ಜೇಮ್ಸ್ ಆ್ಯಂಡರ್ಸನ್, ಸಚಿನ್ ತೆಂಡೂಲ್ಕರ್
(ಪಿಟಿಐ ಚಿತ್ರ)
ನವದೆಹಲಿ: ಭಾರತ –ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ವಿಜೇತರಿಗೆ ನೀಡಲಾಗುವ ಟ್ರೋಫಿಯ ಮರುನಾಮಕರಣ ವಿಷಯ ತಿಳಿದಾಕ್ಷಣ ದಿವಂಗತ ಮನ್ಸೂರ್ ಅಲಿಖಾನ್ ಪಟೌಡಿ ಅವರ ಕುಟುಂಬದವರೊಂದಿಗೆ ಮಾತನಾಡಿರುವೆ. ಟೈಗರ್ ಪಟೌಡಿಯವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಎಲ್ಲ ರೀತಿಯಿಂದಲೂ ಬದ್ಧರಾಗಿದ್ದೇವೆ ಎಂದು ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
2007ರಿಂದ ಇದ್ದ ಪಟೌಡಿ ಟ್ರೋಫಿ ಎಂಬ ಹೆಸರನ್ನು ಈ ಬಾರಿ ಬದಲಿಸಲಾಗಿದೆ. ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮತ್ತು ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರು ಟ್ರೋಫಿಗೆ ಇಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿವೆ.
‘ಕೆಲವು ತಿಂಗಳುಗಳ ಹಿಂದೆ ಪಟೌಡಿ ಟ್ರೋಫಿಯನ್ನು ವಿಸರ್ಜಿಸುವ ಕುರಿತು ಬಿಸಿಸಿಐ ಮತ್ತು ಇಸಿಬಿ ತೆಗೆದುಕೊಂಡಿದ್ದ ನಿರ್ಧಾರವು ತಿಳಿದಿತ್ತು. ಆದರೆ ಇತ್ತೀಚೆಗೆ ಆ್ಯಂಡರ್ಸನ್ ಮತ್ತು ನನ್ನ ಹೆಸರನ್ನು ಆ ಟ್ರೋಫಿಗೆ ನಾಮಕರಣ ಮಾಡಲಿದ್ದಾರೆ ಎಂದು ತಿಳಿಯಿತು. ಕೂಡಲೇ ನಾನು ಪಟೌಡಿ ಕುಟುಂಬಸ್ಥರಿಗೆ ಫೋನ್ ಕರೆ ಮಾಡಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಚಿನ್ ಹೇಳಿದ್ದಾರೆ.
‘ಟೈಗರ್ ಪಟೌಡಿ ಅವರು ಯುವ ಜನಾಂಗಗಳಿಗೆ ಸ್ಫೂರ್ತಿ ತುಂಬಿದ ಮಹನೀಯರು. ಅವರ ಕಾಣಿಕೆಗಳು ಅವಿಸ್ಮರಣೀಯ. ಅವರ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಲು ಎಲ್ಲ ರೀತಿಯಿಂದಲೂ ಬದ್ಧರಾಗಿದ್ದೇವೆಂದು ಕುಟುಂಬಕ್ಕೆ ತಿಳಿಸಿದ್ದೇನೆ’ ಎಂದೂ ಸಚಿನ್ ಹೇಳಿದರು.
‘ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಐಸಿಸಿ ಮುಖ್ಯಸ್ಥ ಜಯ್ ಶಾ, ಇಸಿಬಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಅವರೆಲ್ಲರೂ ನನ್ನ ಮನವಿಗೆ ಸ್ಪಂದಿಸಿದ್ದು ಸಂತಸ ನೀಡಿದೆ. ಇದರ ಫಲವಾಗಿ ಪಟೌಡಿ ಅವರ ಹೆಸರಿನಲ್ಲಿ ಪದಕವೊಂದನ್ನು ಪ್ರದಾನ ಮಾಡುವ ನಿರ್ಧಾರ ಹೊರಹೊಮ್ಮಿದೆ. ಅವರ ಗೌರವಾರ್ಥ ಇದೊಂದು ಉತ್ತಮ ನಡೆಯಾಗಿದೆ’ ಎಂದು ಸಚಿನ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.