
ಗೌತಮ್ ಗಂಭೀರ್
(ಪಿಟಿಐ ಚಿತ್ರ)
ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2–0 ಅಂತರದಲ್ಲಿ ವೈಟ್‌ವಾಶ್ ಆಗಿದೆ. ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್, ತಮ್ಮ ಭವಿಷ್ಯದ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ತಮ್ಮ ಅವಧಿಯಲ್ಲಿ ತಂಡ ಸಾಧಿಸಿದ ಯಶಸ್ಸನ್ನು ಮರೆಯಬಾರದು ಎಂದು ಹೇಳಿದರು.
ಬುಧವಾರ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 408 ರನ್‌ಗಳ ಹೀನಾಯ ಸೋಲಿನ ಬಳಿಕ ಮಾತನಾಡಿದ ಗೌತಮ್ ಗಂಭೀರ್, ‘ನನ್ನ ಭವಿಷ್ಯ ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟ ವಿಚಾರ. ಆದರೆ, ಇಂಗ್ಲೆಂಡ್‌ನಲ್ಲಿನ ಫಲಿತಾಂಶ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ತಂಡದ ತರಬೇತುದಾರನಾಗಿದ್ದವನು ನಾನು ಎಂಬುದನ್ನು ಮರೆಯಬಾರದು’ ಎಂದು ಟೀಕಾಕಾರಿಗೆ ಉತ್ತರಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಕುರಿತು ಮಾತನಾಡಿದ ಗಂಭೀರ್ ‘ಸೋಲಿನ ಹೊಣೆ ಹೊರುವ ಜವಾಬ್ದಾರಿ ಎಲ್ಲರ ಮೇಲಿದೆ. ಅದು ನನ್ನಿಂದಲೇ ಪ್ರಾರಂಭವಾಗುತ್ತದೆ’ ಎಂದು ಸೋಲಿನ ಹೊಣೆ ತೆಗೆದುಕೊಂಡರು
‘ನಾವು ಉತ್ತಮವಾಗಿ ಆಡಬೇಕಾಗಿತ್ತು. 95 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದಾಗ 122ಕ್ಕೆ 7 ವಿಕೆಟ್ ಕಳೆದುಕೊಳ್ಳುವುದು ಉತ್ತಮ ಆಟದ ಲಕ್ಷಣವಲ್ಲ. ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಯಾವುದೇ ಆಟಗಾರನನ್ನು ದೂಷಿಸುವುದಿಲ್ಲ. ಆದರೆ, ಸೋಲಿನ ಹೊಣೆ ನನ್ನನ್ನೂ ಸೇರಿದಂತೆ ಎಲ್ಲರ ಮೇಲೂ ಇದೆ’ ಎಂದರು.
ಗಂಭೀರ್ ತರಬೇತುದಾರರದ ಬಳಿಕ ಭಾರತ 18 ಟೆಸ್ಟ್‌ಗಳಲ್ಲಿ 10ರಲ್ಲಿ ಸೋತಿದೆ. ಕಳೆದ ವರ್ಷದ ಕೊನೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ವೈಟ್‌ವಾಶ್‌ಗಳು ಇದರಲ್ಲಿ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.