ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್‌: ಸೆಮಿಫೈನಲ್‌ ಹಾದಿಯತ್ತ ಭಾರತದ ನೋಟ

ಬಾಂಗ್ಲಾದೇಶ ಎದುರಾಳಿ; ಬ್ಯಾಟಿಂಗ್–ಬೌಲಿಂಗ್‌ ವಿಭಾಗದ ಮೇಲೆ ಕಣ್ಣು

ಪಿಟಿಐ
Published 21 ಮಾರ್ಚ್ 2022, 18:18 IST
Last Updated 21 ಮಾರ್ಚ್ 2022, 18:18 IST
ಭಾರತ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಬ್ಯಾಟರ್ ಶೆಫಾಲಿ ವರ್ಮಾ –ಎಎಫ್‌ಪಿ ಚಿತ್ರ
ಭಾರತ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಬ್ಯಾಟರ್ ಶೆಫಾಲಿ ವರ್ಮಾ –ಎಎಫ್‌ಪಿ ಚಿತ್ರ   

ಹ್ಯಾಮಿಲ್ಟನ್, ನ್ಯೂಜಿಲೆಂಡ್: ಸಿಹಿ ಕಹಿ ಅನುಭವಿಸುತ್ತ ಮುನ್ನುಗ್ಗುತ್ತಿರುವ ಭಾರತ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ಕಣಕ್ಕೆ ಇಳಿಯಲಿದೆ. ಸೆಮಿಫೈನಲ್ ಹಂತಕ್ಕೇರುವ ಕನಸು ಜೀವಂತವಾಗಿರಬೇಕಾದರೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ.

ಪಾಕಿಸ್ತಾನವನ್ನು ಮಣಿಸಿ ಉತ್ತಮ ಆರಂಭ ಕಂಡಿದ್ದ ಭಾರತ ನಂತರ ಏಕೈಕ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರಿನ ಸತತ ಸೋಲು ಸೇರಿದಂತೆ ಮೂರು ಪಂದ್ಯಗಳಲ್ಲಿ ನಿರಾಸೆ ಕಂಡಿದೆ. ಹೀಗಾಗಿ ಮುಂದಿನ ಹಾದಿ ಕಠಿಣವಾಗಿದೆ.

ಭಾರತದ ಬ್ಯಾಟಿಂಗ್ ಬಳಗದ ವೈಫಲ್ಯ ಈಗಾಗಲೇ ಸಾಬೀತಾಗಿದೆ. ಆಗೊಮ್ಮೆ ಈಗೊಮ್ಮೆ ಕೆಲವರು ಮಿಂಚಿದ್ದು ಬಿಟ್ಟರೆ ಉಳಿದಂತೆ ವೈಫಲ್ಯ ಕಾಣುತ್ತ ಬಂದಿದೆ. ಆಸ್ಟ್ರೇಲಿಯಾ 278 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿರುವುದರಿಂದ ಮಿಥಾಲಿ ರಾಜ್ ನೇತೃತ್ವದ ಬೌಲಿಂಗ್ ವಿಭಾಗದ ಸಾಮ ರ್ಥ್ಯದ ಮೇಲೂ ಸಂದೇಹ ಉಂಟಾಗಿದೆ.

ADVERTISEMENT

ಹೀಗಾಗಿ ಮಾಡು–ಮಡಿ ಪಂದ್ಯದಲ್ಲಿ ಎರಡೂ ವಿಭಾಗಗಳು ಚೇತರಿಸಿಕೊಳ್ಳಬೇಕಾದ ಅಗತ್ಯವಿದೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಬೌಲರ್ ದೀಪ್ತಿ ಶರ್ಮಾ ಅವರನ್ನು ಹೊರಗಿರಿಸಿ ಬ್ಯಾಟರ್ ಶೆಫಾಲಿ ವರ್ಮಾ ಅವರಿಗೆ ಅವಕಾಶ ಕೊಟ್ಟದ್ದು ಫಲ ನೀಡಲಿಲ್ಲ. ಆದ್ದರಿಂದ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಅಂತಿಮ 11ರ ಆಯ್ಕೆಯೂ ತಲೆನೋವಾಗಿ ಪರಿಣಮಿಸಿದೆ.

ಬಾಂಗ್ಲಾದೇಶ ಪ್ರತಿ ಪಂದ್ಯದಲ್ಲೂ ಹೋರಾಡಿ ಸೋತಿದೆ. ಆದ್ದರಿಂದ ಆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪಾಕಿಸ್ತಾನದ ವಿರುದ್ಧ ಗೆದ್ದು ಟೂರ್ನಿಯನ್ನು ಸ್ಮರಣೀಯವಾಗಿಸಿದೆ. ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿರುವ ತಂಡ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿತ್ತು. 141 ರನ್‌ಗಳ ಗೆಲುವಿನ ಗುರಿ ಬೆನ್ನತ್ತಲು ಸಾಧ್ಯವಾಗಿರಲಿಲ್ಲ.

ಪಂದ್ಯ ಆರಂಭ: ಬೆಳಿಗ್ಗೆ 6.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.