ADVERTISEMENT

Cricket: ಮಿಂಚಿದ ಬೂಮ್ರಾ, ಕೊನೆಯಲ್ಲಿ ಕಾಡಿದ ಲಯನ್; ಆಸಿಸ್‌ಗೆ 333 ರನ್ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2024, 2:06 IST
Last Updated 29 ಡಿಸೆಂಬರ್ 2024, 2:06 IST
<div class="paragraphs"><p>ವಿಕೆಟ್ ಪಡೆದ ಸಂಭ್ರಮದಲ್ಲಿ ಜಸ್‌ಪ್ರೀತ್ ಬೂಮ್ರಾ (@BCCI) ಹಾಗೂ ಆಸ್ಟ್ರೇಲಿಯಾದ ನೇಥನ್‌ ಲಯನ್‌&nbsp;(ರಾಯಿಟರ್ಸ್‌ ಸಂಗ್ರಹ ಚಿತ್ರ) </p></div>

ವಿಕೆಟ್ ಪಡೆದ ಸಂಭ್ರಮದಲ್ಲಿ ಜಸ್‌ಪ್ರೀತ್ ಬೂಮ್ರಾ (@BCCI) ಹಾಗೂ ಆಸ್ಟ್ರೇಲಿಯಾದ ನೇಥನ್‌ ಲಯನ್‌ (ರಾಯಿಟರ್ಸ್‌ ಸಂಗ್ರಹ ಚಿತ್ರ)

   

ಚಿತ್ರಕೃಪೆ: BCCI ಹಾಗೂ ರಾಯಿಟರ್ಸ್‌

ಬೆಂಗಳೂರು: ಭಾರತ ಎದುರಿನ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ 4ನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಆತೀಥೇಯ ತಂಡಕ್ಕೆ 'ಬಾಲಂಗೋಚಿ' ಬ್ಯಾಟರ್‌ಗಳಾದ ನೇಥನ್‌ ಲಯನ್‌ ಹಾಗೂ ಸ್ಕಾಟ್‌ ಬೋಲ್ಯಾಂಡ್‌ ಆಸರೆಯಾದರು.

ADVERTISEMENT

ಅವರ ಆಟದ ಬಲದಿಂದ 4ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 228 ರನ್‌ ಕಲೆಹಾಕಿರುವ ಕಾಂಗರೂ ಪಡೆ, 333 ರನ್‌ಗಳ ಮುನ್ನಡೆ ಸಾಧಿಸಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ 474 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ, 369 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಹೀಗಾಗಿ, 105 ರನ್‌ಗಳ ಮುನ್ನಡೆ ಪಡೆದಿದ್ದ ಪ್ಯಾಟ್‌ ಕಮಿನ್ಸ್‌ ಬಳಗ, ಭಾರತಕ್ಕೆ ಬೃಹತ್‌ ಗುರಿ ನೀಡುವ ಲೆಕ್ಕಾಚಾರದಲ್ಲಿ ಕಣಕ್ಕಿಳಿದಿತ್ತು.

ಆದರೆ, ಅದಕ್ಕೆ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ಆರಂಭದಲ್ಲಿ ತೊಡಕಾದರು.

ಆಸಿಸ್‌ಗೆ ಮಾರ್ನಸ್, ಪ್ಯಾಟ್ ಆಸರೆ
ವಿಶ್ವಾಸದಿಂದಲೇ ಇನಿಂಗ್ಸ್‌ ಆರಂಭಿಸಿದ ಆಸಿಸ್‌ಗೆ ಬೂಮ್ರಾ 7ನೇ ಓವರ್‌ನಲ್ಲೇ ಮೊದಲ ಪೆಟ್ಟು ಕೊಟ್ಟರು. ಕಳೆದ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿ, ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದ ಸ್ಯಾಮ್‌ ಕೋನ್‌ಸ್ಟಾಸ್‌ (8 ರನ್‌) ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಆಘಾತ ನೀಡಿದರು.

