ADVERTISEMENT

IND vs AUS: ಮೊದಲ ಏಕದಿನದಲ್ಲಿ ನಡೆಯದ 'ರೋ–ಕೊ' ಆಟ; ಆಸೀಸ್‌ಗೆ ಸುಲಭ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
ಪಿಟಿಐ
Published 19 ಅಕ್ಟೋಬರ್ 2025, 13:40 IST
Last Updated 19 ಅಕ್ಟೋಬರ್ 2025, 13:40 IST
<div class="paragraphs"><p>ಟೀಮ್ ಇಂಡಿಯಾ ಆಟಗಾರರು</p></div>

ಟೀಮ್ ಇಂಡಿಯಾ ಆಟಗಾರರು

   

(ಚಿತ್ರ ಕೃಪೆ: X/@BCCI


)

ಪರ್ತ್‌: ಭಾರತ ತಂಡಕ್ಕೆ ಮರಳಿದ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಒಟ್ಟು 22 ಎಸೆತಗಳನ್ನು ಆಡಿದರಷ್ಟೇ. ಭಾನುವಾರ ಮಳೆಯಿಂದ ಓವರುಗಳ ಕಡಿತಗೊಂಡ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಏಳು ವಿಕೆಟ್‌ಗಳಿಂದ ಜಯಗಳಿಸಿದ್ದು, ಈ ದಿಗ್ಗಜರ ವೈಫಲ್ಯ ಪ್ರಮುಖವಾಗಿ ಕಾಣಿಸಿತು.

ಮಳೆಯಿಂದಾಗಿ ಪಂದ್ಯಕ್ಕೆ ಕೆಲವು ಬಾರಿ ಅಡಚಣೆಯಾಯಿತು. ಅಂತಿಮವಾಗಿ ತಲಾ 26 ಓವರುಗಳಿಗೆ ಪಂದ್ಯ ಇಳಿಸಲಾಯಿತು. ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಭಾರತ 9 ವಿಕೆಟ್‌ಗೆ 136 ರನ್ ಗಳಿಸಿತು. ಡಕ್ವರ್ಥ್‌ ಲೂಯಿಸ್‌ ನಿಯಮದ ಆಧಾರದಲ್ಲಿ ಆಸ್ಟ್ರೇಲಿಯಾ ತಂಡದ ಗುರಿಯನ್ನು 26 ಓವರುಗಳಲ್ಲಿ 131 ರನ್‌ಗಳಿಗೆ ನಿಗದಿಗೊಳಿಸಲಾಯಿತು. ಆತಿಥೇಯರು 21.1 ಓವರುಗಳಲ್ಲಿ 3 ವಿಕೆಟ್‌ಗೆ ಈ ಮೊತ್ತ ಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದರು.

ಈ ಹಿಂದೆ ಭಾರತವನ್ನು ಕಾಡಿರುವ ಟ್ರಾವಿಸ್ ಹೆಡ್‌ (8) ಹೆಚ್ಚು ಕಾಡಲಿಲ್ಲ. ಅರ್ಷದೀಪ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಡೀಪ್‌ ಥರ್ಡ್‌ಮ್ಯಾನ್‌ನಲ್ಲಿ ಕ್ಯಾಚಿತ್ತರು. ಮ್ಯಾಥ್ಯೂ ಶಾರ್ಟ್‌ ಕೂಡ ವಿಫಲರಾದರು.

ಆದರೆ ನಾಯಕ ಮಿಚೆಲ್‌ ಮಾರ್ಷ್‌ (ಅಜೇಯ 46, 52ಎ) ಬಾಹುಬಲ ಮೆರೆದರು. ಜೋಶ್‌ ಫಿಲಿಪ್‌ (37, 29ಎ) ಜೊತೆ ಮೂರನೇ ವಿಕೆಟ್‌ಗೆ 55 ರನ್ ಜೊತೆಯಾಟವಾಡಿ ಆಸ್ಟ್ರೇಲಿಯಾವನ್ನು ನೂರರ ಹೊಸ್ತಿಲಿಗೆ ತಲುಪಿಸಿದರು. ಪದಾರ್ಪಣೆಗೈದ ಮ್ಯಾಥ್ಯೂ ರೆನ್ಷಾ (ಔಟಾಗದೇ 21, 24ಎ) ಜೊತೆಗೂಡಿ ಗೆಲುವಿನ ಔಪಚಾರವನ್ನೂ ಮಾರ್ಷ್‌ ಪೂರೈಸಿದರು.

ಆಸ್ಟ್ರೇಲಿಯಾ ಬೌಲರ್‌ಗಳು ತೋರಿದ ನಿಯಂತ್ರಣ, ಅರ್ಷದೀಪ್‌, ಮೊಹಮ್ಮದ್ ಸಿರಾಜ್, ಹರ್ಷಿತ್‌ ರಾಣಾ ಬೌಲಿಂಗ್‌ನಲ್ಲಿ ಕಾಣಲಿಲ್ಲ. ಮಾರ್ಷ್‌ ಅಂತೂ ಈ ಮೂವರ ಬೌಲಿಂಗ್‌ನಲ್ಲೂ ಒಂದೊಂದು ಸಿಕ್ಸರ್ ಎತ್ತಿದರು. 

