ಭಾರತ ತಂಡದ ಆಟಗಾರ್ತಿಯರ ಸಂಭ್ರಮ
ರಾಯಿಟರ್ಸ್ ಚಿತ್ರ
ಬ್ರಿಸ್ಟಲ್: ಆತಿಥೇಯ ಇಂಗ್ಲೆಂಡ್ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಮನ್‌ಜೋತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್, ಭಾರತ ತಂಡ ಸತತ ಎರಡನೇ ಜಯ ಸಾಧಿಸಲು ನೆರವಾದರು.
ಭಾರತ ನೀಡಿದ 182 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಂಗ್ಲರ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಟಾಮಿ ಬ್ಯೂಮೌಂಟ್ (54 ರನ್) ಅರ್ಧಶತಕ ಸಿಡಿಸಿದರೆ, ಆ್ಯಮಿ ಜೋನ್ಸ್ (32 ರನ್) ಹಾಗೂ ಸೋಫಿ ಎಕ್ಲೆಸ್ಟೋನ್ (35 ರನ್) ಅಲ್ಪ ಕಾಣಿಕೆ ನೀಡಿದರು. ಆದರೆ, ಉಳಿದವರಿಂದ ಉಪಯುಕ್ತ ಆಟ ಮೂಡಿಬರಲಿಲ್ಲ. ಹೀಗಾಗಿ, ಆತಿಥೇಯರು 24 ರನ್ ಅಂತರದ ಸೋಲೊಪ್ಪಿಕೊಳ್ಳಬೇಕಾಯಿತು.
ಭಾರತ ಪರ ಶ್ರೀಚರಣಿ ಎರಡು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಮತ್ತು ಅಮನ್‌ಜೋತ್ ಒಂದೊಂದು ವಿಕೆಟ್ ಉರುಳಿಸಿದರು. ಉಳಿದ ಮೂರು ವಿಕೆಟ್ ರನೌಟ್ ಆದವು.
ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದ ಅಮನ್‌ಜೋತ್ ಪಂದ್ಯಶ್ರೇಷ್ಠ ಆಟಗಾರ್ತಿ ಎನಿಸಿದರು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ, ಐದು ಪಂದ್ಯಗಳ ಸರಣಿಯಲ್ಲಿ 2–0 ಅಂತರದ ಮುನ್ನಡೆ ಸಾಧಿಸಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ 97 ರನ್‌ಗಳಿಂದ ಗೆದ್ದಿತ್ತು.
ಅಮನ್‌ಜೋತ್, ಜೆಮಿಮಾ ಮಿಂಚು
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 31 ರನ್ ಆಗುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳು ಪತನಗೊಂಡವು. ಶೆಫಾಲಿ ವರ್ಮಾ ಕೇವಲ 3 ರನ್ ಗಳಿಸಿದರೆ, ಕಳೆದ ಪಂದ್ಯದ ಶತಕಧಾರಿ ಸ್ಮೃತಿ ಮಂದಾನ 13 ರನ್‌ಗೆ ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಆಟ 1 ರನ್‌ಗೆ ಅಂತ್ಯವಾಯಿತು.
ಈ ವೇಳೆ ಜೊತೆಯಾದ ಅಮನ್‌ಜೋತ್, ಜೆಮಿಮಾ, ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 93 ರನ್ ಸೇರಿಸಿದರು. ಈ ಇಬ್ಬರೂ ತಲಾ 63 ರನ್ ಗಳಿಸಿದರು. ಜೆಮಿಮಾ 41 ಎಸೆತ ಎದುರಿಸಿದರೆ, ಅಮನ್‌ಜೋತ್ 40 ಎಸೆತ ಆಡಿದರು. ಕೊನೆಯಲ್ಲಿ ರಿಚಾ ಘೋಷ್ (20 ಎಸೆತ, 32 ರನ್) ಗುಡುಗಿದರು. ಹೀಗಾಗಿ, ತಂಡದ ಮೊತ್ತ 180ರ ಗಡಿ ದಾಟಲು ಸಾಧ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.