ADVERTISEMENT

IND vs AUS: ಸಿಡ್ನಿಯಲ್ಲಿ ನಿಂದನೆ, ಗಾಯ ಎಲ್ಲ ಸವಾಲನ್ನು ಮೆಟ್ಟಿ ನಿಂತ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2021, 9:20 IST
Last Updated 11 ಜನವರಿ 2021, 9:20 IST
ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್
ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್   

ಸಿಡ್ನಿ: ಭಾರತೀಯ ಬ್ಯಾಟ್ಸ್‌ಮನ್‌ಗಳು ತೋರಿದ ದಿಟ್ಟ ಹೋರಾಟದ ಬಲದಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ.

ಅಂತಿಮ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 407 ರನ್‌ಗಳ ಬೃಹತ್ ಮೊತ್ತ ಪೇರಿಸುವುದು ಅನುಮಾನ ಎಂದೇ ಭಾವಿಸಲಾಗಿತ್ತು. ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಿದಾಗಲೂ ಭಾರತದಿಂದ ಕನಿಷ್ಠ ಪಕ್ಷ ಪಂದ್ಯ ಉಳಿಸಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದರು.

ಆದರೆ ಈ ಎಲ್ಲ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿರುವ ಟೀಮ್ ಇಂಡಿಯಾ ಕೊನೆಯ ದಿನದಾಟ ಸೇರಿದಂತೆ 131 ಓವರ್‌ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಪಂದ್ಯ ಡ್ರಾ ಮಾಡುವಲ್ಲಿ ಯಶಸ್ವಿಯಾಗಿದೆ.

ADVERTISEMENT

ಹಲವಾರು ಕಾರಣಗಳಿಂದಾಗಿ ಸಿಡ್ನಿ ಟೆಸ್ಟ್ ಪಂದ್ಯವು ಸುದ್ದಿ ಗಿಟ್ಟಿಸಿಕೊಂಡಿತ್ತು. ಜನಾಂಗೀಯ ನಿಂದನೆ ಸೇರಿದಂತೆ ಸತತ ಗಾಯದ ಸಮಸ್ಯೆಯಿಂದ ಬಳಲಿದ ಟೀಮ್ ಇಂಡಿಯಾ ಆಟಗಾರರು ದಿಟ್ಟ ಮನೋಬಲವನ್ನು ತೋರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಾವು ಏಕೆ ಶ್ರೇಷ್ಠರು ಎಂಬುದನ್ನುನಿರೂಪಿಸಿದರು.

ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಮುರಿಯದ ಆರನೇ ವಿಕೆಟ್‌ಗೆ 256 ಎಸೆತಗಳಲ್ಲಿ 62 ರನ್‌ಗಳ ಅಮೂಲ್ಯ ಜೊತೆಯಾಟವನ್ನು ಕಟ್ಟಿ ಭಾರತಕ್ಕೆ ಎದುರಾಗಬಹುದಾಗಿದ್ದ ಸಂಭವನೀಯ ಸೋಲನ್ನು ತಪ್ಪಿಸಿದರು. ಸ್ನಾಯು ಸೆಳೆತದ ನಡುವೆಯು 161 ಎಸತೆಗಳ ಮ್ಯಾರಾಥನ್ ಇನ್ನಿಂಗ್ಸ್ ಬೆಳೆಸಿದ ವಿಹಾರಿ ನಾಲ್ಕು ಬೌಂಡರಿಗಳ ನೆರವಿನಿಂದ 23 ರನ್ ಗಳಿಸಿ ಅಜೇರಾಗುಳಿದರು. ಇವರಿಗೆ ತಕ್ಕ ಸಾಥ್ ನೀಡಿದ ಅಶ್ವಿನ್ 128 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ 39 ರನ್ ಗಳಿಸಿ ಔಟಾಗದೆ ಉಳಿದರು.

ಈ ಮೊದಲು ಚೇತೇಶ್ವರ ಪೂಜಾರ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಪೂಜಾರ ಎಂದಿನಂತೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರೆ ಪಂತ್ ಕೌಂಟರ್ ಅಟ್ಯಾಕ್ ಮಾಡುವ ಮೂಲಕ ಗಮನ ಸೆಳೆದರು. ಒಂದು ಹಂತದಲ್ಲಿ ಪಂತ್ ಕ್ರೀಸಿನಲ್ಲಿರುವಾಗ ಭಾರತ ಈ ದಾಖಲೆ ರನ್ ಚೇಸಿಂಗ್ ಮಾಡಲಿದೆ ಎಂದೇ ಭಾವಿಸಲಾಗಿತ್ತು.

ಕೇವಲ ಮೂರು ರನ್‌ನಿಂದ ಶತಕ ವಂಚಿತರಾದ ಪಂತ್ 12 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 97 ರನ್ ಗಳಿಸಿದರು. ಅತ್ತ ಕ್ರೀಸಿನಲ್ಲಿ ನೆಲೆಯೂರಿ ನಿಂತ ಪೂಜಾರ 205 ಎಸೆತಗಳಲ್ಲಿ 12 ಬೌಂಡರಿಗಳಿಂದ 77 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲೂ ಪೂಜಾರ ಅರ್ಧಶತಕ ಬಾರಿಸಿದ್ದರು.

