ADVERTISEMENT

IND vs AUS Test | ರೋಚಕ ಸ್ಥಿತಿಯತ್ತ ಅಂತಿಮ ಟೆಸ್ಟ್‌

ಎರಡನೇ ದಿನ 15 ವಿಕೆಟ್ ಪತನ * ಪಂತ್‌ ಮಿಂಚಿನ ಅರ್ಧ ಶತಕ * ಮೂರೇ ದಿನಕ್ಕೆ ಪಂದ್ಯ ಮುಗಿಯುವ ಸಾಧ್ಯತೆ

ಮಧು ಜವಳಿ
Published 4 ಜನವರಿ 2025, 23:30 IST
Last Updated 4 ಜನವರಿ 2025, 23:30 IST
<div class="paragraphs"><p>ರಿಷಭ್‌ ಪಂತ್‌ ಬ್ಯಾಟಿಂಗ್‌ ವೈಖರಿ</p><p></p></div>

ರಿಷಭ್‌ ಪಂತ್‌ ಬ್ಯಾಟಿಂಗ್‌ ವೈಖರಿ

   

ಸಿಡ್ನಿ: ಪ್ರೇಕ್ಷಕರಿಂದ ಕಿಕ್ಕಿರಿದಿದ್ದ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಐದನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಶನಿವಾರ ಚೆಂಡು ಮತ್ತು ಬ್ಯಾಟಿನ ಮಧ್ಯೆ ಕುತೂಹಲಕರ ಹೋರಾಟ ನಡೆದು 15 ವಿಕೆಟ್‌ಗಳು ‍ಪತನಗೊಂಡವು. ವೇಗದ ಬೌಲರ್‌ಗಳಿಗೆ ಸ್ನೇಹಿಯಾಗಿರುವ ಈ ಪಿಚ್‌ ಅದೃಷ್ಟದ ಏರಿಳಿತ ಕಂಡಿದ್ದು, ಪಂದ್ಯ ಈಗ ಕುತೂಹಲದ ಸ್ಥಿತಿಗೆ ತಲುಪಿದೆ.

ADVERTISEMENT

ಮೂರನೇ ದಿನವೇ ಪಂದ್ಯ ಮುಗಿಯುವ ಸಾಧ್ಯತೆ ಹೆಚ್ಚಾಗಿದೆ. ಭಾರತದ 185 ರನ್‌ಗಳಿಗೆ ಉತ್ತರವಾಗಿ ಮೊದಲ ದಿನದಾಟದ ಕೊನೆಗೆ 1 ವಿಕೆಟ್‌ಗೆ 9 ರನ್ ಗಳಿಸಿದ್ದ ಆತಿಥೇಯ ತಂಡವು, ಭಾರತದ ಕರಾರುವಾಕ್‌ ಬೌಲಿಂಗ್‌ ದಾಳಿಯೆದುರು 181 ರನ್‌ಗಳಿಗೆ ಆಲೌಟ್‌ ಆಯಿತು. ಆದರೆ ತಿರುಗೇಟು ನೀಡಿದ ಕಮಿನ್ಸ್ ಬಳಗ ಎರಡನೇ ಇನಿಂಗ್ಸ್‌ನಲ್ಲಿ ಭಾರತವನ್ನು 6 ವಿಕೆಟ್‌ಗೆ 141 ರನ್‌ಗಳಿಗೆ ಸೀಮಿತ ಗೊಳಿಸಿದೆ. ಒಟ್ಟಾರೆ ಮುನ್ನಡೆ 145 ರನ್‌ ಮಾತ್ರ. ರವೀಂದ್ರ ಜಡೇಜ (ಬ್ಯಾಟಿಂಗ್ 8) ಮತ್ತು ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್ 4) ಕ್ರೀಸ್‌ನಲ್ಲಿದ್ದರು.

ಮೂರನೇ ದಿನದಾಟಕ್ಕೆ ನಾಯಕ ಜಸ್‌ಪ್ರೀತ್ ಬೂಮ್ರಾ ಅವರ ಲಭ್ಯತೆ ಖಚಿತವಾಗಿಲ್ಲದಿರುವ ಕಾರಣ ಭಾರತ ಹೆಚ್ಚಿನ ಮೊತ್ತ ಕಲೆಹಾಕಬೇಕಾಗಿದೆ. ಇದಕ್ಕೆ, ಕ್ರೀಸಿನಲ್ಲಿರುವ ತಂಡದ ಕೊನೆಯ ಪರಿಣತ ಬ್ಯಾಟರ್‌ಗಳ ಜೋಡಿಯಾಗಿರುವ ಜಡೇಜ ಮತ್ತು ವಾಷಿಂಗ್ಟನ್‌ ಅವರು ಸಾಧ್ಯವಾದಷ್ಟು ಹೆಚ್ಚು ರನ್‌ ಗಳಿಸಬೇಕಾಗುತ್ತದೆ. 

