣಿ ವಶ

ಗಿರೀಶ ದೊಡ್ಡಮನಿ
Published 3 ಡಿಸೆಂಬರ್ 2023, 17:23 IST
Last Updated 3 ಡಿಸೆಂಬರ್ 2023, 17:23 IST
<div class="paragraphs"><p>ಪಂದ್ಯ ಗೆದ್ದ ಬಳಿಕ ಭಾರತೀಯ ಆಟಗಾರರ ಸಂಭ್ರಮ</p></div>

ಪಂದ್ಯ ಗೆದ್ದ ಬಳಿಕ ಭಾರತೀಯ ಆಟಗಾರರ ಸಂಭ್ರಮ

   

– ಪಿಟಿಐ ಚಿತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಆಸ್ಟ್ರೇಲಿಯಾ ಎದುರಿನ ಚುಟುಕು ಪಂದ್ಯದ ಕೊನೆಯ ಓವರ್‌ ನಾಟಕೀಯ ತಿರುವುಗಳಿಗೆ ಕಾರಣವಾಯಿತು. ಆದರೆ ಕೊನೆಗೂ ಭಾರತ ತಂಡವು ರೋಚಕ ಜಯ ಸಾಧಿಸಿತು.

ADVERTISEMENT

ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ 6 ರನ್‌ಗಳಿಂದ ಗೆದ್ದ ಭಾರತವು 4–1ರಿಂದ ಕಿರೀಟ ತನ್ನದಾಗಿಸಿಕೊಂಡಿತು. 161 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ ಓವರ್‌ನಲ್ಲಿ 10 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ತಂಡವು 151 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆದರೆ ಕ್ರೀಸ್‌ನಲ್ಲಿ ನಾಯಕ ಮ್ಯಾಥ್ಯೂ ವೇಡ್ (22; 15ಎ) ಇದ್ದ ಕಾರಣ ಆಸ್ಟ್ರೇಲಿಯಾಕ್ಕೆ ಗೆಲುವಿನ ವಿಶ್ವಾಸ ಉಳಿದಿತ್ತು.

ಈ  ಓವರ್ ಬೌಲಿಂಗ್ ಮಾಡಲು ಎಡಗೈ ಮಧ್ಯಮವೇಗಿ ಆರ್ಷದೀಪ್ ಸಿಂಗ್ ಚೆಂಡು ಕೈಗೆತ್ತಿಕೊಂಡಾಗ ತುಸು ಆತಂಕ ಎದುರಾಗಿತ್ತು. ಏಕೆಂದರೆ ಇನಿಂಗ್ಸ್‌ನ ಮೊದಲ ಓವರ್‌ ಬೌಲ್ ಮಾಡಿದ್ದ ಆರ್ಷದೀಪ್ 14 ರನ್ ಕೊಟ್ಟಿದ್ದರು. ತಮ್ಮ ಎರಡನೇ ಸ್ಪೆಲ್‌ನ ಎರಡು ಓವರ್‌ಗಳಲ್ಲಿ 23 ರನ್‌ ಕೊಟ್ಟಿದ್ದರು. ಆದರೆ ಆ ಸ್ಪೆಲ್‌ನಲ್ಲಿ ಬೆನ್ ಮೆಕ್‌ಡರ್ಮಾಟ್ (54; 36ಎ) ಅವರ ವಿಕೆಟ್ ಗಳಿಸಿದ್ದರು. ಇದರಿಂದಾಗಿ ಅವರಲ್ಲಿ ಅತ್ಮವಿಶ್ವಾಸ ಮೂಡಿತ್ತು.

