ADVERTISEMENT

ಪಂತ್ ದಿಟ್ಟತನ ‘ಅದ್ಭುತ ರೂಪಕ’ ಎನ್ನುತ್ತಲೇ ಬದಲೀ ಆಟಗಾರ ನಿಯಮ ಪ್ರಶ್ನಿಸಿದ ವಾನ್

ಪಿಟಿಐ
Published 25 ಜುಲೈ 2025, 13:40 IST
Last Updated 25 ಜುಲೈ 2025, 13:40 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

-ಪಿಟಿಐ ಚಿತ್ರ

ಲಂಡನ್: ಕಾಲುಬೆರಳು ಮುರಿದ ನೋವಿನಲ್ಲಿಯೂ ಬ್ಯಾಟಿಂಗ್ ಮಾಡಿ ದಿಟ್ಟತನ ತೋರಿದ ಭಾರತದ ರಿಷಭ್ ಪಂತ್ ಆಟವನ್ನು ‘ಅದ್ಭುತ ರೂಪಕ’ ಎಂದು ಬಣ್ಣಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರು, ವೈದ್ಯಕೀಯ ಕಾರಣಕ್ಕಾಗಿ ಬದಲೀ ಆಟಗಾರರನ್ನು ಒದಗಿಸುವಲ್ಲಿ ಕ್ರಿಕೆಟ್ ಇನ್ನೂ ‘ಕತ್ತಲೆ ಯುಗ’ದಲ್ಲಿದೆ ಎಂದೂ ಕಿಡಿಕಾರಿದ್ದಾರೆ.

ADVERTISEMENT

‘ಕ್ರಿಕೆಟ್‌ನಲ್ಲಿ ಆಟಗಾರರು ಗಾಯಗೊಳ್ಳುವುದು ಸಹಜ. ಇಂತಹ ಸಂದರ್ಭಗಳಲ್ಲಿ ಬದಲೀ ಆಟಗಾರರನ್ನು ನೀಡಬೇಕು ಎಂದು ಹಲವಾರು ವರ್ಷಗಳಿಂದ ಪ್ರತಿಪಾದಿಸುತ್ತಲೇ ಬಂದಿದ್ದೇನೆ. ಓಲ್ಡ್‌ ಟ್ರಾಫರ್ಡ್‌ನಲ್ಲಿ ರಿಷಭ್ ಪಂತ್ ಅವರ ಪ್ರಕರಣವೂ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ’ ಎಂದು ವಾನ್ ಅವರು, ‘ದಿ ಟೆಲಿಗ್ರಾಫ್‌’ಗೆ ಬರೆದ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ. 

‘ಪಂತ್ ತಮ್ಮ ಗಾಯದ ನೋವು ನುಂಗಿ ಕ್ರೀಸ್‌ಗೆ ಬಂದು ಆಡಿದ್ದು ಪ್ರೇರಣಾದಾಯಿಯಾಗಿತ್ತು. ಅವರ ದಿಟ್ಟತನ ಅಸಾಧಾರಣವಾದುದು. 28 ಎಸೆತಗಳಲ್ಲಿ 17 ರನ್‌ಗಳನ್ನು ಗಳಿಸಿದ ಅವರ ಕೌಶಲ ಅದ್ಭುತ. ಆದರೆ ಅವರು ಬ್ಯಾಟಿಂಗ್‌ ಮಾಡುವಷ್ಟು ಫಿಟ್ ಆಗಿರಲಿಲ್ಲ. ಅವರಿಂದ ಓಡುವುದು ಸಾಧ್ಯವಿರಲಿಲ್ಲ. ಅದನ್ನೂ ಮೀರಿಯೂ ಅವರು ಓಡುವ ಪ್ರಯತ್ನ ಮಾಡಿದ್ದರೆ ಗಾಯ  ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಿದ್ದವು’ ಎಂದು ವಾನ್ ಹೇಳಿದರು. 

ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ರಿಷಭ್ ಅವರು 37 ರನ್‌ ಗಳಿಸಿದ್ದ ಸಂದರ್ಭದಲ್ಲಿ ಕ್ರಿಸ್ ವೋಕ್ಸ್ ಅವರ  ಯಾರ್ಕರ್ ಎಸೆತವೊಂದರಲ್ಲಿ ಗಾಯಗೊಂಡಿದ್ದರು. ಅವರ ಬಲಗಾಲಿನ ಬೆರಳಿಗೆ ಚೆಂಡು ಬಡಿದು, ರಕ್ತ ಜಿನುಗಿತ್ತು. ಕಾಲು ಬಾವು ಬಂದಿತ್ತು. ಅವರು ‘ಗಾಯಗೊಂಡು ನಿವೃತ್ತಿ’ಯಾಗಿ ಪೆವಿಲಿಯನ್‌ಗೆ ಮರಳಿದ್ದರು. ಆದರೆ ಎರಡನೇ ದಿನ ಮತ್ತೆ ಕ್ರೀಸ್‌ಗೆ ಬಂದು ಬ್ಯಾಟಿಂಗ್ ಮುಂದುವರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 18ನೇ ಅರ್ಧಶತಕ ದಾಖಲಿಸಿದರು. ಆದರೆ ವಿಕೆಟ್‌ಕೀಪಿಂಗ್‌ಗೆ ಬರಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಬದಲಿಗೆ ಧ್ರುವ ಜುರೇಲ್ ಕೀಪಿಂಗ್ ನಿರ್ವಹಿಸಿದರು. 

‘ಪಂತ್ ಅವರ ವಿಷಯದಲ್ಲಿ ಕೀಪಿಂಗ್ ಮಾಡಲು ಮಾತ್ರ ಬದಲಿ ಆಟಗಾರನಿಗೆ ಅವಕಾಶ ನೀಡಲಾಗಿದೆ. ಆದರೆ ಬ್ಯಾಟರ್ ಅಥವಾ ಬೌಲರ್‌ಗೆ ಇಂತಹ ಅವಕಾಶ ಇಲ್ಲ. ತಂಡಗಳ ಕ್ರೀಡೆಗಳ ಪೈಕಿ ಕ್ರಿಕೆಟ್‌ನಲ್ಲಿ ಮಾತ್ರ ಇಂತಹ ಪದ್ಧತಿ ಇರುವುದು ವಿಪರ್ಯಾಸ. ಆದ್ದರಿಂದಲೇ ಈ ಆಟ ಇನ್ನೂ ಕಗ್ಗತ್ತಲ ಕಾಲದಲ್ಲಿದೆ’ ಎಂದು ವ್ಯಂಗ್ಯವಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.