ಪಂತ್‌ ಬೀಸಾಟ: ಭಾರತ ಎರಡನೇ ಇನಿಂಗ್ಸ್‌ನಲ್ಲಿ ಈ ಮೊತ್ತ ತಲುಪಲು ರಿಷಭ್ ಪಂತ್ ಅವರ ಸರಾಗ ಬ್ಯಾಟಿಂಗ್ ಕಾರಣ ವಾಯಿತು. ಟೀಕೆಗಳ ಕಾರಣ ಮೊದಲ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಆಟವಾಡಿದ್ದ ಅವರು ಈ ಬಾರಿ ತಮ್ಮ ಮೂಲಶೈಲಿಯ ಆಟ ಪ್ರದರ್ಶಿಸಿದರು. ಅಸ್ತಿತ್ವಕ್ಕೆ ಸವಾಲೊಡ್ಡುತ್ತಿದ್ದ ಪಿಚ್‌ನಲ್ಲಿ ಅವರು ಆಸ್ಟ್ರೇಲಿಯಾದ ಆಕ್ರಮಣಕ್ಕೆ ಪ್ರತ್ಯಾ ಕ್ರಮಣದ ಆಟವಾಡಿ, ಚೆಂಡನ್ನು ಮೈದಾನದ ಮೂಲೆಮೂಲೆಗಟ್ಟಿದರು. ಎಡಗೈ ಆಟಗಾರನ ಈ ತಂತ್ರ ಫಲ ನೀಡಿತು. ಎದುರಾಳಿ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಳ್ಳುವ ಮುನ್ನ ಅವರು ಕೇವಲ 33 ಎಸೆತಗಳಲ್ಲಿ ಆರು ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದ 61 ರನ್ ಸಿಡಿಸಿದರು.

ವಿರಾಟ್‌ಗೆ ಕರತಾಡನ: ಆಸ್ಟ್ರೇಲಿಯಾದ ನೆಲದಲ್ಲಿ ವಿರಾಟ್‌ ಕೊಹ್ಲಿ (6) ಅವರ ಬಹುತೇಕ ಕೊನೆಯ ಇನಿಂಗ್ಸ್ ಕೂಡ ನಿರಾಸೆ ಮೂಡಿಸಿತು. ಆದರೆ, ಅವರು ಪೆವಿಲಿಯನ್‌ನತ್ತ ಹೆಚ್ಚು ಹಾಕುತ್ತಿದ್ದಂತೆ ಕೇಕೆಗಳು ಮಾಯವಾದವು. ಪ್ರೇಕ್ಷಕರು ಎದ್ದುನಿಂತು ಕರತಾಡನದ ಅಭಿನಂದನೆ ಸಲ್ಲಿಸಿದರು.

ಹಂಗಾಮಿ ನಾಯಕ ಬೂಮ್ರಾ ಅವರ ಅನುಪಸ್ಥಿತಿಯಿಂದ ಭಾರತ ತಂಡ ತಕ್ಷಣಕ್ಕೆ ಕುಗ್ಗಿದಂತೆ ಕಾಣಲಿಲ್ಲ. ಅವರು ಲಂಚ್‌ ನಂತರ ಕೇವಲ ಒಂದು ಓವರ್ ಬೌಲ್ ಮಾಡಿ ಬೆನ್ನು ನೋವಿನಿಂದಾಗಿ ಮೈದಾನದಿಂದ ನಿರ್ಗಮಿಸಿ ಆಸ್ಪತ್ರೆಗೆ ತೆರಳಿದರು. ಸ್ಕ್ಯಾನಿಂಗ್‌ ವರದಿಗೆ ಕಾಯಲಾಗುತ್ತಿದ್ದು, ಈ ಪ್ರಮುಖ ಬೌಲರ್‌ ಮೂರನೇ ದಿನ ಲಭ್ಯರಾಗುವರೇ ಇಲ್ಲವೇ ಎಂಬ ಅನಿಶ್ಚಯ ಭಾರತದ ಆತಂಕಕ್ಕೆ ಕಾರಣವಾಗಿದೆ. ಸರಣಿ ಸಮಗೊಳಿಸಬೇಕಾದರೆ ಅವರ ಬೌಲಿಂಗ್ ಭಾರತದ ಪಾಲಿಗೆ ಪ್ರಮುಖವಾಗಿದೆ.

