ADVERTISEMENT

T20 World Cup IND vs NED: ಅಭಿಷೇಕ್ ಶರ್ಮಾ ಅಬ್ಬರಕ್ಕೆ ಭಾರತದ ತವಕ

ನೆದರ್ಲೆಂಡ್ಸ್‌ ವಿರುದ್ಧ ಪಂದ್ಯ ಇಂದು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 23:30 IST
Last Updated 17 ಫೆಬ್ರುವರಿ 2026, 23:30 IST
<div class="paragraphs"><p>ಅಭಿಷೇಕ್ ಶರ್ಮಾ</p></div>

ಅಭಿಷೇಕ್ ಶರ್ಮಾ

   

(ಪಿಟಿಐ ಚಿತ್ರ)

ಅಹಮದಾಬಾದ್: ಬದ್ಧ ಎದುರಾಳಿ ಪಾಕಿಸ್ತಾನ ತಂಡದ ಮೇಲೆ ಆರಾಮವಾಗಿ ಗೆಲುವು ದಾಖಲಿಸಿ ಭರ್ತಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ದೈತ್ಯಾಕಾರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಲಯಕಂಡುಕೊಂಡು ಟಿ20 ವಿಶ್ವಕಪ್‌ನ ಮುಂದಿನ ಹಂತದ ಸೆಣಸಾಟಕ್ಕೆ ಸಜ್ಜಾಗಬಹುದೆಂಬ ವಿಶ್ವಾಸದಲ್ಲಿ ಆತಿಥೇಯ ತಂಡ ಇದೆ.

ADVERTISEMENT

ಜಿಂಬಾಬ್ವೆ ವಿರುದ್ಧ ಅಂತರರಾಷ್ಟ್ರೀಯ ಟಿ20ಗೆ ಪದಾರ್ಪಣೆ ಮಾಡಿದ ಬಳಿಕ, 25 ವರ್ಷ ವಯಸ್ಸಿನ ಅಭಿಷೇಕ್ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕಳೆದ 20 ತಿಂಗಳ ಅವಧಿಯಲ್ಲಿ ಈ ಮಾದರಿಯಲ್ಲಿ ತಂಡದ ಯಶಸ್ಸಿನ ಓಟದಲ್ಲಿ ಪ್ರಮುಖ ಶಕ್ತಿಯಾಗಿದ್ದಾರೆ. ನಿರ್ಭೀತ ಆಟಕ್ಕೆ ಹೆಸರಾದ ಅಭಿಷೇಕ್ 40 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1,297 ರನ್ ಪೇರಿಸಿದ್ದಾರೆ. ಇದರಲ್ಲಿ ಎರಡು ಮಿಂಚಿನ ಶತಕ ಹಾಗೂ ಎಂಟು ಅರ್ಧ ಶತಕಗಳಿವೆ. ಸ್ಟ್ರೈಕ್‌ ರೇಟ್‌ 193ಕ್ಕಿಂತ ಮೇಲಿದೆ. ಬೇರೂರಿದ ಮೇಲೆ ಅವರನ್ನು ತಡೆಯುವುದು ಯಾವುದೇ ಬೌಲರ್‌ಗಳಿಗೆ ತಲೆನೋವಿನ ಕೆಲಸ.

ಆದರೆ ‘ಹೈ ರಿಸ್ಕ್‌, ಹೈ ರಿವಾರ್ಡ್‌’ ಶೈಲಿಯಲ್ಲಿ ಆಡಲು ತಂಡದ ಚಿಂತಕರ ಚಾವಡಿ ಅನುಮತಿ ನೀಡಿರುವುದು ಕೆಲವೊಮ್ಮೆ ಅಪಾಯಕ್ಕೂ ಆಹ್ವಾನ ನೀಡುತ್ತದೆ. ಚೆಂಡು ಪ್ರೇಕ್ಷಕರ ಸ್ಟ್ಯಾಂಡ್‌ಗಳಿಗೂ ತಲುಪಬಹುದು. ಕೆಲವೊಮ್ಮೆ ನೇರವಾಗಿ ಫೀಲ್ಡರ್‌ಗಳ ಬೊಗಸೆಗೂ ಬೀಳಬಹುದು. ಹೊಟ್ಟೆಕೆಟ್ಟ ಪರಿಣಾಮ ನಮೀಬಿಯಾ ವಿರುದ್ಧ ‘ಎ’ ಗುಂಪಿನ ಪಂದ್ಯ ಕಳೆದುಕೊಂಡಿದ್ದ ಅಭಿಷೇಕ್ ನಂತರ ರನ್‌ ಗಳಿಸಲು ಪರದಾಡಿದ್ದಾರೆ. ಈ ವಿಶ್ವಕಪ್‌ನ ಸತತ ಎರಡು ಪಂದ್ಯ ಸೇರಿದಂತೆ ಕೊನೆಯ ಏಳು ಇನಿಂಗ್ಸ್‌ಗಳಲ್ಲಿ ಅವರು ನಾಲ್ಕು ಬಾರಿ ಸೊನ್ನೆ ಸುತ್ತಿದ್ದಾರೆ.