ಈ ಮೊದಲು ನಾಲ್ಕನೇ ದಿನದಾಟದಲ್ಲಿ ಓಪನರ್‌ಗಳಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ 71 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ್ದರು. ಈ ಪೈಕಿ ಪುನರಾಗಮನದ ಪಂದ್ಯದಲ್ಲೇ ರೋಹಿತ್ ಶರ್ಮಾ ಅರ್ಧಶತಕದ ಸಾಧನೆ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲೂ ಇವರಿಬ್ಬರು 70 ರನ್‌ಗಳ ಜೊತೆಯಾಟ ನೀಡಿದ್ದರು. ಆ ವೇಳೆಯಲ್ಲಿ ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದ್ದರು.

ಆಸ್ಟ್ರೇಲಿಯಾ ಪರ ಫಾರ್ಮ್‌ಗೆ ಮರಳಿದ ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಷೇನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಮಿಂಚುವ ಮೂಲಕ ಭಾರತಕ್ಕೆ ಆಘಾತ ನೀಡಿದರು. 27ನೇ ಟೆಸ್ಟ್ ಶತಕ ಮಾಡಿರುವ ಸ್ಮಿತ್ ಅನುಕ್ರಮವಾಗಿ 131 ಹಾಗೂ 81 ರನ್ ಪೇರಿಸಿದ್ದರು. ಈ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದು.

ಅತ್ತ ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ರನ್‌ನಿಂದ ಶತಕ ವಂಚಿತರಾದ ಲಾಬುಷೇನ್ ದ್ವಿತೀಯ ಇನ್ನಿಂಗ್ಸ್‌ನಲ್ಲೂ 73 ರನ್ ಗಳಿಸಿದರು. ಇನ್ನುಳಿದಂತೆ ಪದಾರ್ಪಣಾ ಟೆಸ್ಟ್ ಪಂದ್ಯದಲ್ಲೇ ವಿಲ್ ಪುಕೊವಸ್ಕಿ ಅರ್ಧಶತಕ (62) ಸಾಧನೆ ಮಾಡಿದರು. ಕ್ಯಾಮರಾನ್ ಗ್ರೀನ್ ಸಹ ಚೊಚ್ಚಲ ಫಿಫ್ಟಿ (84) ಬಾರಿಸಿ ಆಸ್ಟ್ರೇಲಿಯಾದ ಭವಿಷ್ಯದ ತಾರೆಯೆನಿಸಿದರು.

ಬೌಲಿಂಗ್ ವಿಭಾಗದಲ್ಲಿ ಪ್ರಥಮ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ರವೀಂದ್ರ ಜಡೇಜ, ಗಾಯದಿಂದಾಗಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕೆ ಇಳಿದಿರಲಿಲ್ಲ. ಅದರಲ್ಲೂ ಸ್ಟೀವನ್ ಸ್ಮಿತ್ ಅವರನ್ನು ನೇರ ಥ್ರೋ ಮೂಲಕ ರನೌಟ್ ಮಾಡಿರುವುದು ನಿಜಕ್ಕೂ ಸಾಧನೆಯ ಕೈಗನ್ನಡಿಯಾಗಿದೆ. ನವದೀಪ್ ಸೈನಿ ಕೂಡಾ ಪದಾರ್ಪಣೆ ಮಾಡುವ ಮೂಲಕ ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್ ಕಾರ್ಡ್ ಇಂತಿದೆ:

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 338ಕ್ಕೆ ಆಲೌಟ್ (ಸ್ಟೀವನ್ ಸ್ಮಿತ್ 131, ವಿಲ್ ಪುಕೊವಸ್ಕಿ 62, ಮಾರ್ನಸ್ ಲಾಬುಷೇನ್ 91, ರವೀಂದ್ರ ಜಡೇಜ 62ಕ್ಕೆ 4)

ಭಾರತ ಮೊದಲ ಇನ್ನಿಂಗ್ಸ್: 244ಕ್ಕೆ ಆಲೌಟ್ (ಶುಭಮನ್ ಗಿಲ್ 50, ಚೇತೇಶ್ವರ ಪೂಜಾರ 50, ಪ್ಯಾಟ್ ಕಮಿನ್ಸ್ 29ಕ್ಕೆ 4)

-ಆಸ್ಟ್ರೇಲಿಯಾಕ್ಕೆ 94 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್: 312ಕ್ಕೆ 6 ಡಿ. (ಸ್ಟೀವನ್ ಸ್ಮಿತ್ 81, ಮಾರ್ನಸ್ ಲಾಬುಷೇನ್ 73, ಕ್ಯಾಮರಾನ್ ಗ್ರೀನ್ 84, ನವದೀಪ್ ಸೈನಿ 54ಕ್ಕೆ 2)

-ಭಾರತಕ್ಕೆ 407 ರನ್ ಗುರಿ

ಭಾರತ ದ್ವಿತೀಯ ಇನ್ನಿಂಗ್ಸ್: 5 ವಿಕೆಟ್‌ಗೆ 334 (ರಿಷಭ್ ಪಂತ್ 97, ರೋಹಿತ್ ಶರ್ಮಾ 50, ಚೇತೇಶ್ವರ ಪೂಜಾರ 77, ಜೋಶ್ ಹ್ಯಾಜಲ್‌ವುಡ್ 39ಕ್ಕೆ 2)

ಫಲಿತಾಂಶ: ಡ್ರಾ
ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.