ADVERTISEMENT

ವಿಶ್ವಕಪ್‌ನಲ್ಲಿ ಭಾರತ ತಂಡ ಮಿಂಚಲು ಐಪಿಎಲ್‌ ಕಾರಣ: ಶಾಹಿದ್ ಅಫ್ರಿದಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 16:00 IST
Last Updated 18 ಜೂನ್ 2019, 16:00 IST
   

ಬೆಂಗಳೂರು: ಭಾರತ ತಂಡ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮಿಂಚಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಬಹುಮುಖ್ಯ ಕಾರಣ ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

ಭಾನುವಾರ ನಡೆದ ಭಾರತ–ಪಾಕಿಸ್ತಾನ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್‌ಗಳ(ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ) ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಪಾಕಿಸ್ತಾನ ಆಟವನ್ನು ಹೀಯಾಳಿಸಿ ಅನೇಕರು ಟ್ರೋಲ್‌ ಮಾಡಿದರು. ಪಾಕ್‌ ಅಭಿಮಾನಿಗಳು, ಮಾಜಿ ಕ್ರಿಕೆಟಿಗರೂ ಸಹ ಪಾಕಿಸ್ತಾನ ತಂಡವನ್ನು ಗುರಿಯಾಗಿಸಿ ಮೂದಲಿಸಿದರು.

ಇದೇ ವೇಳ ಅಫ್ರಿದಿ ಸೇರಿದಂತೆ ಹಲವು ಕ್ರಿಕೆಟಿಗರು ಭಾರತದ ಗೆಲುವಿಗೆ ಕಾರಣವಾದ ಅಂಶಗಳ ವಿಶ್ಲೇಷಣೆಯಲ್ಲಿ ತೊಡಗಿದರು. ’ಟೂರ್ನಿಯಲ್ಲಿ ಬ್ಲೂ ಟೀಂಹುಡುಗರು ಗುಣಮಟ್ಟದ ಕ್ರಿಕೆಟ್‌ ಪ್ರದರ್ಶಿಸುತ್ತಿದ್ದು, ಅತ್ಯುತ್ತಮವಾಗಿ ಆಡಿದ್ದಾರೆ. ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ತಂತ್ರಗಾರಿಕೆಯನ್ನು ಯುವಕರು ರೂಢಿಸಿಕೊಳ್ಳಲು ಐಪಿಎಲ್‌ವೇದಿಕೆಯಾಗಿದೆ’ ಎಂದಿದ್ದಾರೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಶುಭಕೋರಿ ಭಾನುವಾರ ಟ್ವೀಟಿಸಿದ್ದಾರೆ.

ಭಾರತದ ಕ್ರಿಕೆಟ್‌ ಕುರಿತು ಪಂದ್ಯದ ಕಮೆಂಟರಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಮಾತನಾಡುತ್ತ, ಭಾರತ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹಲವು ವರ್ಷಗಳಿಂದ ಎಲ್ಲವನ್ನೂ ಹೂಡುತ್ತಿದೆ. ಪಾಕಿಸ್ತಾನದಲ್ಲಿ ನಾವು ಪ್ರಥಮ ದರ್ಜೆ ಕ್ರಿಕೆಟ್‌ಗಾಗಿ ಏನನ್ನೂ ಮಾಡಲಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ವಿಶ್ವಕಪ್‌ ಕ್ರಿಕೆಟ್ ಟೂರ್ನಿಗಳ ಪಂದ್ಯಗಳಲ್ಲಿ ಭಾರತದ ಎದುರು ಪಾಕಿಸ್ತಾನ ಏಳು ಪಂದ್ಯಗಳ ಪೈಕಿ ಯಾವುದೇ ಪಂದ್ಯದಲ್ಲಿ ಜಯ ಗಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.