2007ರ ಟಿ20 ವಿಶ್ವಕಪ್ ಗೆದ್ದ ಭಾರತ
ಚಿತ್ರ: ಐಸಿಸಿ
ಬುಧವಾರ ಮುಕ್ತಾಯಗೊಂಡ ಅಫ್ಗಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ವಿಶ್ವಕಪ್‌ನ ಲೀಗ್ ಮಾದರಿಯ ಪಂದ್ಯ, ಎರಡು ಸೂಪರ್ ಓವರ್‌ಗಳಿಗೆ ಸಾಕ್ಷಿಯಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ರೋಚಕ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 187 ರನ ಕಲೆಹಾಕಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ಆಫ್ಗಾನಿಸ್ತಾನ 19.4 ಓವರ್‌ಗಳಲ್ಲಿ ಅಷ್ಟೇ ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಮೊರೆ ಹೋಗಬೇಕಾಯಿತು.
ಮೊದಲ ಸೂಪರ್ ಓವರ್‌ನಲ್ಲಿ ಉಭಯ ತಂಡಗಳು 18 ರನ್ ಕಳಿಸಿದವು. ಬಳಿಕ ಮತ್ತೊಂದು ಸೂಪರ್ ಓವರ್ ಆಡಿಸಲಾಯಿತು. ಇದರಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 23 ರನ್ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಅಫ್ಗಾನಿಸ್ತಾನ 4 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.
ಭಾರತ–ಪಾಕಿಸ್ತಾನ (2007)
ಟಿ20 ವಿಶ್ವಕಪ್ ಆರಂಭವಾಗಿದ್ದು 2007ರಲ್ಲಿ, ಅದೇ ವರ್ಷ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಲೀಗ್ ಪಂದ್ಯ ಟೈನಲ್ಲಿ ಕೊನೆಗೊಂಡಿತ್ತು. ಬಳಿಕ ಉಭಯ ತಂಡಗಳಿಗೆ ಐದು ಎಸೆತಗಳನ್ನು ನೀಡಲಾಗಿ, ಬ್ಯಾಟರ್ ಇಲ್ಲದೆ ವಿಕೆಟ್‌ಗೆ ಗುರಿ ಇಡುವ ಸ್ಪರ್ಧೆ ನೀಡಲಾಯಿತು. ಇದರಲ್ಲಿ ಮೊದಲ ಮೂರೂ ಎಸೆತಗಳಲ್ಲಿ ವಿಕೆಟ್ ಹಾರಿಸಿದ ಭಾರತ ಪಂದ್ಯವನ್ನು ಗೆದ್ದು ಬೀಗಿತು.
ಶ್ರೀಲಂಕಾ –ನ್ಯೂಜಿಲೆಂಡ್ (2012)
2007ರ ಬಳಿಕ, ಮತ್ತೆ ಟೈ ಪಂದ್ಯ ಕಂಡಿದ್ದು 2012ರಲ್ಲಿ. ಲೀಗ್ ಮಾದರಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು 174 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಟೈ ಮಾಡಿಕೊಳ್ಳುತ್ತವೆ. ಸೂಪರ್ ಓವರ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ ಗೆಲುವಿನ ನಗೆ ಬೀರಿತ್ತು.
ನ್ಯೂಜಿಲೆಂಡ್– ವಿಂಡೀಸ್ (2012)
ಮೊದಲ ಟೈ ಪಂದ್ಯ ನಡೆದ ಕೆಲವೇ ದಿನಗಳ ನಂತರ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯ ಕೂಡ ಟೈ ಆಯಿತು. ಎರಡೂ ತಂಡಗಳು ನಿಗದಿತ 20 ಓವರ್‌ಗಳಲ್ಲಿ 139 ರನ್ ಗಳಿಸಿದವು. ಬಳಿಕ ಪಂದ್ಯದ ಫಲಿತಾಂಶ ಸೂಪರ್ ಓವರ್ ಮೊರೆ ಹೋಗಲಾಯಿತು. ರೋಚಕ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ಗೆಲುವಿನ ನಗೆ ಬೀರಿತ್ತು.
ನಮೀಬಿಯಾ – ಓಮಾನ್(2024)
2024ರಲ್ಲಿ ನಡೆದ ಕ್ರಿಕೆಟ್ ಶಿಶುಗಳಾದ ನಮೀಬಿಯಾ ಹಾಗೂ ಓಮಾನ್ ನಡುವಿನ ಪಂದ್ಯ ಕೂಡ ಟೈ ಆಗಿತ್ತು. 20 ಓವರ್‌ನಲ್ಲಿ ಉಭಯ ದೇಶಗಳು 109 ರನ್ ಕಲೆಹಾಕಿದ್ದವು. ಸೂಪರ್ ಓವರ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ನಮೀಬಿಯಾ ಗೆಲುವು ಸಾಧಿಸಿತ್ತು.
ಪಾಕಿಸ್ತಾನ–ಅಮೆರಿಕ
ಇದೇ ವರ್ಷ ನಡೆದ ಅಮೆರಿಕ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತ್ತು. ಉಭಯ ತಂಡಗಳು ನಿಗದಿತ 20 ಓವರ್‌ಗಳಲ್ಲಿ 159 ರನ್ ಕಲೆಹಾಕಿದ್ದವು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 18 ರನ್ ಕಲೆಹಾಕಿತ್ತು. 19 ರನ್‌ಗಳ ಗುರಿ ಬೆನ್ನಟ್ಟಿದ ಪಾಕ್, ಸೌರಬ್ ನೇತ್ರವಲ್ಕರ್ ಅವರ ಅಮೋಘ ಬೌಲಿಂಗ್ ದಾಳಿಗೆ ನಲುಗಿ, 13 ರನ್ ಕಲೆಹಾಕಲು ಮಾತ್ರ ಸಾಧ್ಯವಾಯಿತು. ಆ ಮೂಲಕ ಅಮೆರಿಕ ತಂಡ ಸೂಪರ್ ಓವರ್‌ನಲ್ಲಿ 5 ರನ್‌ಗಳ ರೋಚಕ ಜಯ ದಾಖಲಿಸಿತ್ತು.
ಏಕದಿನ ವಿಶ್ವಕಪ್ ಫೈನಲ್
ಇದರ ಜೊತೆಗೆ 2019ರಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಕೂಡ ಟೈ ಆಗಿ, ಸೂಪರ್ ಓವರ್ ಮೊರೆ ಹೋಯಿತು. ಅಲ್ಲಿಯೂ ಕೂಡ ಟೈ ಆಗಿದ್ದರಿಂದ ಅತೀ ಹೆಚ್ಚು ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ಅನ್ನು ವಿಜೇತ ಎಂದ ಘೋಷಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.