
ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್
ರಾಂಚಿ: ವಿರಾಟ್ ಕೊಹ್ಲಿ ಅಮೋಘ ಶತಕ (135) ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17 ರನ್ ಅಂತರದ ಗೆಲುವು ದಾಖಲಿಸಿದೆ.
ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಭಾರತ ಒಡ್ಡಿದ 350 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲಿ ರನ್‌ಗಳಿಗೆ 332 ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಈ ಗೆಲುವಿಗಾಗಿ ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಭಾರತ ಪಡೆಯು ತುಂಬಾನೇ ಪ್ರಯಾಸಪಡಬೇಕಾಯಿತು.
ದಕ್ಷಿಣ ಆಫ್ರಿಕಾ 11ರನ್ನಿಗೆ 3 ಬಳಿಕ 77ಕ್ಕೆ 4 ಮತ್ತು 130ಕ್ಕೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ ಕೆಳ ಕ್ರಮಾಂಕದ ಬ್ಯಾಟರ್‌ಗಳು ದಿಟ್ಟ ಹೋರಾಟವನ್ನು ಪ್ರದರ್ಶಿಸುವುದರೊಂದಿಗೆ ಪಂದ್ಯವು ರೋಚಕ ಹಂತಕ್ಕೆ ತಲುಪಿತು.
ಮ್ಯಾಥ್ಯೂ ಬ್ರಿಟ್ಜ್ 72, ಟೋನಿ ಡಿ ಜೊರ್ಜಿ 39, ಡೆವಾಲ್ಡ್ ಬ್ರೆವಿಸ್ 37, ಮಾರ್ಕೊ ಯಾನ್ಸೆನ್ 70 ಮತ್ತು ಕಾರ್ಬಿನ್ ಬಾಷ್ 67 ರನ್ ಗಳಿಸಿ ಭಾರತದ ಗೆಲುವನ್ನು ಕಠಿಣಗೊಳಿಸಿದರು.
ಈ ಪೈಕಿ ಯಾನ್ಸೆನ್ ಕೇವಲ 39 ಎಸೆತಗಳಲ್ಲಿ 70 ರನ್ ಗಳಿಸಿ (3 ಸಿಕ್ಸರ್, 8 ಬೌಂಡರಿ) ಭಾರತೀಯ ಬೌಲರ್‌ಗಳನ್ನು ಕಾಡಿದರು. ಮತ್ತೊಂದೆಡೆ ಕಾರ್ಬಿನ್ 51 ಎಸೆತಗಳಲ್ಲಿ 67 ರನ್ (5 ಬೌಂಡರಿ, 4 ಸಿಕ್ಸರ್) ಗಳಿಸಿದರು.
ಭಾರತದ ಪರ ಕುಲದೀಪ್ ಯಾದವ್ ನಾಲ್ಕು, ಹರ್ಷೀತ್ ರಾಣಾ ಮೂರು ಮತ್ತು ಅರ್ಷದೀಪ್ ಸಿಂಗ್ ಎರಡು ವಿಕೆಟ್ ಗಳಿಸಿದರು.
ಈ ಮೊದಲು ವಿರಾಟ್ ಕೊಹ್ಲಿ ಅಮೋಘ ಶತಕ (135) ಮತ್ತು ರೋಹಿತ್ ಶರ್ಮಾ (57) ಹಾಗೂ ನಾಯಕ ಕೆ.ಎಲ್. ರಾಹುಲ್ (60) ಅರ್ಧಶತಕಗಳ ಬೆಂಬಲದೊಂದಿಗೆ ಭಾರತ ತಂಡವು ಇಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 349 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ಯಶಸ್ವಿ ಜೈಸ್ವಾಲ್ (18) ಬಿರುಸಿನ ಆರಂಭವೊದಗಿಸಿದರು. ಆದರೆ ಜೈಸ್ವಾಲ್ ಆಟ ಹೆಚ್ಚು ಹೊತ್ತು ಸಾಗಲಿಲ್ಲ.
ಈ ಹಂತದಲ್ಲಿ ಜೊತೆಗೂಡಿದ ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಮೂಲ್ಯ ಶತಕದ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.
ತಮ್ಮ ಎಂದಿನ ಶೈಲಿಯಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಈ ಜೋಡಿಯು ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಾಡಿಸಿದರು. ಅಲ್ಲದೆ ಎರಡನೇ ವಿಕೆಟ್‌ಗೆ 136 ರನ್‌ಗಳ ಜೊತೆಯಾಟ ಕಟ್ಟಿದರು.
ರೋಹಿತ್ ಶರ್ಮಾ 51 ಎಸೆತಗಳಲ್ಲಿ 57 ರನ್ ಗಳಿಸಿ ಔಟ್ (5 ಬೌಂಡರಿ, 3 ಸಿಕ್ಸರ್) ಆದರು.
ಅತ್ತ ಮೈದಾನದ ಎಲ್ಲ ದಿಕ್ಕಿನತ್ತವೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಕೊಹ್ಲಿ, ಏಕದಿನದಲ್ಲಿ 52ನೇ ಶತಕದ ಸಾಧನೆ ಮಾಡಿದರು. ಅಲ್ಲದೆ ನಾಯಕ ಕೆ.ಎಲ್. ರಾಹುಲ್ ಜೊತೆ 76 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿದರು.
ಅಂತಿಮವಾಗಿ ಕೊಹ್ಲಿ 120 ಎಸೆತಗಳಲ್ಲಿ 135 ರನ್ ಗಳಿಸಿ ಔಟ್ ಆದರು. ಕೊಹ್ಲಿ ಇನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಹಾಗೂ 11 ಬೌಂಡರಿಗಳು ಸೇರಿದ್ದವು.
ಈ ನಡುವೆ ಋತುರಾಜ್ ಗಾಯಕವಾಡ್ (8) ಹಾಗೂ ವಾಷಿಂಗ್ಟನ್ ಸುಂದರ್ (13) ವೈಫ್ಯಲ್ಯ ಅನುಭವಿಸಿದರು.
ಅತ್ತ ನಾಯಕನ ಆಟವಾಡಿದ ಕೆ.ಎಲ್. ರಾಹುಲ್, ಆಕರ್ಷಕ ಅರ್ಧಶತಕ ಗಳಿಸಿ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ರಾಹುಲ್ 56 ಎಸೆತಗಳಲ್ಲಿ 60 ರನ್ (2 ಬೌಂಡರಿ, 3 ಸಿಕ್ಸರ್) ಗಳಿಸಿದರು.
ರವೀಂದ್ರ ಜಡೇಜ ಅವರೊಂದಿಗೆ ಸೇರಿದ ರಾಹುಲ್ ಆರನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ಕಟ್ಟಿದರು. ಜಡೇಜ 32 ರನ್‌ಗಳ ಕಾಣಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.