ಮಿಚೆಲ್ ಸ್ಟಾರ್ಕ್
ಚಿತ್ರಕೃಪೆ: ಪಿಟಿಐ
ಮೆಲ್ಬರ್ನ್: ಕಳೆದ ತಿಂಗಳು ಉಲ್ಬಣಿಸಿದ್ದ ಭಾರತ – ಪಾಕಿಸ್ತಾನ ಸಂಘರ್ಷದ ನಂತರದ ಪರಿಣಾಮಗಳು ಏನೇ ಇರಲಿ. ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ (ಐಪಿಎಲ್) ಹೊರನಡೆಯಲು ಕೈಗೊಂಡ ನಿರ್ಧಾರದ ಬಗ್ಗೆ ಸಮಾಧಾನವಿದೆ ಎಂದು ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್ ಪಡೆಗಳು ಗಡಿಯುದ್ದಕ್ಕೂ ಭಾರತದ ವಿರುದ್ಧ ದಾಳಿ ಮಾಡಿದ್ದವು.
ಸಂಘರ್ಷ ತೀವ್ರಗೊಂಡ ಕಾರಣ ಮೇ 9ರಂದು ಐಪಿಎಲ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಉಭಯ ದೇಶಗಳು ಮೇ 10ರಂದು ಕದನ ವಿರಾಮ ಒಪ್ಪಂದ ಮಾಡಿಕೊಂಡ ನಂತರ ಮೇ 17ರಂದು ಟೂರ್ನಿಯು ಪುನರಾರಂಭಗೊಂಡಿತ್ತು. ಹೆಚ್ಚಿನ ವಿದೇಶಿ ಆಟಗಾರರು ತಮ್ಮ ಪ್ರಾಂಚೈಸ್‌ಗಳಿಗೆ ಹಿಂದಿರುಗಿದರೂ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರಾದ ಮಿಚೆಲ್ ಸ್ಟಾರ್ಕ್ ಮತ್ತು ಜೇಕ್ ಫ್ರೇಸರ್ ಮೆಕ್‌ಗರ್ಕ್ ಅವರು ವಾಪಸ್ ಆಗಿರಲಿಲ್ಲ.
ಆ ಕುರಿತು 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಜೊತೆ ಶುಕ್ರವಾರ ಮಾತನಾಡಿರುವ ಸ್ಟಾರ್ಕ್, 'ಇಡೀ ಪರಿಸ್ಥಿತಿಯ ಬಗ್ಗೆ ನನಗೆ ಏನನಿಸಿತು, ಅದನ್ನು ಹೇಗೆ ನಿರ್ವಹಿಸಿದೆ ಮತ್ತು ಕೈಗೊಂಡ ನಿರ್ಧಾರದ ಬಗ್ಗೆ ತೃಪ್ತಿಯಿದೆ' ಎಂದು ಹೇಳಿದ್ದಾರೆ.
'ಟೂರ್ನಿಗೆ ವಾಪಸ್ ಆಗದ ಆಟಗಾರರ ಮೇಲೆ ಏನಾದರೂ ಪರಿಣಾಮ ಉಂಟಾಗಲಿದೆಯೇ ಎಂಬುದನ್ನು ಕಾಲವೇ ತಿಳಿಸಲಿದೆ. ಆದರೆ, ವಾಪಸ್ ಆಗುವ ಮುನ್ನ ನನ್ನಲ್ಲಿ ಹಲವು ಪ್ರಶ್ನೆಗಳು ಮತ್ತು ಕಳವಳ ಮೂಡಿದ್ದವು. ಏನಾಯಿತು ಎಂಬುದನ್ನು ನೋಡಿದ್ದೆವು. ಅದು ನಿರ್ಧಾರ ಕೈಗೊಳ್ಳುವಲ್ಲಿ ಪಾತ್ರ ವಹಿಸಿತು' ಎಂದಿದ್ದಾರೆ.
ಟೂರ್ನಿ ಸ್ಥಗಿತಗೊಂಡ ದಿನ (ಮೇ 8ರಂದು) ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪಾಕ್ ಗಡಿಗೆ ಸಮೀಪದಲ್ಲಿರುವ ಧರ್ಮಶಾಲಾದಲ್ಲಿ ಮುಖಾಮುಖಿಯಾಗಿದ್ದವು. ಗಡಿಯಲ್ಲಿ ದಾಳಿ–ಪ್ರತಿದಾಳಿ ತೀವ್ರಗೊಳ್ಳುತ್ತಿದ್ದಂತೆ 'ವಿದ್ಯುತ್ ಸ್ಥಗಿತ' ಕಾರಣ ನೀಡಿ ಪಂದ್ಯವನ್ನು ನಿಲ್ಲಿಸಲಾಗಿತ್ತು.
ನಂತರ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಅದರ ಬೆನ್ನಲ್ಲೇ, ವಿದೇಶಿ ಆಟಗಾರರು ತವರಿಗೆ ವಾಪಸ್ ಆಗಿದ್ದರು. ವಾರದ ನಂತರ ಟೂರ್ನಿ ಪುನರಾರಂಭಗೊಂಡಿತ್ತು.
'ಜೇಕ್ ಹಾಗೂ ನಾನು ಟೂರ್ನಿಗೆ ಹಿಂದಿರುಗದಿರಲು ನಿರ್ಧರಿಸಿದೆವು. ಅದು ವೈಯಕ್ತಿಕ ನಿರ್ಧಾರವಾಗಿತ್ತು. ಅದಕ್ಕಾಗಿ ಯಾವುದೇ ಪರಿಣಾಮ ಎದುರಾದರೂ ಸಿದ್ಧ' ಎಂದು ಸ್ಟಾರ್ಕ್ ಹೇಳಿದ್ದಾರೆ.
'ನಾನು ಈಗಲೂ ಡೆಲ್ಲಿ ತಂಡಕ್ಕೆ ಬದ್ಧನಿದ್ದೇನೆ. ಹರಾಜಿಗೆ ಹೋಗಿ ನಂತರ ಟೂರ್ನಿಯಿಂದ ಹೊರನಡೆಯುವ ವ್ಯಕ್ತಿ ನಾನಲ್ಲ. ಆದರೆ, ಪರಿಸ್ಥಿತಿ ಭಿನ್ನವಾಗಿತ್ತು. ಮನೆಯವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೆ' ಎಂದು ತಿಳಿಸಿದ್ದಾರೆ.
ಇದೇ ವರ್ಷ ಆರಂಭದಲ್ಲಿ ಪಾಕಿಸ್ತಾನ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಿಂದಲೂ ಸ್ಟಾರ್ಕ್ ಹೊರಗುಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.