ಆರ್ಷದೀಪ್ ಹಾಕಿದ  20ನೇ ಓವರ್‌ನ ಮೊದಲ ಎಸೆತವು ಬ್ಯಾಟರ್ ಮ್ಯಾಥ್ಯೂ ವೇಡ್ ಅವರ ತಲೆಮಟ್ಟಕ್ಕೆ ಬೌನ್ಸ್ ಆಗಿದ್ದು ಟಿ.ವಿ. ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಇದನ್ನು ನೋಬಾಲ್ ಕೊಡಬೇಕು ಎಂಬ ವೇಡ್ ಅವರ ಅಪೀಲ್‌ಗೆ ಅಂಪೈರ್‌ಗಳಿಂದ ಪ್ರತಿಫಲ ಸಿಗಲಿಲ್ಲ. ಇದರಿಂದ ಸಿಡಿಮಿಡಿಗೊಂಡ ವೇಡ್ ಆಟ ಮುಂದುವರಿಸಿದರು. 2ನೇ ಎಸೆತದಲ್ಲಿಯೂ ರನ್ ಬರಲಿಲ್ಲ. ಮೂರನೇ ಎಸೆತದಲ್ಲಿ ವೇಡ್ ದೊಡ್ಡ ಹೊಡೆತವಾಡಿದರು. ಆದರೆ ಫೀಲ್ಡರ್ ಶ್ರೇಯಸ್ ಅಯ್ಯರ್ ಪಡೆದ ಅಮೋಘ ಕ್ಯಾಚ್‌ಗೆ ಡಗ್‌ಔಟ್‌ಗೆ ಮರಳಿದರು. 

ಕ್ರೀಸ್‌ನಲ್ಲಿದ್ದ ಬೆಹ್ರನ್‌ಡಾರ್ಫ್, ನಂತರದ ಎಸೆತದಲ್ಲಿ ಒಂದು ರನ್ ಗಳಿಸಿದರು. ಆದರೆ ಐದನೇ ಎಸೆತದಲ್ಲಿ ನೇಥನ್ ಮಾಡಿದ ನೇರ ಡ್ರೈವ್ ವೇಗವಾಗಿ ಸಾಗುವ ಹಂತದಲ್ಲಿ ಅಂಪೈರ್‌ ತೊಡೆಗೆ ಅಪ್ಪಳಿಸಿತು. ಬ್ಯಾಟರ್‌ಗಳಿಗೆ ಕೇವಲ ಒಂದು ರನ್ ಲಭಿಸಿತು. ಇಲ್ಲದಿದ್ದರೆ ಅದು ಬೌಂಡರಿಗೆರೆ ದಾಟುವ ಸಾಧ್ಯತೆಯೂ ಇತ್ತು.

ಗೇಮ್ ಚೇಂಜರ್ ಮುಕೇಶ್: ಹೋದವಾರವಷ್ಟೇ ವಿವಾಹವಾಗಿರುವ ಖುಷಿಯಲ್ಲಿರುವ  ವೇಗಿ ಮುಕೇಶ್ ಕುಮಾರ್ ಇಲ್ಲಿ ಭಾರತ ತಂಡದ ಗೆಲುವಿಗೆ ಮಹತ್ವದ ತಿರುವು ನೀಡಿದರು.

ತಮ್ಮ ಮೊದಲ ಸ್ಪೆಲ್‌ನಲ್ಲಿ ಜೋಶ್ ಫಿಲಿಪ್ಸ್ ವಿಕೆಟ್ ಗಳಿಸಿ ಭಾರತಕ್ಕೆ ಮೊದಲ ಯಶಸ್ಸು ಗಳಿಸಿಕೊಟ್ಟರು. ನಂತರ ತಮ್ಮ ಎರಡನೇ ಸ್ಪೆಲ್‌ನಲ್ಲಿ ಎರಡು ವಿಕೆಟ್ ಕಿತ್ತರು. 17ನೇ ಓವರ್‌ನಲ್ಲಿ ಮ್ಯಾಥ್ಯೂ ಶಾರ್ಟ್ ಮತ್ತು ಬೆನ್ ಡ್ವಾರ್ಷಿಯಸ್ ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ಕೊನೆಯ ಹಂತದ ಓವರ್‌ಗಳಲ್ಲಿ ಆಸ್ಟ್ರೇಲಿಯಾದ ರನ್‌ ಗಳಿಕೆಯ ವೇಗ ಕುಂಠಿತವಾಯಿತು. 