ಇಶಾನ್ ಕಿಶನ್ ಮತ್ತು ಇತರ ಬ್ಯಾಟರ್‌ಗಳ ಆಟದಿಂದಾಗಿ, ಅಭಿಷೇಕ್ ವೈಫಲ್ಯ ಅಂಥದ್ದೇನೂ ಪರಿಣಾಮ ಬೀರಿಲ್ಲ. ಆದರೆ ಕ್ರಿಕೆಟ್‌ನ ಈ ಮಹಾ ವೇದಿಕೆಯಲ್ಲಿ ತಮ್ಮ ಮೇರು ಆಟಕ್ಕೆ ಮರಳಲು ಅವರು ಕಾತರರಾಗಿದ್ದಾರೆ. ಸಣ್ಣ ತಂಡವಾದ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯ ಅವರಿಗೆ ಲಯಕ್ಕೆ ಮರಳಲು ಸುವರ್ಣಾವಕಾಶ ಒದಗಿಸಿದೆ. ಕೆಲಕಾಲ ಹೊಂದಿಕೊಂಡು ನಂತರ ತಮ್ಮ ಎಂದಿನ ಆಟವಾಡಿದರೆ ಅವರಿಗೆ ಅನುಕೂಲವಾಗಬಹುದು. ಮೊದಲ ಎಸೆತದಿಂದಲೇ ಅಬ್ಬರದ ಆಟಕ್ಕೆ ಮುಂದಾಗುತ್ತಿರುವುದು ಪತನಕ್ಕೂ ಕಾರಣವಾಗುತ್ತಿದೆ.

ಫೆ. 22ರಂದು (ಭಾನುವಾರ) ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ ಎಂಟರ ಹಂತದ ಮೊದಲ ಪಂದ್ಯಕ್ಕೆ ಇಳಿಯುವ ಮೊದಲು, ಹಾಲಿ ಚಾಂಪಿಯನ್ ತಂಡವು ಗುಂಪು ಹಂತದ ಈ ಕೊನೆಯ ಪಂದ್ಯದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗಬಹುದು. ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿರುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಬಹುದು. ನ್ಯೂಜಿಲೆಂಡ್ ವಿರುದ್ಧ ಜನವರಿ 11ರಂದು ಏಕದಿನ ಸರಣಿಯ ಮೊದಲ ಪಂದ್ಯವಾಡಿದ ನಂತರ ಅವರು ಸ್ಪರ್ಧಾತ್ಮಕ ಪಂದ್ಯವಾಡಿಲ್ಲ. ಉಪನಾಯಕ ಅಕ್ಷರ್ ಪಟೇಲ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿಲ್ಲದ ಕಾರಣ, ಸುಂದರ್‌ಗೆ ಅವಕಾಶ ನೀಡಬೇಕಾದರೆ ಇರುವ ಒಂದೇ ಆಯ್ಕೆ ಎಂದರೆ ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡುವುದು.

ತನ್ನ ಮೊದಲ ಪಂದ್ಯದಲ್ಲಿ ಸೋಲುವ ಮೊದಲು ಪಾಕಿಸ್ತಾನವನ್ನು ಆತಂಕಕ್ಕೆ ತಳ್ಳಿದ್ದ ನೆದ‌ರ್ಲೆಂಡ್ಸ್‌ ತಂಡಕ್ಕೆ, ಭಾರತ ವಿರುದ್ಧ ಪಂದ್ಯವು ಅನುಭವದ ದೃಷ್ಟಿಯಿಂದಷ್ಟೇ ಮಹತ್ವದ್ದು. ಇಂಥ ದೊಡ್ಡ ಕ್ರೀಡಾಂಗಣದಲ್ಲಿ ಆ ತಂಡ ಹಿಂದೆಂದೂ ಆಡಿರಲಿಕ್ಕಲಿಲ್ಲ. ಎಲ್ಲ ಟಿಕೆಟ್‌ಗಳು ಬಿಕರಿಯಾದಲ್ಲಿ ಪ್ರೇಕ್ಷಕರ ಸಂಖ್ಯೆ ಡಚ್ಚರ ಪಡೆಗೆ ಭಯ ಹುಟ್ಟಿಸಲೂ ಬಹುದು. ಗೆಲುವಿಗಿಂತ, ಹೋರಾಟ ನೀಡಬೇಕೆಂಬ ಯೋಚನೆ ಆ ತಂಡದ ಮನಸ್ಸಿನಲ್ಲಿ ಮೂಡಬಹುದು.

ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಭಾರತ ಒಮ್ಮೆ (ಸಿಡ್ನಿಯಲ್ಲಿ) ಮಾತ್ರ ಆಡಿದೆ. ಆಗ ಭಾರತ 56 ರನ್‌ಗಳಿಂದ ಜಯಗಳಿಸಿತ್ತು. ಪವಾಡವೇನಾದರೂ ನಡೆಯದಿದ್ದಲ್ಲಿ ಭಾರತಕ್ಕೆ, ಡಚ್ಚರ ಪಡೆ ಸುಲಭದ ತುತ್ತಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.