ಶುಕ್ರವಾರದ ಕೊನೆಯಲ್ಲಿ ಬೂಮ್ರಾ ಅವರನ್ನು ಆಸ್ಟ್ರೇಲಿಯಾದ ಕಾನ್ಸ್‌ಟೆಸ್‌ ಕೆಣಕಿದ್ದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಬೂಮ್ರಾ, ಉಸ್ಮಾನ್‌ ಕ್ವಾಜಾ ಅವರ ವಿಕೆಟ್‌ ಪಡೆದಿದ್ದರು. ಶನಿವಾರ ಅಂಗಣಕ್ಕಿಳಿದಾಗ ಭಾರತ ಆ ಗುಂಗಿನಿಂದ ಹೊರಬಂದಿರಲಿಲ್ಲ. ಬೂಮ್ರಾ ಅವರ ಬೌಲಿಂಗ್‌ನಲ್ಲಿ ಕಾನ್ಸ್‌ಟೆಸ್‌ ಬಚಾವಾದರೂ, ಸಿರಾಜ್‌ ಅವರ ಬೌಲಿಂಗ್‌ನಲ್ಲಿ ಗಲಿಯಲ್ಲಿ ಕ್ಯಾಚಿತ್ತು ಹಿಂತಿರುಗಿದರು. ಆಸ್ಟ್ರೇಲಿಯಾದ ಆಪತ್ಬಾಂಧವ ಟ್ರಾವಿಸ್‌ ಹೆಡ್‌ ಅವರ ವಿಕೆಟ್‌ ಕೂಡ ಸಿರಾಜ್ ಪಾಲಾಯಿತು. ಇದಕ್ಕೆ ಮೊದಲು ಲಾಬುಷೇನ್ ಅವರ ವಿಕೆಟ್‌ ಅನ್ನೂ ಬೂಮ್ರಾ ಪಡೆದಿದ್ದರು. ಆಗ ಆಸ್ಟ್ರೇಲಿಯಾದ ಮೊತ್ತ 4 ವಿಕೆಟ್‌ಗೆ 37.

ಬೂಮ್ರಾ ಮೈದಾನದಿಂದ ನಿರ್ಗಮಿಸುತ್ತಿದ್ದಂತೆ ಗಮನ ಇತರ ಬೌಲರ್‌ಗಳ ಮೇಲೆ ಹರಿಯಿತು. ಪ್ರಸಿದ್ಧ ಕೃಷ್ಣ (42ಕ್ಕೆ3) ಸಂದರ್ಭಕ್ಕೆ ಸ್ಪಂದಿಸಿದರು. ತಮ್ಮ ಮೊದಲ ಎಸೆತದಲ್ಲೇ ಸ್ಟೀವ್‌ ಸ್ಮಿತ್ ಅವರನ್ನು ಅಚ್ಚರಿಯಲ್ಲಿ ಕೆಡವಿ ಎರಡನೇ ಸ್ಲಿಪ್‌ನಲ್ಲಿ ಕ್ಯಾಚ್‌ ಕೊಡಿಸಿದರು. ಸ್ಮಿತ್ ಮತ್ತು ಪದಾರ್ಪಣೆ ಮಾಡಿದ ಬ್ಯೂ ವೆಬ್‌ಸ್ಟರ್‌ (57, 105ಎ, 4x5) ಐದನೇ ವಿಕೆಟ್‌ಗೆ 57 ರನ್ ಸ್ಥಿರತೆ ನೀಡುವಂತೆ ಕಂಡಾಗ ಲಂಚ್‌ಗೆ ಸ್ವಲ್ಪ ಮೊದಲು ಪ್ರಸಿದ್ಧ ಈ ವಿಕೆಟ್ ಪಡೆದರು.

