
ವಾಷಿಂಗ್ಟನ್ ಸುಂದರ್
(ಚಿತ್ರ ಕೃಪೆ: ಬಿಸಿಸಿಐ)
ಹೋಬಾರ್ಟ್: ವಾಷಿಂಗ್ಟನ್ ಸುಂದರ್ (ಅಜೇಯ 49) ಬಿರುಸಿನ ಆಟದ ನೆರವಿನಿಂದ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಆಸೀಸ್ ಒಡ್ಡಿದ 187 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ 18.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಭಾರತದ ಪರ ವಾಷಿಂಗ್ಟನ್ ಸುಂದರ್ ಕೇವಲ 23 ಎಸೆತಗಳಲ್ಲಿ 49* ರನ್ ಗಳಿಸಿ ಅಬ್ಬರಿಸಿದರು. ವಾಷಿಂಗ್ಟನ್ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳು ಸೇರಿದ್ದವು.
ಅಭಿಷೇಕ್ ಶರ್ಮಾ (25), ತಿಲಕ್ ವರ್ಮಾ (29) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (24) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ (22*) ಸಹ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಈ ಮೊದಲು ಟಿಮ್ ಡೇವಿಡ್ (74) ಹಾಗೂ ಮಾರ್ಕಸ್ ಸ್ಟೋಯಿನಿಸ್ (64) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡವು, ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 186 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ತರಲಾಗಿತ್ತು.
ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ ಹಾಗೂ ಜಿತೇಶ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗಾಗಿ ಹರ್ಷೀತ್ ರಾಣಾ, ಕುಲದೀಪ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ.
ಆರಂಭದಲ್ಲೇ ಟ್ರಾವಿಸ್ ಹೆಡ್ (6) ಹಾಗೂ ಜೋಶ್ ಇಂಗ್ಲಿಸ್ (1) ವಿಕೆಟ್‌ಗಳನ್ನು ಕಬಳಿಸಿದ ಅರ್ಷದೀಪ್ ಸಿಂಗ್, ಎದುರಾಳಿ ತಂಡಕ್ಕೆ ಡಬಲ್ ಆಘಾತ ನೀಡಿದರು. ಅಲ್ಲದೆ ತಂಡದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕಳೆದ ಪಂದ್ಯದಿಂದ ಅರ್ಷದೀಪ್ ಅವರನ್ನು ಕಡೆಗಣಿಸಲಾಗಿತ್ತು.
ಈ ಮಧ್ಯೆ ನಾಯಕ ಮಿಷೆಲ್ ಮಾರ್ಷ್ (11) ಅವರೊಂದಿಗೆ ಸೇರಿದ ಟಿಮ್ ಡೇವಿಡ್ ಬಿರುಸಿನ ಆಟವಾಡುವ ಮೂಲಕ ಗಮನ ಸಳೆದರು.
ಆದರೆ ಮಾರ್ಷ್ ಹಾಗೂ ಮಿಚೆಲ್ ಓವನ್ (0) ಅವರನ್ನು ಹೊರದಬ್ಬಿದ ವರುಣ್ ಚಕ್ರವರ್ತಿ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸುವಂತೆ ಮಾಡಿದರು.
ಅತ್ತ ಆಕ್ರಮಣಕಾರಿ ಆಟವಾಡಿದ ಟಿಮ್, ಅರ್ಧಶತಕದ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದರು. ಅವರಿಗೆ ಕೆಳ ಕ್ರಮಾಂಕದಲ್ಲಿ ಸ್ಟೋಯಿನಿಸ್ ಅವರಿಂದ ಉತ್ತಮ ಬೆಂಬಲ ದೊರಕಿತು.
ಟಿಮ್ ಡೇವಿಡ್ 38 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್‌ಗಳಿಂದ 74 ರನ್ ಗಳಿಸಿದರು. ಸ್ಟೋಯಿನಿಸ್ 39 ಎಸೆತಗಳಲ್ಲಿ 64 ರನ್ ಗಳಿಸಿ (8 ಬೌಂಡರಿ, 2 ಸಿಕ್ಸರ್) ಅಬ್ಬರಿಸಿದರು. ಕೊನೆಯಲ್ಲಿ ಮಾಥ್ಯೂ ಶಾರ್ಟ್ 26* ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಭಾರತದ ಪರ ಅರ್ಷದೀಪ್ ಮೂರು, ಚಕ್ರವರ್ತಿ ಎರಡು ಹಾಗೂ ಶಿವಂ ದುಬೆ ಒಂದು ವಿಕೆಟ್ ಗಳಿಸಿದರು. ಜಸ್‌ಪ್ರೀತ್ ಬೂಮ್ರಾ ನಿಖರ ದಾಳಿ ಸಂಘಟಿಸಿದರೂ (4 ಓವರ್, 26 ರನ್) ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ.
ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ ಎರಡನೇ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.