ಶ್ರೇಯಸ್ ಅರ್ಧಶತಕ: ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕವಾಡ ಮೊದಲ ವಿಕೆಟ್‌ಗೆ 33ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ ನಂತರದ  22 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು.  ಇಬ್ಬರು ಆರಂಭಿಕರು, ನಾಯಕ ಸೂರ್ಯಕುಮಾರ್ ‌ಮತ್ತು ಸಿಕ್ಸರ್ ಪರಿಣತ ರಿಂಕು ಸಿಂಗ್ ಡಗ್‌ಔಟ್ ಸೇರಿದ್ದರು.

ಆದರೆ ಒಂದೆಡೆ ಶಾಂತಚಿತ್ತದಿಂದ ನಿಂತು ಆಡಿದ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ತಂಡವು ಒಂದು ಹಂತದಲ್ಲಿ ನೂರರ ಮೊತ್ತ ಮುಟ್ಟುವುದೇ ಅನುಮಾನವಾಗಿತ್ತು. ಆದರೆ ಆ ಆತಂಕವನ್ನು ಶ್ರೇಯಸ್ ದೂರ ಮಾಡಿದರು. ಅವರು ಜಿತೇಶ್ ಶರ್ಮಾ (24; 16ಎ) ಅವರೊಂದಿಗೆ 5ನೇ ವಿಕೆಟ್ ಜೊತೆಯಾಟದಲ್ಲಿ 42 ರನ್‌ ಕಲೆಹಾಕಿದರು. ಅಕ್ಷರ್ ಪಟೇಲ್ (31; 21ಎ, 4X2, 6X1) ಜೊತೆಗೆ ಆರನೇ ವಿಕೆಟ್ ಪಾಲುದಾರಿಕೆಯಲ್ಲಿ 46 ರನ್ ಸೇರಿಸಿದರು. ಅಕ್ಷರ್ ಪಟೇಲ್ ಆಲ್‌ರೌಂಡ್ ಆಟ ಆಡುವ ಮೂಲಕ ಗೆಲುವಿಗೆ ಕಾಣಿಕೆ ನೀಡಿದರು. ಅವರಿಗೆ ಪಂದ್ಯಶ್ರೇಷ್ಠ ಗೌರವವೂ  ಒಲಿಯಿತು.

ಕ್ರೀಡಾಂಗಣದಲ್ಲಿ 26 ಸಾವಿರ ಪ್ರೇಕ್ಷಕರು ಸೇರಿದ್ದರು.

ಇನ್ನಿಂಗ್ಸ್‌ನಲ್ಲಿ ದಾಖಲಾದ ಒಂದೇ ವೈಡ್‌
ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಹೆಚ್ಚು ಇತರೆ ರನ್‌ಗಳನ್ನು ಬಿಟ್ಟುಕೊಡದಿರುವುದು ವಿಶೇಷ. ಒಂದು ವೈಡ್ ಮಾತ್ರ ದಾಖಲಾಯಿತು. ಅದನ್ನು ಆರ್ಷದೀಪ್ ಸಿಂಗ್ ಹಾಕಿದ್ದರು. ಬೌಲಿಂಗ್‌ ಪಿಚ್: ಬೆಂಗಳೂರಿನ ಪಿಚ್ ಯಾವಾಗಲೂ ರನ್‌ಗಳಿಕೆಗೆ ಹೆಚ್ಚು ನೆರವು ನೀಡುವುದು ವಾಡಿಕೆ. ಈಚೆಗೆ ಇಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯಗಳೇ ಈ ಮಾತಿಗೆ ಉತ್ತಮ ಉದಾಹರಣೆ. ಆದರೆ, ಈ ಪಂದ್ಯದಲ್ಲಿ ಬೌಲರ್‌ಗಳೇ ಹೆಚ್ಚು ವಿಜೃಂಭಿಸಿದರು. ‘ಪಂದ್ಯಕ್ಕಿಂತ ಮೊದಲು ಸಣ್ಣದಾಗಿ ಮಳೆ ಬಂದಿತ್ತು. ವಾತಾವರಣವೂ ತಂಪಾಗಿತ್ತು. ಆದ್ದರಿಂದ ಪಿಚ್‌ ಒಂದಿಷ್ಟು ಜಿಗುಟುತನದಿಂದ ಕೂಡಿತ್ತು. ಮೊದಲ ಮೂರ್ನಾಲ್ಕು ಓವರ್‌ಗಳಲ್ಲಿ ರನ್‌ಗಳು ಸರಾಗವಾಗಿ ಬಂದರೂ ನಂತರ ಬೌಲರ್‌ಗಳಿಗೆ ಮೇಲುಗೈ ಲಭಿಸಿತು’ ಎಂದು ಆಸ್ಟ್ರೇಲಿಯಾ ತಂಡದ ಬೆನ್ ಮೆಕ್‌ಡರ್ಮಾಟ್ ಪಂದ್ಯದ ನಂತರ ಹೇಳಿದರು.

