ADVERTISEMENT

IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

ಪಿಟಿಐ
Published 18 ಡಿಸೆಂಬರ್ 2025, 7:57 IST
Last Updated 18 ಡಿಸೆಂಬರ್ 2025, 7:57 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ: ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ಆಯೋಜನೆ ಮಾಡಬೇಕಿತ್ತು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ವಿಪರೀತ ಮಂಜು ಕವಿದ ಕಾರಣ ಬುಧವಾರ ಲಖನೌದಲ್ಲಿ ನಡೆಯಬೇಕಿದ್ದ ಕ್ರಿಕೆಟ್ ಪಂದ್ಯವನ್ನು ರದ್ದುಪಡಿಸಲಾಗಿತ್ತು. ಈ ಕುರಿತು ಶರೂರ್ ಪ್ರತಿಕ್ರಿಯಿಸಿದ್ದಾರೆ.

‘ಲಖನೌದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಆರಂಭವಾಗುವುದನ್ನೇ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ, ಉತ್ತರ ಭಾರತದ ಹೆಚ್ಚಿನ ನಗರಗಳಲ್ಲಿ ವ್ಯಾಪಕವಾದ ದಟ್ಟವಾದ ಹೊಂಜು ಮತ್ತು ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 411ರಷ್ಟಿತ್ತು. ಕಡಿಮೆ ಗೋಚರತೆ ಕಾರಣಕ್ಕೆ ಪಂದ್ಯ ಆರಂಭಿಸಲು ಸಾಧ್ಯವಾಗಿಲ್ಲ. ಬಿಸಿಸಿಐ ಆಡಳಿತ ಮಂಡಳಿಯವರು ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ನಿಗದಿಪಡಿಸಬೇಕಾಗಿತ್ತು. ನಮ್ಮಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 68ರಷ್ಟಿದೆ’ ಎಂದು ಅವರು ‘ಎಕ್ಸ್‌’ನಲ್ಲಿ (ಟ್ವಿಟರ್‌) ಪೋಸ್ಟ್ ಮಾಡಿದ್ದಾರೆ.

ADVERTISEMENT

ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ ‘ಉತ್ತಮ‘ ಎಂದು, 51ರಿಂದ 100ರಷ್ಟಿದ್ದರೆ ‘ಸಮಾಧಾನಕರ’, 101 ರಿಂದ 200ರಷ್ಟಿದ್ದರೆ ‘ಸಾಧಾರಣ’, 201 ರಿಂದ 300ರಷ್ಟಿದ್ದರೆ ‘ಕಳಪೆ’ ಹಾಗೂ 301ರಿಂದ 400ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತ ಹೆಚ್ಚಾದರೆ ‘ತೀವ್ರಕ್ಕಿಂತಲೂ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

ಲಖನೌದ ಏಕನಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ, ದಟ್ಟ ಮಂಜು ಕವಿದ ಕಾರಣ ಚೆಂಡಿನ ಚಲನೆಯನ್ನು ಗುರುತಿಸುವುದು ಕಷ್ಟವಾಗುವ ಸಾಧ್ಯತೆ ಇತ್ತು. ಆದ್ದರಿಂದ ಟಾಸ್ ಕೂಡ ಮಾಡಲಿಲ್ಲ. ರಾತ್ರಿ 10 ಗಂಟೆಯವರೆಗೂ ಅಂಪೈರ್‌ಗಳು ಹಲವು ಬಾರಿ ವಾತಾವರಣದ ಪರಿಶೀಲನೆ ನಡೆಸಿದ್ದರು. ನಂತರ ಪಂದ್ಯ ರದ್ದುಗೊಳಿಸಿದ್ದರು.

ಡಿಸೆಂಬರ್‌ ತಿಂಗಳಲ್ಲಿ ಉತ್ತರ ಭಾರತದ ಹಲವು ನಗರಗಳಲ್ಲಿ ದಟ್ಟ ಮಂಜು ಮತ್ತು ವಾಯುಮಾಲಿನ್ಯದ ಸಮಸ್ಯೆ ಇದ್ದೇ ಇರುತ್ತದೆ. ಆದರೂ ಈ ತಿಂಗಳಲ್ಲಿ ಇಲ್ಲಿ ಪಂದ್ಯಗಳನ್ನು ಆಯೋಜಿಸಿರುವುದು ಸರಿಯಲ್ಲ ಎಂದು ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.