ADVERTISEMENT

IND vs AUS | ಬೂಮ್ರಾಗೆ 5 ವಿಕೆಟ್: ಹೆಡ್, ಸ್ಮಿತ್ ಶತಕ; ಆಸೀಸ್‌ ಮೇಲುಗೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2024, 2:42 IST
Last Updated 15 ಡಿಸೆಂಬರ್ 2024, 2:42 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್</p></div>

ಜಸ್‌ಪ್ರೀತ್ ಬೂಮ್ರಾ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್

   

(ಚಿತ್ರ ಕೃಪೆ: X@BCCI, X@cricketcomau)

ಬ್ರಿಸ್ಬೇನ್: ಟ್ರಾವಿಸ್ ಹೆಡ್ (152) ಮತ್ತು ಸ್ಟೀವ್ ಸ್ಮಿತ್ (102) ಗಳಿಸಿದ ಅಮೋಘ ಶತಕಗಳ ನೆರವಿನಿಂದ ಭಾರತ ವಿರುದ್ಧ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.

ADVERTISEMENT

ಮೊದಲ ದಿನದಾಟ ಮಳೆಯಿಂದಾಗಿ ಬಹುತೇಕ ಸ್ಥಗಿತಗೊಂಡಿದ್ದರೆ ಎರಡನೇ ದಿನದಾಟದಲ್ಲಿ ಆಸೀಸ್ ಬ್ಯಾಟರ್‌ಗಳು ಪಾರುಪತ್ಯ ಮೆರೆದಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ 101 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದೆ.

ಆ ಮೂಲಕ ಒಂದೇ ದಿನದಾಟದಲ್ಲಿ 377 ರನ್‌ಗಳು ಹರಿದು ಬಂದವು. ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮಗದೊಮ್ಮೆ ಐದು ವಿಕೆಟ್‌ಗಳ (72ಕ್ಕೆ 5) ಸಾಧನೆ ಮಾಡಿದರು.

ಹೆಡ್ ಸತತ ಎರಡನೇ ಶತಕ; ಲಯಕ್ಕೆ ಮರಳಿದ ಸ್ಮಿತ್ ಸೆಂಚುರಿ...

ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ನಾಲ್ಕನೇ ವಿಕೆಟ್‌ಗೆ ದ್ವಿಶತಕದ (241) ಜೊತೆಯಾಟ ಕಟ್ಟಿದರು. ಇದರಿಂದ ಭಾರತ ಹಿನ್ನಡೆ ಅನುಭವಿಸಬೇಕಾಯಿತು.

ಟ್ರಾವಿಸ್ ಹೆಡ್ ಸರಣಿಯಲ್ಲಿ ಸತತ ಎರಡನೇ ಶತಕದ ಸಾಧನೆ ಮಾಡಿದರು. ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೂ ಹೆಡ್ ಮ್ಯಾಚ್ ವಿನ್ನಿಂಗ್ ಶತಕ ಗಳಿಸಿದ್ದರು.

ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಹೆಡ್ 152 ರನ್ ಗಳಿಸಿ ಮಿಂಚಿದರು. 160 ಎಸೆತಗಳ ಇನಿಂಗ್ಸ್‌ನಲ್ಲಿ 18 ಬೌಂಡರಿಗಳು ಸೇರಿದ್ದವು.

ಮತ್ತೊಂದೆಡೆ ಬ್ಯಾಟಿಂಗ್ ಲಯಕ್ಕೆ ಮರಳಿದ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 33ನೇ ಶತಕದ ಸಾಧನೆ ಮಾಡಿದರು. ಕಲಾತ್ಮಕ ಇನಿಂಗ್ಸ್ ಕಟ್ಟಿದ ಸ್ಮಿತ್ 101 ರನ್ ಗಳಿಸಿ ಔಟ್ ಆದರು.

ಬೂಮ್ರಾಗೆ ಐದು ವಿಕೆಟ್...

