ಟೀಮ್ ಇಂಡಿಯಾ ಆಟಗಾರರು
ಪಲೇಕೆಲೆ, ಶ್ರೀಲಂಕಾ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ನೇಪಾಳ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
ನೇಪಾಳ ವಿರುದ್ಧ ಟಾಸ್ ಗೆದ್ದಿರುವ ರೋಹಿತ್ ಶರ್ಮಾ, ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ನೇಪಾಳ 48.2 ಓವರ್‌ಗಳಲ್ಲಿ 230 ರನ್ ಗಳಿಸಿ ಆಲೌಟ್ ಆಗಿದೆ.
ಮೊಹಮ್ಮದ್ ಸಿರಾಜ್ ಎಸೆದ ಎರಡನೇ ಓವರ್‌ನಲ್ಲಿ ಆಸಿಫ್ ಶೇಖ್ ಅವರ ಕ್ಯಾಚ್ ಕೈಚೆಲ್ಲಿದ ವಿರಾಟ್ ಕೊಹ್ಲಿ ಜೀವದಾನ ನೀಡಿದರು. ಅದನ್ನು ಆಸಿಫ್ ಸಮರ್ಥವಾಗಿ ಬಳಸಿಕೊಂಡರು. ಆದರೆ, 29 ಓವರ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಆಸಿಫ್ ಶೇಖ್ ಅವರನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕೊಹ್ಲಿ, ಪೆವಿಲಿಯನ್ ದಾರಿ ತೋರಿಸಿದರು.
ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರು ಕೂಡ ಒಂದೊಂದು ಕ್ಯಾಚ್ ಕೈಚೆಲ್ಲಿದ್ದಾರೆ. ಈ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಟೀಕೆ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮೈದಾನದಲ್ಲಿ ಕೊಹ್ಲಿ, ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಮಳೆಯಿಂದಾಗಿ ಫಲಿತಾಂಶ ಹೊರಹೊಮ್ಮಲಿಲ್ಲ. ಅದರಿಂದಾಗಿ ಉಭಯ ತಂಡಗಳೂ ತಲಾ ಒಂದು ಅಂಕ ಹಂಚಿಕೊಂಡವು. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್ ತಂಡವು ನೇಪಾಳವನ್ನು ಸೋಲಿಸಿತ್ತು. ಅದರಿಂದಾಗಿ ಒಟ್ಟು ಮೂರು ಅಂಕಗಳೊಂದಿಗೆ ಸೂಪರ್ ಫೋರ್ ಹಂತ ಪ್ರವೇಶಿಸಿತು. ಭಾರತವು ಈ ಪಂದ್ಯದಲ್ಲಿ ಜಯಿಸಿ ಸೂಪರ್ ಫೋರ್ ನಲ್ಲಿ ಪಾಕ್ ತಂಡವನ್ನು ಎದುರಿಸುವತ್ತ ಚಿತ್ತ ನೆಟ್ಟಿದೆ.
ನೇಪಾಳ ತಂಡವು ಕ್ರಿಕೆಟ್ ಅಂಗಳದಲ್ಲಿ ಈಗ ಅಂಬೆಗಾಲಿಡುತ್ತಿರುವ ತಂಡವಾಗಿರುವುದರಿಂದ ಭಾರತವೇ ಗೆಲುವಿನ ನೆಚ್ಚಿನ ತಂಡವಾಗಿದೆ.
ತಂಡಗಳು ಇಂತಿವೆ:
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.