ಕೋನ್‌ಸ್ಟಾಸ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಅನುಭವಿ ಉಸ್ಮಾನ್‌ ಖ್ವಾಜಾ (21 ರನ್) ಅವರಿಗೆ ಸಿರಾಜ್‌ ಪೆವಿಲಿಯನ್‌ ದಾರಿ ತೋರಿದರು. ನಂತರ ಬಂದ ಸ್ಟೀವ್‌ ಸ್ಮಿತ್ (13 ರನ್‌), ಟ್ರಾವಿಸ್‌ ಹೆಡ್‌ (1 ರನ್‌), ಮಿಚೇಲ್‌ ಮಾರ್ಷ್‌ (0) ಹಾಗೂ ಅಲೆಕ್ಸ್‌ ಕಾರಿ (2 ರನ್‌) ಅವರ ವಿಕೆಟ್‌ಗಳನ್ನು ಜಿದ್ದಿಗೆ ಬಿದ್ದವರಂತೆ ಹಂಚಿಕೊಂಡರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಇನ್ನೊಂದೆಡೆ ಗಟ್ಟಿಯಾಗಿ ನಿಂತ ಮಾರ್ನಸ್‌ ಲಾಬುಷೇನ್‌ 7ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕಮಿನ್ಸ್‌ ಜೊತೆಗೂಡಿ ಅರ್ಧಶತಕದ ಆಟವಾಡಿದರು. ಆ ಮೂಲಕ ತಮ್ಮ ತಂಡದ ಇನಿಂಗ್ಸ್‌ಗೆ ಚೇತರಿಕೆ ನೀಡಿದರು.

139 ಎಸೆತಗಳನ್ನು ಅಳೆದು ತೂಗಿ ಎದುರಿಸಿದ ಮಾರ್ನಸ್‌, ಮೂರು ಬೌಂಡರಿ ಸಹಿತ 70 ರನ್ ಗಳಿಸಿದ್ದಾಗ ಸಿರಾಜ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರವೂ ತುಸು ಹೋರಾಟ ನಡೆಸಿದ ಮಾಡಿದ ಕಮಿನ್ಸ್‌, 90 ಎಸೆತಗಳಲ್ಲಿ 40 ರನ್‌ ಗಳಿಸಿದ್ದಾಗ ರವೀಂದ್ರ ಜಡೇಜಗೆ ವಿಕೆಟ್‌ ಒಪ್ಪಿಸಿದರು.

ಕೊನೆಯಲ್ಲಿ 'ಲಯನ್' ಕಾಟ
ಕಮಿನ್ಸ್‌ ಅವರು 9ನೇ ವಿಕೆಟ್‌ ರೂಪದಲ್ಲಿ ಔಟಾದಾಗ ಕೇವಲ 5 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ನೇಥನ್‌ ಲಯನ್‌ ಹಾಗೂ ಸ್ಕಾಟ್‌ ಬೋಲ್ಯಾಂಡ್‌, ದಿನದಾಟದ ಕೊನೆಯಲ್ಲಿ ಟೀಂ ಇಂಡಿಯಾವನ್ನು ಕಾಡಿದರು. ಇನ್ನೇನು, ಆಸಿಸ್‌ ಇನಿಂಗ್ಸ್‌ ಮುಗಿಯಿತು ಎಂದುಕೊಂಡಿದ್ದವರ ಹುಬ್ಬೇರುವಂತೆ ಮಾಡಿದರು.

ಸಿರಾಜ್‌ ಜೀವದಾನ ನೀಡಿದ್ದರ ಲಾಭ ಎತ್ತಿಕೊಂಡ ಲಯನ್‌, ಎದುರಾಳಿ ಆಟಗಾರರು ಕೈಕೈ ಹಿಸುಕಿಕೊಳ್ಳುವಂತೆ ಮಾಡಿದರು. ಅದಲ್ಲದೆ, ದಿನದಾಟದ ಕೊನೇ ಓವರ್‌ನಲ್ಲಿ ಅವರು ನೀಡಿದ ಕ್ಯಾಚ್‌ ಅನ್ನು ಸ್ಲಿಪ್‌ನಲ್ಲಿದ್ದ ಕೆ.ಎಲ್‌. ರಾಹುಲ್‌ ಹಿಡಿದಿದ್ದರು. ಆದರೆ, ಬೂಮ್ರಾ ಹಾಕಿದ ಆ ಎಸೆತ ನೋ ಬಾಲ್‌ ಆದದ್ದು ಇನ್ನಷ್ಟು ದುಬಾರಿಯಾಯಿತು.