ವೆಬ್‌ಸ್ಟರ್ ಅವರು ವಿಶ್ವಾಸದಿಂದ ಆಡತೊಡಗಿದರು. ಸ್ಮಿತ್ ನಂತರ ಅವರು ಅಲೆಕ್ಸ್‌ ಕ್ಯಾರಿ ಜೊತೆಗೆ 41 ರನ್ ಸೇರಿಸಿ ಆಸ್ಟ್ರೇಲಿಯಾ ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಈ ಹಂತದಲ್ಲಿ ಕ್ಯಾರಿ ಅವರ ರಕ್ಷಣೆ ಭೇದಿಸಿದ ಪ್ರಸಿದ್ಧ ಮತ್ತೊಮ್ಮೆ ಈ ಜೊತೆಯಾಟವನ್ನು ಮುರಿದರು. ಅವರ ಮೂರು ವಿಕೆಟ್‌ಗಳ ಜೊತೆ ನಿತೀಶ್ ರೆಡ್ಡಿ ಕೊನೆಗಳಿಗೆಯಲ್ಲಿ ಎರಡು ವಿಕೆಟ್‌ ಪಡೆದಿದ್ದರಿಂದ ಆಸ್ಟ್ರೇಲಿಯಾ 181 ರನ್‌ಗಳಿಗೆ ಆಟ ಮುಗಿಸಿತು. ಭಾರತಕ್ಕೆ ಮನೋಬಲ ಹೆಚ್ಚಿಸುವ ನಾಲ್ಕು ರನ್‌ಗಳ ಅಲ್ಪ ಮುನ್ನಡೆ ದೊರೆಯಿತು.

ಲಂಚ್‌ಗೆ ಮೊದಲಿನ ಅವಧಿಯಲ್ಲಿ ಸಾಕಷ್ಟು ರನ್ ನೀಡಿದ್ದ ನಿತೀಶ್ ಕುಮಾರ್ ರೆಡ್ಡಿ, ಎರಡನೇ ಅವಧಿಯಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡಿದರು. ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಅವರನ್ನು ತಮ್ಮ ಓವರ್‌ನ ಕೊನೆಯ ಎಸೆತದಲ್ಲಿ ಔಟ್‌ ಪಡೆದ ಅವರು ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಮಿಚೆಲ್‌ ಸ್ಟಾರ್ಕ್ ಅವರ ವಿಕೆಟ್‌ ಪಡೆದು ಹ್ಯಾಟ್ರಿಕ್ ಅವಕಾಶವನ್ನೂ ಪಡೆದಿದ್ದರು. ಬೂಮ್ರಾ ಗೈರಿನಲ್ಲಿ ಅವರು ಸಿರಾಜ್ ಮತ್ತು ಪ್ರಸಿದ್ಧ ಅವರಿಗೆ ಬೆಂಬಲ ನೀಡಿದರು.

ಆಸ್ಟ್ರೇಲಿಯಾ ನೆಲದಲ್ಲಿ ಪಂತ್ ದಾಖಲೆ

ಸಿಡ್ನಿ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ರಿಷಭ್ ಪಂತ್‌ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟೆಸ್ಟ್‌ನಲ್ಲಿ ಇದು ಭಾರತದ ಆಟಗಾರನೊಬ್ಬನ ಎರಡನೇ ಅತಿ ವೇಗದ ಅರ್ಧಶತಕವಾಗಿದೆ. ಅತಿ ವೇಗದ ಅರ್ಧಶತಕ ಕೂಡಾ ಅವರ ಹೆಸರಿನಲ್ಲೇ ದಾಖಲಾಗಿದೆ. 2022ರಲ್ಲಿ ಶ್ರೀಲಂಕಾ ವಿರುದ್ಧ 28 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದಾರೆ.

ಅಲ್ಲದೆ, ಆಸ್ಟ್ರೇಲಿಯಾ ನೆಲದಲ್ಲಿ ವಿದೇಶಿ ಬ್ಯಾಟರ್ ಬಾರಿಸಿದ ವೇಗದ ಅರ್ಧಶತಕ ಇದಾಗಿದೆ. ಈ ಹಿಂದೆ ಇಂಗ್ಲೆಂಡ್‌ನ ಜಾನ್ ಬ್ರೌನ್‌ (ಮೆಲ್ಬರ್ನ್‌, 1985) ಹಾಗೂ ವೆಸ್ಟ್ ಇಂಡೀಸ್‌ನ ರಾಯ್ ಫೆಡ್ರಿಕ್ಸ್ (ಪರ್ತ್‌ 1975) ಅವರು 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಟೆಸ್ಟ್​​ನಲ್ಲಿ ಎರಡು ಬಾರಿ 30ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಂತ್‌ ಪಾತ್ರವಾಗಿದ್ದಾರೆ.

ವೇಗದ ಅರ್ಧಶತಕದ ದಾಖಲೆ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಹೆಸರಿನಲ್ಲಿದೆ. ಅವರು ಅಬುದಾಬಿಯಲ್ಲಿ 2014ರಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 21 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಪ್ರಸಿದ್ಧ ಕೃಷ್ಣ ಅವರನ್ನು ಅಭಿನಂದಿಸಿದ ಕೆ.ಎಲ್‌. ರಾಹುಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.