ADVERTISEMENT

ದಕ್ಷಿಣ ಆಫ್ರಿಕಾ ಸವಾಲ್ ಗೆದ್ದ ‘ಜೈಸ್ವಾಲ್’: ಭಾರತಕ್ಕೆ ಸರಣಿ ಜಯದ ಸಂಭ್ರಮ

ಭಾರತಕ್ಕೆ ಸರಣಿ ಜಯದ ಸಂಭ್ರಮ; ಕುಲದೀಪ್, ಪ್ರಸಿದ್ಧಗೆ ತಲಾ 4 ವಿಕೆಟ್; ರೋ–ಕೊ ಅರ್ಧಶತಕ

ಪಿಟಿಐ
Published 6 ಡಿಸೆಂಬರ್ 2025, 19:06 IST
Last Updated 6 ಡಿಸೆಂಬರ್ 2025, 19:06 IST
ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಜಯಿಸಿದ ಭಾರತ ತಂಡ 
ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಜಯಿಸಿದ ಭಾರತ ತಂಡ    

ವಿಶಾಖಪಟ್ಟಣಂ: ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಇದರಿಂದಾಗಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಜಯಗಳಿಸಲು ಸಾಧ್ಯವಾಯಿತು. 

ಶನಿವಾರ ಇಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಮತ್ತು ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 9 ವಿಕೆಟ್‌ಗಳ ಜಯಸಾಧಿಸಿತು. ಸರಣಿಯನ್ನು 2–1ರಿಂದ ಗೆದ್ದಿತು. 

271 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡದಕ್ಕೆ ‘ಮುಂಬೈ ಜೋಡಿ’ ಜೈಸ್ವಾಲ್ (116; 121ಎ) ಮತ್ತು ರೋಹಿತ್ ಶರ್ಮಾ (75; 73ಎ) ಅವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ 155 ರನ್‌ ಸೇರಿಸಿ ಅಮೋಘ ಆರಂಭ ನೀಡಿದರು. ಕಳೆದೆರಡೂ ಪಂದ್ಯಗಳಲ್ಲಿ ಶತಕ ಜಯಿಸಿದ್ದ ವಿರಾಟ್ (ಅಜೇಯ 65; 45ಎ) ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. 

ADVERTISEMENT

ಭಾರತ ತಂಡದ ನಾಯಕ ಕೆ.ಎಲ್. ರಾಹುಲ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕ್ವಿಂಟನ್ ಡಿಕಾಕ್ (106; 89ಎ, 4X8, 6X6)  ಅವರ ಚೆಂದದ ಶತಕದ ಬಲದಿಂದ ದಕ್ಷಿಣ ಆಫ್ರಿಕಾ 47.5 ಓವರ್‌ಗಳಲ್ಲಿ 270 ರನ್ ಗಳಿಸಿತು. ವೇಗಿ, ಕನ್ನಡಿಗ ಪ್ರಸಿದ್ಧಕೃಷ್ಣ (66ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್‌ (41ಕ್ಕೆ4) ಅವರ ಚುರುಕಿನ ದಾಳಿಯಿಂದಾಗಿ ಪ್ರವಾಸಿ ಬಳಗಕ್ಕೆ 300 ರನ್‌ಗಳ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.  ಆತಿಥೇಯ ತಂಡವು ಈ ಗುರಿಯನ್ನು 39.5 ಓವರ್‌ಗಳಲ್ಲಿ 1 ವಿಕೆಟ್‌ಗೆ 271 ರನ್ ಗಳಿಸಿ ಗೆದ್ದಿತು. 

ಕಳೆದೆರಡೂ ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಪರದಾಡಿದ್ದ ಜೈಸ್ವಾಲ್ ಇಲ್ಲಿಯೂ ಆರಂಭದಲ್ಲಿ ತುಸು ಕಷ್ಟಪಟ್ಟರು. ಇನ್ನೊಂದು ಬದಿಯಲ್ಲಿದ್ದ ಅನುಭವಿ ರೋಹಿತ್ ಅವರ ಬೆಂಬಲ ಮತ್ತು ಮಾರ್ಗದರ್ಶನವು ಜೈಸ್ವಾಲ್‌ ಆತ್ಮವಿಶ್ವಾಸ ಹೆಚ್ಚಿಸಿತು. ನಾಲ್ಕನೇ ಏಕದಿನ ಪಂದ್ಯವಾಡಿದ ಜೈಸ್ವಾಲ್ ಅವರು ಶತಕದತ್ತ ಹೆಜ್ಜೆ ಇಟ್ಟರು. 

38 ವರ್ಷದ ರೋಹಿತ್ ಅವರು 54 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ತಮ್ಮ ನೆಚ್ಚಿನ ಪುಲ್ ಶಾಟ್‌ಗಳ ಮೂಲಕ ಮೂರು ಸಿಕ್ಸರ್‌ ಗಳಿಸಿದರು. ಅವರ ಬೀಸಾಟದಿಂದಾಗಿ ರನ್‌ಗಳು ಸರಾಗವಾಗಿ ತಂಡದ ಖಾತೆ ಸೇರಿದವು. ಎದುರಾಳಿ ಬೌಲರ್‌ಗಳು ನಿರುತ್ತರರಾದರು.  

ರೋಹಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಗಳಿಸಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರ ನಂತರ ರೋಹಿತ್ ಈ ಸಾಧನೆ ಮಾಡಿದರು.

ಜೈಸ್ವಾಲ್ 75 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿಕೊಂಡರು. ಅದರ ನಂತರ ಅವರ ಆಟದಲ್ಲಿ ವೇಗ ಹೆಚ್ಚಿತು. ಡ್ರೈವ್‌ ಮತ್ತು ಕಟ್‌ಗಳ ಮೂಲಕ ಚೆಂಡನ್ನು ಬೌಂಡರಿಗೆರೆ ದಾಟಿಸುವಲ್ಲಿ ಯಶಸ್ವಿಯಾದರು. ಒಟ್ಟು 111 ಎಸೆತಗಳಲ್ಲಿ 100ರ ಗಡಿ ಮುಟ್ಟಿದ 23 ವರ್ಷದ ಬ್ಯಾಟರ್‌ ಸಂಭ್ರಮಿಸಿದರು. ವೇಗವಾಗಿ ಓಡಿ, ಮೇಲಕ್ಕೆ ಜಿಗಿದು, ಗಾಳಿಯನ್ನು ಮುಷ್ಟಿಯಿಂದ ಗುದ್ದಿ, ಅಬ್ಬರಿಸಿದರು.

ಜೈಸ್ವಾಲ್ ಮತ್ತು ವಿರಾಟ್ ಸೇರಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 156 ರನ್‌ ಗಳಿಸಿದರು. ಮೈದಾನದಲ್ಲಿ ಹಾಜರಿದ್ದ 27 ಸಾವಿರ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.