
ಲಖನೌ ನ ಎಕನಾ ಕ್ರೀಡಾಂಗಣದಲ್ಲಿ ಬುಧವಾರ ಕವಿದಿದ್ದ ದಟ್ಟ ಮಂಜಿನಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಬಿಸಿಸಿಐ ಪದಾಧಿಕಾರಿಗಳ ಮಾತುಕತೆ
–ಪಿಟಿಐ ಚಿತ್ರ
ಲಖನೌ: ವಿಪರೀತ ಮಂಜು ಕವಿದ ಕಾರಣ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವು ರದ್ದಾಯಿತು.
ಏಕನಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ದಟ್ಟ ಮಂಜು ಕವಿದ ಕಾರಣ ಚೆಂಡಿನ ಚಲನೆಯನ್ನು ಗುರುತಿಸುವುದು ಕಷ್ಟವಾಗುವ ಸಾಧ್ಯತೆ ಇತ್ತು. ಆದ್ದರಿಂದ ಟಾಸ್ ಕೂಡ ಮಾಡಲಿಲ್ಲ. ರಾತ್ರಿ 10 ಗಂಟೆಯವರೆಗೂ ಅಂಪೈರ್‌ಗಳು ಹಲವು ಬಾರಿ ವಾತಾವರಣದ ಪರಿಶೀಲನೆ ನಡೆಸಿದರು. ನಂತರ ಪಂದ್ಯ ರದ್ದುಗೊಳಿಸಿದರು. ಐದು ಪಂದ್ಯಗಳ ಸರಣಿಯಲ್ಲಿ ಭಾರತವು 2–1ರಿಂದ ಮುಂದಿದೆ. ಇನ್ನೊಂದು ಪಂದ್ಯ ಬಾಕಿ ಇದೆ. ಕ್ರೀಡಾಂಗಣದಲ್ಲಿ ಸೇರಿದ್ದ ಜನರು ನಿರಾಶೆಯಿಂದ ಮರಳಿದರು.
ಅಸಮಾಧಾನ: ಡಿಸೆಂಬರ್ ತಿಂಗಳಲ್ಲಿ ಉತ್ತರ ಭಾರತದ ಹಲವು ನಗರಗಳಲ್ಲಿ ದಟ್ಟ ಮಂಜು ಮತ್ತು ವಾಯುಮಾಲಿನ್ಯದ ಸಮಸ್ಯೆ ಇದ್ದೇ ಇರುತ್ತದೆ. ಆದರೂ ಈ ತಿಂಗಳಲ್ಲಿ ಇಲ್ಲಿ ಪಂದ್ಯಗಳನ್ನು ಆಯೋಜಿಸಿರುವುದು ಸರಿಯಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ದಕ್ಷಿಣ ಆಫ್ರಿಕಾದ ಎದುರಿನ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳ ಪಂದ್ಯಗಳಿಗೆ ನವ ಚಂಡೀಗಡ, ಧರ್ಮಶಾಲಾ, ಲಖನೌ, ರಾಂಚಿ, ರಾಯಪುರ, ವಿಶಾಖಪಟ್ಟಣ, ಕಟಕ್, ಅಹಮದಾಬಾದ್, ಗುವಾಹಟಿ ಮತ್ತು ಕೋಲ್ಕತ್ತ ನಗರಗಳನ್ನು ನಿಗದಿ ಪಡಿಸಲಾಗಿತ್ತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಈ ಸರಣಿಗಳು ನಡೆದಿವೆ.
ಈ ಹೊತ್ತಿನಲ್ಲಿ ಲಖನೌ, ಚಂಡೀಗಡ ಮತ್ತು ಧರ್ಮಶಾಲಾಗಳಲ್ಲಿ ವಾಯುಮಾಲಿನ್ಯವೂ ವಿಪರೀತವಾಗಿರುತ್ತದೆ. ಅಲ್ಲದೇ ಬುಧವಾರ ಲಖನೌ ನಗರದಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) 400ರ ಮಟ್ಟದಲ್ಲಿತ್ತು. ಇದು ಅಪಾಯಕಾರಿ ಮಟ್ಟವಾಗಿದೆ. ಇಂತಹ ವಾತಾವರಣದಲ್ಲಿಯೂ ಪಂದ್ಯವನ್ನು ಇಲ್ಲಿ ಆಯೋಜಿಸಿರುವ ಬಿಸಿಸಿಐಗೆ ಆಟಗಾರರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.