ADVERTISEMENT

Boxing Day Test: ಜೈಸ್ವಾಲ್ ಏಕಾಂಗಿ ಹೋರಾಟ ವ್ಯರ್ಥ; ಭಾರತಕ್ಕೆ 184 ರನ್ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2024, 2:09 IST
Last Updated 30 ಡಿಸೆಂಬರ್ 2024, 2:09 IST
<div class="paragraphs"><p>ಯಶಸ್ವಿ ಜೈಸ್ವಾಲ್‌ ಹಾಗೂ ಭಾರತದ ತಂಡದ ಆಟಗಾರರು</p></div>

ಯಶಸ್ವಿ ಜೈಸ್ವಾಲ್‌ ಹಾಗೂ ಭಾರತದ ತಂಡದ ಆಟಗಾರರು

   

ಚಿತ್ರಕೃಪೆ: X/@BCCI

ಮೆಲ್ಬರ್ನ್‌: ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ 4ನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ನಡೆಸಿದ ಹೋರಾಟದ ಹೊರತಾಗಿಯೂ, ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ಎದುರು 184 ರನ್‌ ಅಂತರದ ಸೋಲೊಪ್ಪಿಕೊಂಡಿದೆ.

ADVERTISEMENT

ಕಾಂಗರೂ ಪಡೆ ನೀಡಿದ 340 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜೈಸ್ವಾಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಕೇವಲ 9 ರನ್‌ ಗಳಿಸಿ ಔಟಾದರು. ಅವರ ಹಿಂದೆಯೇ ಕೆ.ಎಲ್‌. ರಾಹುಲ್ ಮತ್ತು ವಿರಾಟ್‌ ಕೊಹ್ಲಿ ಪೆವಿಲಿಯನ್‌ ಸೇರಿಕೊಂಡರು.

ಈ ಹಂತದಲ್ಲಿ ಜೈಸ್ವಾಲ್‌ಗೆ ಜೊತೆಯಾದ ರಿಷಭ್‌ ಪಂತ್‌, ವಿಕೆಟ್‌ ಬೀಳದಂತೆ ಎಚ್ಚರಿಕೆಯಿಂದ ಆಡಿದರು. ಬರೋಬ್ಬರಿ 32.3 ಓವರ್‌ ಕ್ರೀಸ್‌ನಲ್ಲಿ ಉಳಿದ ಈ ಜೋಡಿ, ಪಂದ್ಯ ಡ್ರಾ ಮಾಡಿಕೊಳ್ಳುವ ಭರವಸೆ ಮೂಡಿಸಿತ್ತು. ಆದರೆ, ಇವರಿಬ್ಬರನ್ನು ಟ್ರಾವಿಸ್‌ ಹೆಡ್‌ ದೂರ ಮಾಡಿದರು. 104 ಎಸೆತಗಳಲ್ಲಿ 30 ರನ್‌ ಗಳಿಸಿದ್ದ ಪಂತ್‌ ವಿಕೆಟ್ ಪಡೆಯುವುದರೊಂದಿಗೆ, 88 ರನ್‌ಗಳ ಜೊತೆಯಾಟವನ್ನು ಮುರಿದರು.

ಪಂತ್‌ ವಿಕೆಟ್‌ ಪತನದ ಬೆನ್ನಲ್ಲೇ, ಮತ್ತೆ ಕುಸಿತ ಶುರುವಾಯಿತು.

ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ನಿತೀಶ್‌ ಕುಮಾರ್‌ ರೆಡ್ಡಿ ಸೇರಿದಂತೆ, ಉಳಿದ ಬ್ಯಾಟರ್‌ಗಳು ಆಸಿಸ್‌ ದಾಳಿಗೆ ಎದುರಾಗಿ ನಿಲ್ಲಲು ವಿಫಲರಾದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ, ಏಕಾಂಗಿ ಹೋರಾಟ ನಡೆಸಿದ ಜೈಸ್ವಾಲ್‌ 208 ಎಸೆತಗಳಲ್ಲಿ 84 ರನ್‌ ಗಳಿಸಿ ಔಟಾದರು. ಮೊದಲ ಇನಿಂಗ್ಸ್‌ನಲ್ಲೂ 82 ರನ್‌ ಗಳಿಸಿ ರನೌಟ್‌ ಆಗಿದ್ದ ಅವರು, ಚೆಂದದ ಶತಕ ಗಳಿಸುವ ಅವಕಾಶವನ್ನು ಮತ್ತೆ ತಪ್ಪಿಸಿಕೊಂಡರು.

ಅಂತಿವಾಗಿ ಟೀಂ ಇಂಡಿಯಾ, 155 ರನ್‌ಗಳಿಗೆ ಸರ್ವಪತನ ಕಂಡಿತು.

ಎರಡಂಕಿ ದಾಟಿದ್ದು ಇಬ್ಬರೇ!
ಯಶಸ್ವಿ ಜೈಸ್ವಾಲ್‌ ಮತ್ತು ರಿಷಭ್‌ ಪಂತ್‌ ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌, ಈ ಇನಿಂಗ್ಸ್‌ನಲ್ಲಿ ಎರಡಂಕಿ ಮೊತ್ತ ಗಳಿಸಲಲ್ಲ. ರೋಹಿತ್‌ 9 ರನ್‌ ಗಳಿಸಿದರೆ, ಕೊಹ್ಲಿ ಆಟ 5 ರನ್‌ಗೆ ಕೊನೆಯಾಯಿತು. ರವೀಂದ್ರ ಜಡೇಜ 2, ನಿತೀಶ್‌ ಕುಮಾರ್‌ 1, ಆಕಾಶ್‌ ದೀಪ್‌ 7 ರನ್‌ ಗಳಿಸಿದರು. ರಾಹುಲ್‌, ಜಸ್‌ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ಸೊನ್ನೆ ಸುತ್ತಿದರು. 45 ಎಸೆತಗಳಲ್ಲಿ 5 ರನ್‌ ಗಳಿಸಿದ ವಾಷಿಂಗ್ಟನ್‌ ಸುಂದರ್‌ ಅಜೇಯರಾಗಿ ಉಳಿದರು.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 474 ರನ್‌ ಗಳಿಸಿದ್ದ ಆತಿಥೇಯ ತಂಡ, ಭಾರತವನ್ನು 369 ರನ್‌ ಗಳಿಗೆ ನಿಯಂತ್ರಿಸಿತ್ತು. 105 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿ, 234 ರನ್‌ ಕಲೆಹಾಕಿತ್ತು.

ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಸ್ಕಾಟ್‌ ಬೋಲ್ಯಾಂಡ್‌ ತಲಾ ಮೂರು ವಿಕೆಟ್‌ ಉರುಳಿಸಿದರು. ನೇಥನ್‌ ಲಯನ್‌ 2 ವಿಕೆಟ್‌ ಪಡೆದರೆ, ಇನ್ನೆರಡು ವಿಕೆಟ್‌ಗಳನ್ನು ಮಿಚೇಲ್‌ ಸ್ಟಾರ್ಕ್‌ ಮತ್ತು ಟ್ರಾವಿಸ್‌ ಹೆಡ್‌ ಹಂಚಿಕೊಂಡರು.

ಇದರೊಂದಿಗೆ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 2–1 ಅಂತರದ ಮುನ್ನಡೆ ಸಾಧಿಸಿತು. ಅಂತಿಮ ಪಂದ್ಯವು ಸಿಡ್ನಿಯಲ್ಲಿ ಜನವರಿ 3ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.