ADVERTISEMENT

IND vs ENG Test: ರೂಟ್ - ಬೆಸ್ಟೋ ಭರ್ಜರಿ ಆಟ, ಭಾರತ ವಿರುದ್ಧ ಇಂಗ್ಲೆಂಡ್‌ಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2022, 11:23 IST
Last Updated 5 ಜುಲೈ 2022, 11:23 IST
ಜಾನಿ ಬೆಸ್ಟೋ ಮತ್ತು ಜೋ ರೂಟ್‌
ಜಾನಿ ಬೆಸ್ಟೋ ಮತ್ತು ಜೋ ರೂಟ್‌   

ಬರ್ಮಿಂಗ್‌ಹ್ಯಾಂ: ಜೋ ರೂಟ್‌ ಮತ್ತು ಜಾನಿ ಬೆಸ್ಟೋ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ, ಭಾರತ ವಿರುದ್ಧದ ಅಂತಿಮ (ಐದನೇ) ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.

ಅಂತಿಮ ದಿನವಾದ ಮಂಗಳವಾರ 119 ರನ್‌ ಗಳಿಸುವ ಸವಾಲು ಬೆನ್ನತ್ತಿದ ಬೆನ್‌ ಸ್ಟೋಕ್ಸ್‌ ಬಳಗ ವಿಕೆಟ್‌ ನಷ್ಟವಿಲ್ಲದೆ ಗೆಲುವಿನ ನಗೆ ಬೀರಿತು.

ನಾಲ್ಕನೇ ದಿನ ಸೋಮವಾರದ ಆಟದ ಅಂತ್ಯಕ್ಕೆ ಇಂಗ್ಲೆಂಡ್‌ 57 ಓವರ್‌ಗಳಲ್ಲಿ 3 ವಿಕೆಟ್‌ಗೆ 259 ರನ್‌ ಕಲೆಹಾಕಿತ್ತು.

ADVERTISEMENT

ಪಂದ್ಯದ ಮೊದಲ ಮೂರು ದಿನ ಭಾರತ ತಂಡ ಪ್ರಭುತ್ವ ಸಾಧಿಸಿದ್ದರೆ, ಸೋಮವಾರದ ಆಟವನ್ನು ಇಂಗ್ಲೆಂಡ್‌ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ರೂಟ್‌ (ಬ್ಯಾಟಿಂಗ್‌ 142, 173 ಎಸೆತ) ಮತ್ತು ಬೆಸ್ಟೋ (ಬ್ಯಾಟಿಂಗ್ 114, 145 ಎಸೆತ) ಉತ್ತಮ ಜೊತೆಯಾಟವಾಡುವ ಮೂಲಕ ಬೂಮ್ರಾ ಬಳಗದ ಗೆಲುವಿನ ಕನಸಿಗೆ ಅಡ್ಡಿಯಾದರು.

ಈ ಮೂಲಕ ಐದು ಪಂದ್ಯಗಳಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು 2–2ರಲ್ಲಿ ಸಮಬಲ ಸಾಧಿಸಿವೆ.

378 ರನ್ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡಕ್ಕೆ ಅಲೆಕ್ಸ್‌ ಲೀಸ್‌ (65 ಎಸೆತಗಳಲ್ಲಿ 56) ಮತ್ತು ಜ್ಯಾಕ್‌ ಕ್ರಾಲಿ (76 ಎಸೆತಗಳಲ್ಲಿ 46) ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರು ಭಾರತದ ಆರಂಭಿಕ ದಾಳಿಯನ್ನು ಸಮರ್ಥವಾಗಿ ಎದುರಿಸಿ ಮೊದಲ ವಿಕೆಟ್‌ಗೆ 107 ರನ್‌ ಸೇರಿಸಿದ್ದರು.

ಉತ್ತಮವಾಗಿ ಆಡುತ್ತಿದ್ದ ಕ್ರಾಲಿ ಅವರನ್ನು ಬೌಲ್ಡ್‌ ಮಾಡಿದ ಭಾರತ ತಂಡದ ಹಂಗಾಮಿ ನಾಯಕ ಜಸ್‌ಪ್ರೀತ್‌ ಬೂಮ್ರಾ ಈ ಜತೆಯಾಟ ಮುರಿದರು. ತಮ್ಮ ಮುಂದಿನ ಓವರ್‌ನಲ್ಲಿ ಒಲಿ ಪೋಪ್‌ (0) ಅವರನ್ನೂ ಪೆವಿಲಿಯನ್‌ಗೆ ಅಟ್ಟಿದರು. ಅಲ್ಪ ಸಮಯದ ಬಳಿಕ ಲೀಸ್‌ ರನೌಟಾದರು.

ಎರಡು ರನ್‌ ಸೇರಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ಆಘಾತ ಅನುಭವಿಸಿತು. ಈ ವೇಳೆ ಜತೆಯಾದ ರೂಟ್‌ ಮತ್ತು ಬೆಸ್ಟೋ ತಂಡಕ್ಕೆ ಆಸರೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.