ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಚಿತ್ರಕೃಪೆ: PCB Website
ಕರಾಚಿ: ವಿದೇಶಿ ಆಟಗಾರರು ವಾಪಸ್ ಆಗಿದ್ದರೂ, ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಯನ್ನು ಪುನರಾರಂಭಿಸಲು ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಸಿದ್ಧತೆ ನಡೆಸಿದೆ.
ಭಾರತ – ಪಾಕಿಸ್ತಾನ ಉಲ್ಬಣಿಸಿದ್ದ ಸಂಘರ್ಷಕ್ಕೆ 'ಕದನ ವಿರಾಮ' ಘೋಷಣೆಯಾಗುತ್ತಿದ್ದಂತೆ, ಟೂರ್ನಿಯನ್ನು ಮೇ 16ರಿಂದ ಮತ್ತೆ ಆರಂಭಿಸಲು ಹಾಗೂ ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೂ ಮುನ್ನ ಮುಗಿಸಲು ಪಿಸಿಬಿ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಬಾಕಿ ಪಂದ್ಯಗಳನ್ನು ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲೇ ಆಯೋಜಿಸಲು ಉದ್ದೇಶಿಸಲಾಗಿದೆ.
'ಫೈನಲ್ ಸೇರಿದಂತೆ ಎಂಟು ಪಂದ್ಯಗಳು ಬಾಕಿ ಇವೆ. ವಿದೇಶಿ ಆಟಗಾರರು ವಾಪಸ್ ಬಂದರೂ, ಬಾರದಿದ್ದರೂ ಮೇ 15–16ರ ಹೊತ್ತಿಗೆ ಪುನರಾರಂಭಿಸಿ, ಟೂರ್ನಿಯನ್ನು ಮುಕ್ತಾಯ ಮಾಡುವ ಯೋಜನೆಯಲ್ಲಿದ್ದೇವೆ' ಎಂದು ಹೇಳಿವೆ.
ಕೆಲ ವಿದೇಶಿ ಆಟಗಾರರು ದುಬೈನಿಂದ ತಮ್ಮ ತವರಿಗೆ ಹೊರಟಿದ್ದಾರೆ. ಇನ್ನೂ ಕೆಲವರು ಅಲ್ಲೇ ಉಳಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
'ಬಾಕಿ ಪಂದ್ಯಗಳ ಸಲುವಾಗಿ ವಾಪಸ್ ಬರುವಂತೆ ವಿದೇಶಿ ಆಟಗಾರರಿಗೆ ತಿಳಿಸುವಂತೆ ಫ್ರಾಂಚೈಸ್‌ಗಳಿಗೆ ಸೂಚಿಸಲಾಗಿದೆ. ಅಂತಿಮ ನಿರ್ಧಾರ ಆಟಗಾರರು ಮತ್ತು ಅವರ ಮಂಡಳಿಗಳಿಗೆ ಬಿಟ್ಟದ್ದು' ಎಂದೂ ಸ್ಪಷ್ಟಪಡಿಸಿದ್ದಾರೆ.
'ಪಿಸಿಬಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಸಂಪರ್ಕದಲ್ಲಿದೆ. ಎರಡೂ ಮಂಡಳಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ' ಎನ್ನಲಾಗಿದೆ.
ಬಾಂಗ್ಲಾ ವಿರುದ್ಧದ ಸರಣಿಯ ಮೂರು ಪಂದ್ಯಗಳು ರಾವಲ್ಪಿಂಡಿ, ಫೈಸಲಾಬಾದ್ ಮತ್ತು ಲಾಹೋರ್‌ನಲ್ಲಿ ನಿಗದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.