ADVERTISEMENT

T20 WC: ಪಾಕ್‌ ಆಟಗಾರನನ್ನು ಅಪ್ಪಿ ಅಭಿನಂದಿಸಿದ ಕೊಹ್ಲಿಗೆ ಪ್ರಶಂಸೆಯ ಸುರಿಮಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2021, 7:48 IST
Last Updated 25 ಅಕ್ಟೋಬರ್ 2021, 7:48 IST
ಮೊಹಮ್ಮದ್ ರಿಜ್ವಾನ್‌ರನ್ನು ಅಭಿನಂದಿಸಿದ ವಿರಾಟ್‌ ಕೊಹ್ಲಿ
ಮೊಹಮ್ಮದ್ ರಿಜ್ವಾನ್‌ರನ್ನು ಅಭಿನಂದಿಸಿದ ವಿರಾಟ್‌ ಕೊಹ್ಲಿ   

ಬೆಂಗಳೂರು: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಹೀನಾಯವಾಗಿ ಪರಾಭವಗೊಂಡಿತು.

ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡವು ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಸಫಲವಾಯಿತು. ವಿರಾಟ್‌ ಕೊಹ್ಲಿಯವರ ಅರ್ಧ ಶತಕದ ನೆರವಿನಿಂದ ಭಾರತ ತಂಡವು ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನದ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅವರು ಅತ್ಯುತ್ತಮ ಬ್ಯಾಟಿಂಗ್‌ ಅನ್ನು ಪ್ರದರ್ಶಿಸಿದರು.

ADVERTISEMENT

52 ಎಸೆತಗಳಲ್ಲಿ 6 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 68 ರನ್‌ಗಳನ್ನು ಬಾಬರ್‌ ಆಜಂ ಗಳಿಸಿದರು.

ಇನ್ನೊಂದೆಡೆ 55 ಎಸೆತಗಳನ್ನು ಎದುರಿಸಿದ ರಿಜ್ವಾನ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 79 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದೇ ಮೊದಲ ಬಾರಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಸೋಲನ್ನು ಅನುಭವಿಸಿತು. ಆದರೆ, ಈ ಸೋಲಿನ ಪಂದ್ಯದಲ್ಲೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಎದುರಾಳಿಗಳ ಜೊತೆಗೆ ನಡೆದುಕೊಂಡ ರೀತಿ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಪಂದ್ಯ ಮುಗಿದ ನಂತರ ಪಾಕ್‌ ಗೆಲುವಿಗೆ ಕಾರಣದ ರಿಜ್ವಾನ್‌ ಬಳಿಗೆ ವಿರಾಟ್‌ ಕೊಹ್ಲಿ ತೆರಳಿದರು. ಅವರನ್ನು ಅಪ್ಪಿ ಅಭಿನಂದಿಸಿದರು. ಆ ಕ್ಷಣಗಳನ್ನು ಸೆರೆಹಿಡಿದಿರುವ ವಿಡಿಯೊ ತುಣುಕು ಮತ್ತು ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಕ್ಯಾಪ್ಟನ್‌ ಕೊಹ್ಲಿಯವರ ಕ್ರೀಡಾಸ್ಪೂರ್ತಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

'ಕ್ರಿಕೆಟ್‌ ಎನ್ನುವುದು ಗೌರವಾನ್ವಿತ ಆಟವಾಗಿದೆ. ನಾವು ಖಂಡಿತವಾಗಿಯೂ ಆಟವನ್ನು ಗೌರವಿಸುತ್ತೇವೆ. ನಾವು ವಿರೋಧಿಗಳ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ. ನಮ್ಮ ಆಟವನ್ನಷ್ಟೇ ನಾವು ಆಡುತ್ತೇವೆ' ಎಂದು ಭಾರತದ ತಂಡದ ನಾಯಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.