ADVERTISEMENT

INDW vs IREW 2nd ODI: ಸರಣಿ ಕೈವಶದತ್ತ ಸ್ಮೃತಿ ಚಿತ್ತ

ಪ್ರತೀಕಾ, ಸಬ್ನೀಸ್ ಮೇಲೆ ಕಣ್ಣು; ಪ್ರವಾಸಿ ಬಳಗಕ್ಕೂ ಜಯದ ಛಲ

ಪಿಟಿಐ
Published 11 ಜನವರಿ 2025, 23:30 IST
Last Updated 11 ಜನವರಿ 2025, 23:30 IST
<div class="paragraphs"><p>ಸ್ಮೃತಿ ಮಂದಾನ</p></div>

ಸ್ಮೃತಿ ಮಂದಾನ

   

ರಾಜ್‌ಕೋಟ್: ಐರ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಜಯಿಸಿದ ಸಂಭ್ರಮದಲ್ಲಿರುವ ಭಾರತ ಮಹಿಳಾ ತಂಡವು ಈಗ ಸರಣಿ ಕೈವಶದತ್ತ ಚಿತ್ತ ನೆಟ್ಟಿದೆ. 

ಭಾನುವಾರ ಉಭಯ ತಂಡಗಳು ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸ್ಮೃತಿ ಮಂದಾನ ನಾಯಕತ್ವದ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಪ್ರತೀಕಾ ರಾವಳ್ ಮತ್ತು ತೇಜಲ್ ಸಬ್ನೀಸ್ ಅವರ ಅಮೋಘ ಅರ್ಧಶತಕಗಳ ಬಲದಿಂದ ಭಾರತ ತಂಡವು ಜಯಿಸಿತ್ತು. 

ADVERTISEMENT

ನಾಯಕಿ ಸ್ಮೃತಿ ಮಂದಾನ ಕೂಡ ಉತ್ತಮ ಲಯದಲ್ಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಅವರ ಗೈರುಹಾಜರಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಅಲ್ಲದೇ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡುತ್ತಿರುವುದರಿಂದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಒತ್ತಡ ಕಡಿಮೆಯಾಗಿದೆ. ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೊಲ್ ಕೂಡ ಭರವಸೆಯ ಬ್ಯಾಟರ್‌ಗಳಾಗಿದ್ದಾರೆ. 

ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ಅವರ ಗೈರುಹಾಜರಿಯಲ್ಲಿ ಯುವ ಬೌಲರ್ ತಿತಾಸ್ ಸಾಧು, ಸ್ಪಿನ್ನರ್ ಪ್ರಿಯಾ ಮಿಶ್ರಾ ಮತ್ತು ದೀಪ್ತಿ ಶರ್ಮಾ ಅವರು ತಂಡಕ್ಕೆ ನೆರವು ನೀಡಬಲ್ಲವರು. 

ಪ್ರವಾಸಿ ತಂಡದ ನಾಯಕ ಗ್ಯಾಬಿ ಲೂಯಿಸ್ ಮೊದಲ ಪಂದ್ಯದಲ್ಲಿ ಅಲ್ಪ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದರು. ಲಿಹಾ ಪಾಲ್ ಕೂಡ ಅರ್ಧಶತಕ ಗಳಿಸಿದ್ದರು. ಐಮಿ ಮೆಗೆರ್ 3 ವಿಕೆಟ್ ಪಡೆದು ಮಿಂಚಿದ್ದರು. ಇದೇ ಮೊದಲ ಬಾರಿ ಉಭಯ ತಂಡಗಳು ದ್ವಿಪಕ್ಷೀಯ ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಆದ್ದರಿಂದ ಸರಣಿ ಜಯದ ಅವಕಾಶವನ್ನು ಜೀವಂತವಾಗಿಟ್ಟುಕೊಳ್ಳುವ ಛಲದಲ್ಲಿ ಪ್ರವಾಸಿ ಬಳಗವೂ ಇದೆ. ಅದರಿಂದಾಗಿ ಎರಡನೇ ಪಂದ್ಯದಲ್ಲಿ ಆತಿಥೇಯರಿಗೆ ಪ್ರತಿರೋಧವೊಡ್ಡಲು ಸಿದ್ಧವಾಗಿದೆ. 

ಪಂದ್ಯ ಆರಂಭ: ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.