ADVERTISEMENT

Asia Cup: ಅಭಿಷೇಕ್, ಗಿಲ್ ಅಬ್ಬರಕ್ಕೆ ಬೆಚ್ಚಿದ ಪಾಕ್

ಪಾಕ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ, ಈ ಪಂದ್ಯದಲ್ಲಿಯೂ ಆಟಗಾರರು ಕೈಕುಲುಕಲಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2025, 19:07 IST
Last Updated 21 ಸೆಪ್ಟೆಂಬರ್ 2025, 19:07 IST
<div class="paragraphs"><p>ಅಭಿಷೇಕ್ ಶರ್ಮಾ, ಶುಭಮನ್ ಗಿಲ್</p></div>

ಅಭಿಷೇಕ್ ಶರ್ಮಾ, ಶುಭಮನ್ ಗಿಲ್

   

ದುಬೈ: ಭಾರತದ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಅಬ್ಬರದ ಜೊತೆಯಾಟಕ್ಕೆ ಪಾಕಿಸ್ತಾನ ತಂಡವು ಬೆಚ್ಚಿಬಿದ್ದಿತು. 

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಜಯಿಸಿತು. 

ADVERTISEMENT

172 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಅಭಿಷೇಕ್ (74; 39ಎ, 4X6, 6X5) ಮತ್ತು ಗಿಲ್ (47; 28ಎ, 4X8) ಅಬ್ಬರದ ಜೊತೆಯಾಟದ ಮೂಲಕ ಭದ್ರಬುನಾದಿ ಹಾಕಿದರು. ಅದರಿಂದಾಗಿ ಇನಿಂಗ್ಸ್‌ನಲ್ಲಿ 7 ಎಸೆತಗಳು ಬಾಕಿಯಿದ್ದಾಗಲೇ ಭಾರತ ತಂಡವು ಜಯಿಸಿತು. 

ಈ ಇನಿಂಗ್ಸ್‌ನ ಮೊದಲ ಎಸೆತವನ್ನೇ ಸಿಕ್ಸರ್‌ ಹೊಡೆಯುವ ಮೂಲಕ ಅಭಿಷೇಕ್ ಭರ್ಜರಿ ಆರಂಭ ಕೊಟ್ಟರು. ಇನ್ನೊಂದು ಬದಿಯಿಂದ ಗಿಲ್ ಕೂಡ ಬೌಲರ್‌ಗಳ ಮೇಲೆ ಕರುಣೆ ತೋರಲಿಲ್ಲ. ಇಬ್ಬರ ಅಬ್ಬರದ ಆಟಕ್ಕೆ ಹತ್ತು ಓವರ್‌ಗಳು ದಾಟುವ ಮುನ್ನವೇ ತಂಡದ ಮೊತ್ತವು ಮೂರಂಕಿ ಮುಟ್ಟಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶಾಹೀನ್ ಆಫ್ರಿದಿ ಬೌಲಿಂಗ್‌ನಲ್ಲಿ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ಪಡೆಯುವ ಅವಕಾಶವನ್ನು ನವಾಜ್ ಕೈಚೆಲ್ಲಿದರು. 

ಈ ಸಂದರ್ಭದಲ್ಲಿ ಭಾರತದ ಬ್ಯಾಟಿಂಗ್ ಜೋಡಿ ಮತ್ತು ಬೌಲರ್ ಹ್ಯಾರಿಸ್ ರವೂಫ್ ನಡುವೆ ಮಾತಿನ ಚಕಮಕಿಯೂ ನಡೆಯಿತು. 7ನೇ ಓವರ್‌ನಲ್ಲಿ ಲಾಂಗ್‌ ಆಫ್‌ ಬೌಂಡರಿ ಗೆರೆ ಸಮೀಪವೂ ಶರ್ಮಾಗೆ ಒಂದು ಜೀವದಾನ ಲಭಿಸಿತು. ಕ್ಯಾಚ್‌ ಮಾಡಲು ಪ್ರಯತ್ನಿಸಿದ ಫೀಲ್ಡರ್ ಸಾಹಿಬ್‌ಝಾದಾ ಅವರ ಬೊಗಸೆಯಲ್ಲಿ ಪುಟಿದ ಚೆಂಡು ಗೆರೆಯಾಚೆ ಬಿದ್ದು ಸಿಕ್ಸರ್ ಆಯಿತು. 

ಶರ್ಮಾ ಮತ್ತು ಗಿಲ್ ಅಬ್ಬರ ಮತ್ತಷ್ಟು ರಂಗೇರಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 105 ರನ್ ಸೇರಿಸಿದರು. ಅರ್ಧಶತಕಕ್ಕೆ 3 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಗಿಲ್ ಅವರು ಫಾಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು. ಜೊತೆಯಾಟ ಮುರಿಯಿತು. ‌

ಕ್ರೀಸ್‌ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಮೂರು ಎಸೆತ ಎದುರಿಸಿದರೂ ಖಾತೆ ತೆರೆಯಲಿಲ್ಲ. ಹ್ಯಾರಿಸ್ ರವೂಫ್ ಬೌಲಿಂಗ್‌ನಲ್ಲಿ ಅಬ್ರಾರ್‌ಗೆ ಕ್ಯಾಚಿತ್ತರು. ಈ ನಡುವೆ ಅಭಿಷೇಕ್ ಅಬ್ಬರ ಮುಂದುವರಿದಿತ್ತು. ಕಡೆಗೂ ಅವರ ವಿಕೆಟ್ ಪಡೆಯುವಲ್ಲಿ ಅಬ್ರಾರ್ ಅಹಮದ್ ಯಶಸ್ವಿಯಾದರು. 