ಸ್ಕೋರ್‌ ಕಾರ್ಡ್‌

ಭಾರತ 8ಕ್ಕೆ160 (20 ಓವರ್‌ಗಳಲ್ಲಿ)

ಯಶಸ್ವಿ ಸಿ ನೇಥನ್ ಬಿ ಬೆಹ್ರನ್‌ಡಾರ್ಫ್ 21 (15ಎ, 4X1, 6X2)

ಋತುರಾಜ್ ಸಿ ಬೆಹ್ರನ್‌ಡಾರ್ಫ್‌ ಬಿ ದ್ವಾರ್ಷಿಯಸ್ 10 (12ಎ, 4X2)

ಶ್ರೇಯಸ್ ಬಿ ನೇಥನ್ 53 (37ಎ, 4X5, 6X2)

ಸೂರ್ಯಕುಮಾರ್ ಸಿ ಮೆಕ್‌ಡರರ್ಮಾಟ್ ಬಿ ದ್ವಾರ್ಷಿಯಸ್ 5 (7ಎ)

ರಿಂಕುಸಿಂಗ್ ಸಿ ಡೇವಿಡ್ ಬಿ ಸಂಘಾ 6 (8ಎ, 4X1)

ಜಿತೇಶ್ ಸಿ ಮ್ಯಾಥ್ಯೂ ಬಿ ಹಾರ್ಡಿ 24 (16ಎ, 4X3. 6X1)

ಅಕ್ಷರ್ ಸಿ ಹಾರ್ಡಿ ಬಿ ಬೆಹ್ರನ್‌ಡಾರ್ಫ್ 31 (21ಎ, 4X2, 6X1)

ರವಿ ರನೌಟ್ (ಫಿಲಿಪ್/ವೇಡ್) 2 (2ಎ)

ಆರ್ಷದೀಪ್ ಔಟಾಗದೆ 2 (2ಎ)

ಇತರೆ: 6 ( ಬೈ 1, ಲೆಗ್‌ಬೈ 2, ವೈಡ್ 3)

ವಿಕೆಟ್ ಪತನ: 1–33 (ಯಶಸ್ವಿ ಜೈಸ್ವಾಲ್; 3.6), 2–33 (ಋತುರಾಜ್ ಗಾಯಕವಾಡ; 4.3), 3–46 (ಸೂರ್ಯಕುಮಾರ್ ಯಾದವ್; 6.5), 4–55 (ರಿಂಕು ಸಿಂಗ್; 9.1), 5–97 (ಜಿತೇಶ್ ಶರ್ಮಾ; 13.1), 6–143 (ಅಕ್ಷರ್ ಪಟೇಲ್; 18.4), 7–156 (ಶ್ರೇಯಸ್ ಅಯ್ಯರ್;19.3), 8–160 (ರವಿ ಬಿಷ್ಣೋಯಿ; 19.6) 

