ADVERTISEMENT

ಪಾಕ್ ಬಹಿಷ್ಕರಿಸಿದರೂ ಲಂಕಾಕ್ಕೆ ತೆರಳಿ ಟಾಸ್‌ಗಾಗಿ ಮೈದಾನಕ್ಕಿಳಿಯಲಿರುವ ಸೂರ್ಯ!

ಪಿಟಿಐ
Published 2 ಫೆಬ್ರುವರಿ 2026, 3:15 IST
Last Updated 2 ಫೆಬ್ರುವರಿ 2026, 3:15 IST
<div class="paragraphs"><p>ಸಲ್ಮಾನ್ ಅಘಾ, ಸೂರ್ಯಕುಮಾರ್ ಯಾದವ್</p></div>

ಸಲ್ಮಾನ್ ಅಘಾ, ಸೂರ್ಯಕುಮಾರ್ ಯಾದವ್

   

ನವದೆಹಲಿ: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೂ ಟೀಮ್ ಇಂಡಿಯಾವು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಒಂದು ವೇಳೆ ಪಾಕಿಸ್ತಾನವು ಪಂದ್ಯವನ್ನು ಬಹಿಷ್ಕರಿಸಿದರೆ ಭಾರತ 'ವಾಕ್ ಓವರ್' ಪಡೆಯಲಿದೆ. ಆದರೆ ವಾಕ್ ಓವರ್ ಪಡೆಯಲು ಪಂದ್ಯ ನಿಗದಿಯಾದ ದಿನದಂದು (ಫೆ.15) ಟಾಸ್ ವೇಳೆಯಲ್ಲಿ ತಂಡದ ನಾಯಕ ಮೈದಾನದಲ್ಲಿ ಹಾಜರಿರಬೇಕು. ಹಾಗಾಗಿ ಭಾರತ ತಂಡವು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದ್ದು, ಸೂರ್ಯಕುಮಾರ್ ಯಾದವ್ ಟಾಸ್‌‌ಗಾಗಿ ಮೈದಾನಕ್ಕೆ ಇಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಆ ಸಂದರ್ಭದಲ್ಲಿ ಪಾಕಿಸ್ತಾನದ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಗೈರು ಹಾಜರಾದರೆ ಭಾರತಕ್ಕೆ ರೆಫರಿ ವಾಕ್ ಓವರ್ ನೀಡಲಿದ್ದು, ಎರಡು ಅಂಕಗಳನ್ನು ನೀಡಲಿದ್ದಾರೆ.

ಏನೆಲ್ಲ ದಂಡ, ಎಷ್ಟು ನಷ್ಟ?

ಈ ಪಂದ್ಯ ನಡೆಯದಿದ್ದರೆ ಆತಿಥೇಯ ಪ್ರಸಾರಕರಿಗೆ 10 ಸೆಕೆಂಡುಗಳ ಕಮರ್ಷಿಯಲ್ ಸ್ಲಾಟ್‌ಗೆ ₹40 ಲಕ್ಷ ನಿಗದಿಯಂತೆ ಅಂದಾಜು ₹200ರಿಂದ ₹250 ಕೋಟಿ ಜಾಹೀರಾತು ಆದಾಯ ನಷ್ಟವಾಗಬಹುದು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಪಾಕಿಸ್ತಾನದ ಮೇಲೆ ಐಸಿಸಿ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯಿದೆ. ಇದರ ಜೊತೆಗೆ ಡಬ್ಲ್ಯೂಟಿಸಿ ಅಂಕಪಟ್ಟಿ ಹಾಗೂ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಥಾನವನ್ನು ನಿಶ್ಚಲವಾಗಿಸುವ ಸಾಧ್ಯತೆ ಇದೆ.

ಇದಲ್ಲದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್‌ಎಲ್) ವಿದೇಶಿ ಆಟಗಾರರು ಭಾಗವಹಿಸುವುದಕ್ಕೆ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ.

ಈ ಮೊದಲು ಇದೇ ತಿಂಗಳು ನಡೆಯಲಿರುವ ವಿಶ್ವಕಪ್ ಟೂರ್ನಿ ಲೀಗ್ ಹಂತದಲ್ಲಿ ಭಾರತ ವಿರುದ್ಧ ಫೆ.15ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿತ್ತು. ಒಂದು ವೇಳೆ ಪಂದ್ಯ ಬಹಿಷ್ಕರಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಐಸಿಸಿ ಈಗಾಗಲೇ ಎಚ್ಚರಿಸಿದೆ.

ಪಾಕ್ ತಂಡವು ಫೆಬ್ರುವರಿ 7ರಂದು ನಡೆಯುವ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್, 10ರಂದು ಅಮೆರಿಕ ಮತ್ತು 18ರಂದು ನಮೀಬಿಯಾ ವಿರುದ್ಧ ಕೊಲಂಬೊದಲ್ಲಿ ಆಡಲಿದೆ.

ಭದ್ರತಾ ಕಾರಣಗಳಿಗಾಗಿ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿ ನಿರಾಕರಿಸಿತ್ತು. ಇದರಿಂದಾಗಿ ಟೂರ್ನಿಯಿಂದಲೇ ಬಾಂಗ್ಲಾದೇಶ ಹಿಂದಕ್ಕೆ ಸರಿದಿತ್ತು. ಐಸಿಸಿಯ ಈ ತೀರ್ಮಾನಕ್ಕೆ ರಾಜಕೀಯ ಪ್ರತಿಭಟನೆಯಾಗಿ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಐಸಿಸಿ ಸಭೆಯಲ್ಲಿ ಬಾಂಗ್ಲಾ ನಿಲುವನ್ನು ಪಾಕಿಸ್ತಾನ ಬೆಂಬಲಿಸಿತ್ತು.

ಆದರೆ ನಾಕೌಟ್ ಅಥವಾ ಫೈನಲ್‌ನಲ್ಲಿ ಹಂತದಲ್ಲಿ ಮತ್ತೆ ಮುಖಾಮುಖಿಯಾದರೆ ಪಾಕಿಸ್ತಾನ ಪಂದ್ಯವನ್ನು ಆಡಲಿದೆಯೇ ಎಂಬುದರ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಯಾವುದೇ ಸ್ಪಷ್ಟನೆ ನೀಡಿಲ್ಲ.

ಕಳೆದ ವರ್ಷ ನಡೆದ ಏಷ್ಯಾ ಕಪ್‌ನಲ್ಲಿ ಎರಡೂ ತಂಡಗಳು ಮೂರು ಸಲ ಪರಸ್ಪರ ಮುಖಾಮುಖಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.