ಸೂರ್ಯಕುಮಾರ್ ಯಾದವ್
(ರಾಯಿಟರ್ಸ್ ಚಿತ್ರ)
ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರುವ ಟೀಮ್ ಇಂಡಿಯಾದ ನಿರ್ಧಾರವನ್ನು ನಾಯಕ ಸೂರ್ಯಕುಮಾರ್ ಯಾದವ್ ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ 'ಕೆಲವೊಂದು ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾದದ್ದು' ಎಂದು ದಿಟ್ಟ ಮಾತುಗಳನ್ನು ಆಡಿದ್ದಾರೆ.
ಪಂದ್ಯದ ಆರಂಭದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಜೊತೆ ಕೈ ಕುಲುಕದೇ ತೆರಳಿದ್ದ ಸೂರ್ಯಕುಮಾರ್ ಪಂದ್ಯದ ಕೊನೆಯಲ್ಲಿ ಗೆಲುವಿನ ಸಿಕ್ಸರ್ ಬಾರಿಸಿದ ಬಳಿಕವೂ ಪಾಕ್ ಆಟಗಾರರೊಂದಿಗೆ ಹಸ್ತಾಲಾಘವ ಮಾಡಲು ನಿರಾಕರಿಸಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಸೂರ್ಯ, 'ಇದು ತಂಡದ ಒಮ್ಮತದ ನಿರ್ಧಾರವಾಗಿತ್ತು. ನಾವಿಲ್ಲಿ ಆಡಲು ಮಾತ್ರ ಬಂದಿದ್ದೇವೆ. ನಾವು ಅವರಿಗೆ ಉತ್ತರವನ್ನು ನೀಡಿದ್ದೇವೆ' ಎಂದು ತಿಳಿಸಿದ್ದಾರೆ.
'ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾಗಿದೆ. ನಾವು ನಮ್ಮ ಗೆಲವುನ್ನು 'ಆಪರೇಷನ್ ಸಿಂಧೂರ'ದಲ್ಲಿ ಭಾಗಿಯಾದ ಸೇನಾ ಪಡೆಗಳಿಗೆ ಹಾಗೂ ಪಹಲ್ಗಾಮ್ ಉಗ್ರದಾಳಿಯಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ಅರ್ಪಿಸುತ್ತೇವೆ' ಎಂದು ಹೇಳಿದ್ದಾರೆ.
ದುಬೈಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ನಾಯಕ ಸೂರ್ಯ ಅಜೇಯ 47 ರನ್ ಗಳಿಸಿದರು.
ಹಸ್ತಲಾಘವ ಮಾಡದಿರುವ ಟೀಮ್ ಇಂಡಿಯಾದ ನಿರ್ಧಾರಕ್ಕೆ ಪ್ರತಿಯಾಗಿ ಪ್ರಶಸ್ತಿ ಸಮಾರಂಭದಲ್ಲಿ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಭಾಗವಹಿಸಲಿಲ್ಲ. ಅಲ್ಲದೆ ಭಾರತೀಯ ಆಟಗಾರರು ಕ್ರೀಡಾಸ್ಫೂರ್ತಿಯನ್ನು ಮೆರೆದಿಲ್ಲ ಎಂದು ದೂರಿ ಏಷ್ಯಾ ಕ್ರಿಕೆಟ್ ಮಂಡಳಿಗೆ (ಎಸಿಸಿ) ಪ್ರತಿಭಟನೆಯನ್ನು ದಾಖಲಿಸಿದೆ.
ಪಂದ್ಯಕ್ಕೂ ಮೊದಲೇ ಪಾಕಿಸ್ತಾನದೊಂದಿಗೆ ಹಸ್ತಲಾಘವ ಮಾಡದಿರಲು ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿತು ಎಂದು ತಿಳಿದು ಬಂದಿದೆ.
'ನಾವೆಲ್ಲರೂ ನಮ್ಮ ಸರ್ಕಾರ ಹಾಗೂ ಬಿಸಿಸಿಐ ನಿರ್ಧಾರಕ್ಕೆ ಬದ್ಧರಾಗಿದ್ದೇವೆ' ಎಂದು ಸೂರ್ಯ ತಿಳಿಸಿದ್ದಾರೆ.
ಟೂರ್ನಿಯಲ್ಲಿ ಇನ್ನೆರಡು ಸಲ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಇತ್ತಂಡಗಳ ಆಟಗಾರರ ನಡುವೆ ಕಾವೇರಿದ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.