ಇನ್ನೊಂದು ಬದಿಯಲ್ಲಿದ್ದ ತಿಲಕ್ ವರ್ಮಾ (ಔಟಾಗದೇ 30; 19ಎ, 4X2, 6X2) ತಂಡವನ್ನು ಗೆಲುವಿನ ದಡ ಸೇರಿಸುವ ಛಲದಿಂದ ಆಡಿದರು. ಸಂಜು ಸ್ಯಾಮ್ಸನ್ (13 ರನ್) ಅವರು ರವೂಫ್‌ಗೆ ಬೌಲಿಂಗ್‌ನಲ್ಲಿ ಔಟಾದರು. ಹಾರ್ದಿಕ್ ಪಾಂಡ್ಯ (ಅಜೇಯ 7) ವರ್ಮಾ ಜೊತೆ ಸೇರಿ ತಂಡವನ್ನು ಜಯದತ್ತ ಮುನ್ನಡೆಸಿದರು. 

ಫರ್ಹಾನ್ ಅರ್ಧಶತಕ–ದುಬೆ ಮಿಂಚು: ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 

ಸಾಹೀಬ್‌ ಝಾದಾ ಫರ್ಹಾನ್  (58; 45ಎ, 4X5, 6X3) ಅರ್ಧಶತಕದ ಬಲದಿಂದ ಪಾಕಿಸ್ತಾನ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 171 ರನ್ ಗಳಿಸಿತು.  ಅವರು ಮತ್ತು ಸೈಮ್ ಅಯೂಬ್ (21; 17ಎ, 4X1, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು. 

11ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಶಿವಂ ಮುರಿದರು. ಅವರ ಎಸೆತವನ್ನು ಬೌಂಡರಿ ದಾಟಿಸುವ ಭರದಲ್ಲಿ ಅಯೂಬ್ ಅವರು ಅಭಿಷೇಕ್ ಶರ್ಮಾಗೆ ಕ್ಯಾಚಿತ್ತರು.

15ನೇ ಓವರ್‌ನಲ್ಲಿ ಫರ್ಹಾನ್ ವಿಕೆಟ್ ಕೂಡ ಶಿವಂ ಪಾಲಾಯಿತು.  ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಫಕಾರ್ ಜಮಾನ್ (15 ರನ್) ಕ್ಯಾಚ್ ಪಡೆದ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಸಂಭ್ರಮಿಸಿದರು. 

ಆಗಿನ್ನೂ ತಂಡದ ಮೊತ್ತವು 13 ಓವರ್‌ಗಳಲ್ಲಿ 3ಕ್ಕೆ 110  ಆಗಿತ್ತು. ಮೊಹಮ್ಮದ್ ನವಾಜ್ (21; 19ಎ) ಅವರು ಕ್ರೀಸ್‌ ಮುಟ್ಟುವಲ್ಲಿ ತುಸು ‘ಆಲಸ್ಯ’ ತೋರಿದ್ದನ್ನು ಗಮನಿಸಿದ ಫೀಲ್ಡರ್ ಸೂರ್ಯಕುಮಾರ್ ಯಾದವ್ ರನೌಟ್ ಮಾಡುವಲ್ಲಿ ಚುರುಕುತನ ಮೆರೆದರು. ನಾಯಕ ಸಲ್ಮಾನ್ ಆಘಾ 13 ಎಸೆತಗಳಲ್ಲಿ 17 ಮತ್ತು ಫಾಹೀಂ ಅಶ್ರಫ್ (ಔಟಾಗದೇ 20; 8ಎ) ಅಬ್ಬರಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. 

ಜಸ್‌ಪ್ರೀತ್ ಬೂಮ್ರಾ ಅವರು ವಿಕೆಟ್ ಗಳಿಸಲಿಲ್ಲ. ತುಸು ದುಬಾರಿಯೂ ಆದರು. ಅವರು 4 ಓವರ್‌ಗಳಲ್ಲಿ 45 ರನ್ ಕೊಟ್ಟರು. ಕುಲದೀಪ್ ಯಾದವ್ (31ಕ್ಕೆ1) ಉತ್ತಮ ಬೌಲಿಂಗ್ ಮಾಡಿದರು. ಅಕ್ಷರ್ ಪಟೇಲ್ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿದರು. ಭಾರತದ ಫೀಲ್ಡರ್‌ಗಳು ಒಟ್ಟು ನಾಲ್ಕು ಕ್ಯಾಚ್ ಕೈಚೆಲ್ಲಿದರು. 

ಈ ಪಂದ್ಯದಲ್ಲಿಯೂ ಭಾರತದ ಆಟಗಾರರು ಟಾಸ್‌ ಸಂದರ್ಭ ಮತ್ತು ಮುಕ್ತಾಯದ ನಂತರ ಪಾಕ್ ಆಟಗಾರರ ಕೈಕುಲುಕಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.