ಒಟ್ಟಾರೆ 54 ಎಸೆತಗಳನ್ನು ಎದುರಿಸಿದ ಲಯನ್‌, 5 ಬೌಂಡರಿ ಸಹಿತ 41 ರನ್‌ ಬಾರಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಬೋಲ್ಯಾಂಡ್‌ 65 ಎಸೆತಗಳಲ್ಲಿ 10 ರನ್‌ ಗಳಿಸಿದರು. ಮುರಿಯದ ಕೊನೇ ವಿಕೆಟ್‌ ಪಾಲುದಾರಿಕೆಯಲ್ಲಿ 55 ರನ್ ಕೂಡಿಸಿದ ಈ ಜೋಡಿ, ತಮ್ಮ ತಂಡದ ಇನಿಂಗ್ಸ್‌ಗೆ ತೆರೆ ಬೀಳುವುದನ್ನು ನಾಲ್ಕನೇ ದಿನ ತಡೆಯಿತು.

ಅದರೊಟ್ಟಿಗೆ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದ್ದಲ್ಲದೆ, ಮುನ್ನಡೆಯನ್ನು 330ಕ್ಕಿಂತ ಹೆಚ್ಚು ಮಾಡಿದರು.

ಭಾರತ ಪರ ಬೂಮ್ರಾ 4 ವಿಕೆಟ್ ಪಡೆದರೆ, ಸಿರಾಜ್‌ 3 ವಿಕೆಟ್ ಕಿತ್ತರು. ಒಂದು ವಿಕೆಟ್‌ ಅನ್ನು ಜಡೇಜ ಉರುಳಿಸಿದರು.

3.3 ಓವರ್‌ಗಳಲ್ಲಿ ಮುಗಿದ ಭಾರತದ ಆಟ
ಮೂರನೇ (ಶನಿವಾರ) ದಿನದಾಟ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ ಕಳೆದುಕೊಂಡು 358 ರನ್ ಗಳಿಸಿದ್ದ ಟೀಂ ಇಂಡಿಯಾ, ಆ ಮೊತ್ತಕ್ಕೆ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ, ದಿನದಾಟ ಆರಂಭವಾದ 3.3 ಓವರ್‌ಗಳಲ್ಲೇ ಭಾರತದ ಇನಿಂಗ್ಸ್‌ ಮುಕ್ತಾಯವಾಯಿತು. ಅಮೋಘ ಶತಕ ಸಿಡಿಸಿ ಕ್ರೀಸ್‌ನಲ್ಲಿ ಉಳಿದಿದ್ದ ನಿತೀಶ್ ಕುಮಾರ್‌ ರೆಡ್ಡಿ 114 ರನ್ ಗಳಿಸಿದ್ದಾಗ ಔಟಾದರು. 4 ರನ್‌ ಗಳಿಸಿದ್ದ ಸಿರಾಜ್‌ ಇನ್ನೊಂದು ತುದಿಯಲ್ಲಿ ಅಜೇಯರಾಗಿ ಉಳಿದರು. ಅವರ ಆಟದ ಬಲದಿಂದ ಬಾರತ 369 ರನ್ ಗಳಿಸಲು ಸಾಧ್ಯವಾಯಿತು.

ಸರಣಿ ಸಮಬಲ
ಪರ್ತ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದ ಭಾರತ, ಅಡಿಲೇಡ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ನಂತರ ಬ್ರಿಸ್ಬೇನ್‌ ಪಂದ್ಯದಲ್ಲಿ ಸೋಲು ತಪ್ಪಿಸಿಕೊಂಡು ಡ್ರಾ ಮಾಡಿಕೊಂಡಿತ್ತು. ಹೀಗಾಗಿ, ಸರಣಿ 1–1ರಲ್ಲಿ ಸಮಬಲಗೊಂಡಿದೆ.

ಈ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸುವ ಲೆಕ್ಕಚಾರದಲ್ಲಿ ಎರಡೂ ತಂಡಗಳು ಪೈಪೋಟಿ ನಡೆಸುತ್ತಿವೆ.

ಅಂತಿಮ ಪಂದ್ಯವು 2025ರ ಜನವರಿ 3ರಂದು ಸಿಡ್ನಿಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.