ಮಳೆಯಿಂದಾಗಿ ಮೊದಲ ದಿನದಾಟ ಬಹುತೇಕ ಸ್ಥಗಿತಗೊಂಡಿತ್ತು. ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತ್ತು.

ಆದರೆ ಇಂದು ಮಳೆ ಅಡ್ಡಿಯಾಗಲಿಲ್ಲ. ಕೈಯಲ್ಲಿ ಚೆಂಡು ಹಿಡಿದ ಜಸ್‌ಪ್ರೀತ್ ಬೂಮ್ರಾ ತಮ್ಮ ಎಂದಿನ ಶೈಲಿಯಲ್ಲಿ ನಿಖರ ದಾಳಿ ಸಂಘಟಿಸುವ ಮೂಲಕ ಆರಂಭಿಕರನ್ನು ಹೊರದಬ್ಬಿದರು. ಉಸ್ಮಾನ್ ಖ್ವಾಜಾ (21) ಮತ್ತು ನೇಥನ್ ಮೆಕ್‌ಸ್ವೀನಿ (9) ಅವರನ್ನು ಬಲೆಗೆ ಬೀಳಿಸಿದರು.

ಇದರ ಬೆನ್ನಲ್ಲೇ ಮಾರ್ನಸ್ ಲಾಬುಷೇನ್ (12) ಅವರಿಗೆ ನಿತೀಶ್ ಕುಮಾರ್ ರೆಡ್ಡಿ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ಆಸ್ಟ್ರೇಲಿಯಾ 75 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು.

ಆದರೆ ನಾಲ್ಕನೇ ವಿಕೆಟ್‌ಗೆ ಹೆಡ್ ಹಾಗೂ ಸ್ಮಿತ್ ಜೋಡಿಯ ದ್ವಿಶತಕದ ಜತೆಯಾಟವು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಆದರೂ ಛಲ ಬಿಡದ ಬೂಮ್ರಾ ಹೆಡ್, ಸ್ಮಿತ್ ಜತೆಗೆ ಮಿಷೆಲ್ ಮಾರ್ಷ್ (5) ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಐದು ವಿಕೆಟ್ ಸಾಧನೆ ಮಾಡಿದರು.

ಆ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ 12ನೇ ಸಲ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.

ಅಲೆಕ್ಸ್ ಕ್ಯಾರಿ (45*) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (20) ಸಹ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಈ ಪೈಕಿ ಕಮಿನ್ಸ್ ಅವರನ್ನು ಮೊಹಮ್ಮದ್ ಸಿರಾಜ್ ಹೊರದಬ್ಬಿದರು.

ಕ್ಯಾರಿ ಹಾಗೂ ಮಿಚೆಲ್ ಸ್ಟಾರ್ಕ್ (7*) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ರವೀಂದ್ರ ಜಡೇಜ ಹಾಗೂ ಆಕಾಶ್ ದೀಪ್ ತಂಡವನ್ನು ಸೇರಿದ್ದಾರೆ. ಇವರಿಗಾಗಿ ರವಿಚಂದ್ರನ್ ಅಶ್ವಿನ್ ಮತ್ತು ಹರ್ಷೀತ್ ರಾಣಾ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟು ಕೊಟ್ಟಿದ್ದಾರೆ.

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪೈಕಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 295 ರನ್ ಅಂತರದ ಜಯ ಗಳಿಸಿದ್ದರೆ ಅಡಿಲೇ‌ಡ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಇದರೊಂದಿಗೆ ಸರಣಿಯು 1-1ರ ಅಂತರದಲ್ಲಿ ಸಮಬಲಗೊಂಡಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ತಲುಪುವ ನಿಟ್ಟಿನಲ್ಲಿ ಉಳಿದಿರುವ ಮೂರು ಪಂದ್ಯಗಳು ಇತ್ತಂಡಗಳ ಪಾಲಿಗೂ ನಿರ್ಣಾಯಕವೆನಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.