ಬೌಲಿಂಗ್‌: ಆ್ಯರನ್ ಹಾರ್ಡಿ 4–0–21–1, ಜೇಸನ್ ಬೆಹ್ರೆನ್‌ಡಾರ್ಫ್ 4–0–38–2, ಬೆನ್ ದ್ವಾರ್ಷಿಯಸ್ 4–0–30–2, ನೇಥನ್ ಎಲಿಸ್ 4–0–42–1, ತನ್ವೀರ್ ಸಂಘಾ 4–0–26–1

ಆಸ್ಟ್ರೇಲಿಯಾ 8ಕ್ಕೆ 154 (20 ಓವರ್‌ಗಳಲ್ಲಿ)

ಹೆಡ್‌ ಬಿ ಬಿಷ್ಣೋಯಿ 28 (18ಎ, 4x5, 6x1)

ಜೋಶ್ ಬಿ ಮುಕೇಶ್‌ 4 (4ಎ, 4x1)

ಬೆನ್ ಸಿ ಸಿಂಗ್‌ ಬಿ ಆರ್ಷದೀಪ್‌ 54 (36ಎ, 6x5)

ಆರನ್‌ ಸಿ ಅಯ್ಯರ್‌ ಬಿ ಬಿಷ್ಣೋಯಿ 6 (10ಎ, 4x1)

ಟಿಮ್‌ ಸಿ ಆವೇಶ್‌ ಬಿ ಪಟೇಲ್‌ 17 (17ಎ, 6x1)

ಮಾಥ್ಯೂ ಸಿ ಗಾಯಕವಾಡ್‌ ಬಿ ಮುಕೇಶ್‌ 16 (11, 4x2)

ವೇಡ್‌ ಸಿ ಅಯ್ಯರ್‌ ಬಿ ಆರ್ಷದೀಪ್‌ 22 (15ಎ, 4x4)

ದ್ವಾರ್ಶುಯಿಸ್ ಬಿ ಮುಕೇಶ್‌ 0 (1ಎ)

ಎಲ್ಲೀಸ್‌ ಔಟಾಗದೆ 4 (6ಎ)

ಜಾನ್ಸನ್‌ ಔಟಾಗದೆ 2 (ಎ)

ಇತರೆ: 1 (ವೈಡ್‌ 1)

ವಿಕೆಟ್ ಪತನ: 1-22 (ಜೋಶ್ ಫಿಲಿಪ್; 2.3), 2-47 (ಟ್ರಾವಿಸ್ ಹೆಡ್; 4.5), 3-55 (ಆರನ್ ಹಾರ್ಡಿ; 6.6), 4-102 (ಟಿಮ್ ಡೇವಿಡ್; 13.2), 5-116 (ಬೆನ್ ಮೆಕ್‌ಡರ್ಮೊಟ್; 14.6), 6-129 (ಮ್ಯಾಥ್ಯೂ ಶಾರ್ಟ್; 16.3), 7-129 (ಬೆನ್ ದ್ವಾರ್ಶುಯಿಸ್; 16.4), 8-151 (ಮ್ಯಾಥ್ಯೂ ವೇಡ್; 19.3)

ಬೌಲಿಂಗ್‌: ಆರ್ಷದೀಪ್‌ ಸಿಂಗ್‌ 4–0–40–2, ಆವೇಶ್ ಖಾನ್ 4–0–39–0, ಮುಕೇಶ್‌ ಕುಮಾರ್‌ 4–0–32–3,
ರವಿ ಬಿಷ್ಣೋಯಿ 4–0–29–2, ಅಕ್ಷರ್‌ ಪಟೇಲ್‌ 4–0–14–1

ಪಂದ್ಯದ ಆಟಗಾರ: ಅಕ್ಷರ್ ಪಟೇಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.