ADVERTISEMENT

AUS vs IND Test | ಮಳೆಯಿಂದಾಗಿ ಪಂದ್ಯ ಡ್ರಾ; ಸೋಲು ತಪ್ಪಿಸಿಕೊಂಡ ಭಾರತ

ಮಧು ಜವಳಿ
Published 18 ಡಿಸೆಂಬರ್ 2024, 1:44 IST
Last Updated 18 ಡಿಸೆಂಬರ್ 2024, 1:44 IST
<div class="paragraphs"><p>ಟೀಮ್ ಇಂಡಿಯಾ ಆಟಗಾರರ ಸಂಭ್ರಮ</p></div>

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: X/@BCCI)

ಬ್ರಿಸ್ಬೇನ್: ಇದೇ ಗಾಬಾ ಕ್ರೀಡಾಂಗಣದಲ್ಲಿ ಭಾರತ ತಂಡವು 2021ರಲ್ಲಿ ಅಮೋಘವಾದ ಟೆಸ್ಟ್ ಜಯಸಾಧಿಸಿತ್ತು. ವಿದೇಶಿ ನೆಲದಲ್ಲಿ ಸಾಧಿಸಿದ ದೊಡ್ಡ ಜಯ ಅದಾಗಿತ್ತು. ಆ ನೆನಪಿನ ಜೊತೆಗೆ ಬುಧವಾರ ಮತ್ತೊಂದು ಸಂಗತಿ ಸೇರಿಕೊಂಡಿತು. ಅದೇನೆಂದರೆ ಭಾರತ ತಂಡವು ಸೋಲಿನ ದವಡೆಯಿಂದ ಪಾರಾದ ಯಶೋಗಾಥೆ. 

ADVERTISEMENT

ಮಳೆಯಿಂದಾಗಿ ಬಹಳಷ್ಟು ಸಮಯ ನಷ್ಟವಾದ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ಪಡೆಯು ಡ್ರಾ ಮಾಡಿಕೊಂಡಿತು. ಬಾರ್ಡರ್‌ –ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಕೊನೆಯ ದಿನವಾದ ಬುಧವಾರ ಮಳೆಯಿಂದಾಗಿ ಆಟಗಾರರು ಡ್ರೆಸಿಂಗ್‌ ರೂಮ್‌ನಲ್ಲಿಯೇ ಹೆಚ್ಚು ಕಾಲ ಕಳೆದರು. 

ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರಲಿಯಾ ಗಳಿಸಿದ್ದ 445 ರನ್‌ಗಳಿಗೆ ಉತ್ತರವಾಗಿ ಭಾರತ 260 ರನ್ ಗಳಿಸಿ ಆಲೌಟ್ ಆಯಿತು. ಮಂಗಳವಾರ ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದ ಆಕಾಶ್ ದೀಪ್ ಮತ್ತು ಬೂಮ್ರಾ ಫಾಲೋ ಆನ್‌ ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬುಧವಾರ ಬೆಳಿಗ್ಗೆ ಆಕಾಶ್ (31 ರನ್) ವಿಕೆಟ್ ಪಡೆಯುವಲ್ಲಿ ಟ್ರಾವಿಸ್ ಹೆಡ್ ಸಫಲರಾದರು. 

185 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯರು 33 ರನ್‌ ಗಳಿಸುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡರು. ಜಸ್‌ಪ್ರೀತ್ ಬೂಮ್ರಾ 3, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ತಲಾ ಎರಡು ವಿಕೆಟ್ ಗಳಿಸಿದರು. 

ಈ ನಡುವೆ ಮಳೆಯೂ ಆಗಾಗ ಕಾಡಿತು. 89 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಡಿಕ್ಲೇರ್ ಮಾಡಿಕೊಂಡಿತು. 275 ರನ್‌ಗಳ ಗೆಲುವಿನ ಗುರಿಯೊಡ್ಡಿತು. ಭಾರತ ತಂಡವು ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಆರಂಭವಾಯಿತು. ಆಟ ನಿಂತಿತು.  ಪರ್ತ್‌ನಲ್ಲಿ ಗೆದ್ದಿದ್ದ ಭಾರತ ತಂಡವು ಅಡಿಲೇಡ್‌ನಲ್ಲಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಸೋಲನುಭವಿಸಿತ್ತು. ಇದರಿಂದಾಗಿ ಮೂರು ಪಂದ್ಯಗಳ ನಂತರ ಸರಣಿಯು 1–1ರ ಸಮಬಲ ಸಾಧಿಸಿತು.  ಇನ್ನೆರಡು ಪಂದ್ಯಗಳು ಮೇಲ್ಬರ್ನ್ (ಡಿ. 26 ರಿಂದ 30) ಮತ್ತು ಸಿಡ್ನಿ (ಜ 3 ರಿಂದ 7) ಈಗ ಕುತೂಹಲದ ಕೇಂದ್ರಬಿಂದುವಾಗಿವೆ.

ಮೂರನೇ ಪಂದ್ಯದ ಡ್ರಾದಿಂದ ರೋಹಿತ್ ಪಡೆಯು ಸಮಾಧಾನ ಪಟ್ಟಿರಬಹುದು. ಆದರೆ ಈ ಪಂದ್ಯದ ಸ್ಕೋರ್‌ ಕಾರ್ಡ್‌ನ ಹಿನ್ನೆಲೆಯಲ್ಲಿ ಹಲವು ಪಾಠಗಳಿವೆ.

ಬೂಮ್ರಾ ಮತ್ತು ಆಕಾಶ್‌ದೀಪ್ ಅವರು ಕೊನೆಯ ವಿಕೆಟ್ ಜೊತೆಯಾಟ ದಲ್ಲಿ ದಿಟ್ಟ ಆಟವಾಡದೇ ಹೋಗಿ ದ್ದರೆ ಭಾರತ ಫಾಲೋ  ಆನ್ ಅನುಭವಿಸಬೇಕಿತ್ತು. ಪಂದ್ಯದ ಫಲಿತಾಂಶ ಬಹುಶಃ ಬೇರೆಯೇ ಆಗಿರುತ್ತಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.