ಅಬ್ಬರಿಸದ ರೋ–ಕೊ:

ಮಳೆಯಿಂದಾಗಿ ಆಗಾಗ ಪಂದ್ಯ ನಿಲುಗಡೆ, ಆಸ್ಟ್ರೇಲಿಯಾದ ಬಿರುವೇಗದ ದಾಳಿಯೆದುರು ಭಾರತದ ಆಟ ಸಪ್ಪೆಯೆನಿಸಿತು. ಮಳೆಯಾಗುವ ಮೊದಲೇ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳು ಒಪ್ಟಸ್‌ ಕ್ರೀಡಾಂಗಣದಲ್ಲಿ ಭಾರತದ ಬ್ಯಾಟರ್‌ಗಳ ಮೇಲೆರಗಿದ್ದರು.

ಭಾರತಕ್ಕೆ 500ನೇ ಪಂದ್ಯ ಆಡಿದ ರೋಹಿತ್ ಜೊತೆ ನೂತನ ನಾಯಕ ಗಿಲ್‌ ಅವರು ಮೈದಾನಕ್ಕಿಳಿದಾಗ ಹರ್ಷೋದ್ಗಾರಗಳು ಮೊಳಗಿದವು. ಆದರೆ ರೋಹಿತ್ ಅವರು 14 ಎಸೆತಗಳನ್ನಷ್ಟೇ ಆಡಿದರು. ಒಂದು ನೇರ ಡ್ರೈವ್‌ ಮೂಲಕ ಬೌಂಡರ ಗಿಟ್ಟಿಸಿದರು. ಆದರೆ ಹೇಜಲ್‌ವುಡ್‌ ಬೌಲಿಂಗ್‌ನಲ್ಲಿ ಬೌನ್ಸ್‌ ಅಂದಾಜಿಸುವಲ್ಲಿ ಎಡವಿದ ಮುಂಬೈನ ಆಟಗಾರ ಎರಡನೇ ಸ್ಲಿಪ್‌ನಲ್ಲಿ ಕ್ಯಾಚಿತ್ತರು. 

ಹರ್ಷೋದ್ಗಾರಗಳ ನಡುವೆ ಆಡಲಿಳಿದ ಕೊಹ್ಲಿ ಎದುರಿಸಿದ್ದು ಎಂಟು ಎಸೆತಗಳನ್ನು ಮಾತ್ರ. ಆಸ್ಟ್ರೇಲಿಯಾ ವಿರುದ್ಧವೂ ಸೇರಿದಂತೆ ಹಲವು ಸ್ಮರಣೀಯ ಇನಿಂಗ್ಸ್ ಆಡಿರುವ ಕೊಹ್ಲಿ ಅವರು ಮಿಚೆಲ್‌ ಸ್ಟಾರ್ಕ್ ಬೌಲಿಂಗ್‌ನಲ್ಲಿ ಡ್ರೈವ್ ಯತ್ನದಲ್ಲಿ ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಕೂಪರ್ ಕಾನೊಲಿ ಹಿಡಿದ ಅಮೋಘ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಇದು ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಗಳಿಸಿದ ಮೊದಲ ‘ಡಕ್‌’. 

ನಾಲ್ಕು ರನ್‌ಗಳ ತರುವಾಯ ಗಿಲ್‌, ನಥಾನ್ ಎಲಿಸ್‌ ಬೌಲಿಂಗ್‌ನಲ್ಲಿ ಫ್ಲಿಕ್‌ಗೆ ಯತ್ನಿಸಿ ವಿಕೆಟ್‌ಕೀಪರ್‌ ಫಿಲಿಪ್‌ ಲೆಗ್‌ಸೈಡ್‌ನತ್ತ ಜಿಗಿದು ಪಡೆದ ಕ್ಯಾಚಿಗೆ ಔಟಾದರು. ಉಪ ನಾಯಕ ಶ್ರೇಯಸ್ ಅಯ್ಯರ್ ಇದೇ ಮಾದರಿಯಲ್ಲಿ ನಿರ್ಗಮಿಸಿದರು.

ಅಕ್ಷರ್ ಪಟೇಲ್ (31, 38ಎ) ಮತ್ತು  ಕೆ.ಎಲ್‌.ರಾಹುಲ್ (38, 31ಎ) ನಡುವಣ ಐದನೇ ವಿಕೆಟ್‌ಗೆ 39 ರನ್‌ಗಳು ಬಂದವು. ಸ್ಪಿನ್ನರ್ ಮ್ಯಾಥ್ಯೂ ಕುನೆಮನ್ ಈ ಜೊತೆಯಾಟ ಮುರಿದರು. ರಾಹುಲ್ ವಿಶ್ವಾಸದಿಂದ ಆಡಿದರು. ಎಲಿಸ್‌ ಬೌಲಿಂಗ್‌ನಲ್ಲಿ ಸತತ ಬೌಂಡರಿಗಳನ್ನು ಹೊಡೆದರು. ಶಾರ್ಟ್‌ ಬೌಲಿಂಗ್‌ನಲ್ಲಿ ಸತತ ಸಿಕ್ಸರ್‌ಗಳನ್ನು ಎತ್ತಿದರು. ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಆರನೆ ವಿಕೆಟ್‌ಗೆ 30 ರನ್‌ಗಳು ಬಂದವು. ಆದರೆ ನಂತರ ಮತ್ತಷ್ಟು ವಿಕೆಟ್‌ಗಳು ಉರುಳಿದ್ದರಿಂದ ರನ್‌ವೇಗ ತಗ್ಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.