
ಸಿಡ್ನಿ: ಈ ವರ್ಷದ ಮಧ್ಯದಲ್ಲಿ ನಿಗದಿಯಾಗಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆಯಾಗಿ ಭಾರತ ತಂಡವು, ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದ್ದು, ಮೊದಲನೇ ಪಂದ್ಯ ಭಾನುವಾರ ನಡೆಯಲಿದೆ.
ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರೂ ಮಾದರಿಗಳ ಸರಣಿಯಲ್ಲಿ ಆಡಲಿದೆ. ಟಿ20 ಸರಣಿಯ ನಂತರ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ನಂತರ ಪರ್ತ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ಮಾರ್ಚ್ 6ರಿಂದ ಈ ಟೆಸ್ಟ್ ಹಗಲು–ರಾತ್ರಿ ಮಾದರಿಯಲ್ಲಿ ನಡೆಯಲಿದೆ.
ಹೋದ ವರ್ಷ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತ ತಂಡವು ಮೊದಲ ಬಾರಿ ವಿದೇಶ ಪ್ರವಾಸ ಕೈಗೊಂಡಿದೆ. ಸಿಡ್ನಿಯಲ್ಲಿ ಮೊದಲ ಟಿ20 ಪಂದ್ಯದ ನಂತರ ಎರಡನೇ ಪಂದ್ಯ ಕೆನ್‌ಬೆರಾದಲ್ಲಿ, ಮೂರನೇ ಪಂದ್ಯ ಆಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ‘
‘ಟಿ20 ವಿಶ್ವಕಪ್‌ಗೆ ಮೊದಲು ಪ್ರತಿಯೊಂದು ಸರಣಿಯೂ ನಮಗೆ ಮುಖ್ಯವಾಗಲಿದೆ. ಈ ಸರಣಿಯು ಉಭಯ ತಂಡಗಳಿಗೆ ಬಹಳ ಮಹತ್ವದ್ದು’ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದರು.
ಕಳೆದ ಅಕ್ಟೋಬರ್–ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಯಶಸ್ವಿ ತಂಡದ ಹಲವು ಆಟಗಾರ್ತಿಯರು ಇಲ್ಲೂ ಸ್ಥಾನ ಉಳಿಸಿಕೊಂಡಿದ್ದಾರೆ. ವೈಷ್ಣವಿ ಶರ್ಮಾ ತಂಡದಲ್ಲಿರುವ ಹೊಸಮುಖ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತಿ ಫೂಲ್ಮಲಿ ಸ್ಥಾನ ಪಡೆದಿದ್ದಾರೆ. ಕನ್ನಡತಿ ಸ್ಪಿನ್ನರ್ ಶ್ರೇಯಾಂಕ ಪಾಟೀಲ ಸಹ ತಂಡಕ್ಕೆ ಮರಳಿದ್ದಾರೆ.
ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಕೈಲಿ ಸೋಲನುಭವಿಸಿದ್ದ ಆಸ್ಟ್ರೇಲಿಯಾ ತಂಡವು ಈ ಸರಣಿಯಲ್ಲಿ ತನ್ನ ಸಾಮರ್ಥ್ಯ ತೋರಲು ಕಾದುಕುಳಿತಿದೆ. ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಅಲಿಸಾ ಹೀಲಿ ಈ ಸರಣೀಯ ನಂತರ ನಿವೃತ್ತರಾಗಲಿದ್ದಾರೆ. ಕಳೆದ ತಿಂಗಳು ವಿಕೆಟ್ ಕೀಪರ್ ಅಲಿಸಾ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದರು.
ಸೋಫಿ ಮಾಲಿನೆ ಮೊದಲ ಭಾರಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡವು ಲೆಗ್ ಸ್ಪಿನ್ನರ್ ಅಲನಾ ಕಿಂಗ್ ಅವರನ್ನು ಕೈಬಿಟ್ಟಿದೆ.
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್, ಉಮಾ ಚೆಟ್ರಿ, ಅರುಂಧತಿ ರೆಡ್ಡಿ, ಅಮನ್‌ಜೋತ್ ಕೌರ್, ಜೆಮಿಮಾ ರಾಡ್ರಿಗಸ್, ಭಾರತಿ ಫೂಲ್ಮಾಲಿ, ಶ್ರೇಯಾಂಕ ಪಾಟೀಲ.
ಆಸ್ಟ್ರೇಲಿಯಾ: ಸೋಫಿ ಮಾಲಿನೆ (ನಾಯಕಿ), ಆ್ಯಶ್ಲೆ ಗಾರ್ಡನರ್ (ಉಪನಾಯಕಿ), ತಹಿಲಾ ಮೆಕ್‌ಗ್ರಾ (ಉಪನಾಯಕಿ), ಡಾರ್ಸಿ ಬ್ರೌನ್, ನಿಕೋಲಾ ಕ್ಯಾರಿ, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್, ಫೋಬಿ ಲಿಚ್‌ಫೀಲ್ಡ್, ಬೆತ್ ಮೂನಿ, ಎಲಿಸ್ ಪೆರಿ, ಮೇಗನ್ ಶುಟ್, ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೋಲ್, ಜಾರ್ಜಿಯಾ ವೆರ್ಹ್ಯಾಮ್.
ಪಂದ್ಯ ಆರಂಭ: ಮಧ್ಯಾಹ್ನ 1.45.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.