ADVERTISEMENT

IND vs SL | ಹೊಸ ವರ್ಷದ ಮೊದಲ ಪಂದ್ಯ: ಮತ್ತೆರಡು ದಾಖಲೆ ಬರೆದ ವಿರಾಟ್ ಕೊಹ್ಲಿ

ಟಿ20 ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 9:43 IST
Last Updated 8 ಜನವರಿ 2020, 9:43 IST
   

ಇಂದೋರ್‌:ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಒಂದು ಸಾವಿರ ರನ್‌ ಪೂರೈಸಿದ ನಾಯಕ ಎಂಬ ಶ್ರೇಯಕ್ಕೆ ಭಾಜನರಾದರು. ಮಾತ್ರವಲ್ಲದೆ ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ಗಳಸಿದ ಆಟಗಾರ ಎಂಬ ದಾಖಲೆಯೂ ಅವರದಾಯಿತು. ಇದರೊಂದಿಗೆ 2020ರಲ್ಲಿಆಡಿದ ಮೊದಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಈ ಮೊದಲು ನಾಯಕನಾಗಿ ವೇಗವಾಗಿ 1000 ರನ್ ಪೂರೈಸಿದ ದಾಖಲೆ ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿ ಮತ್ತು ವೆಸ್ಟ್‌ ಮಹಿಳಾ ತಂಡದ ಸ್ಟಫಾನಿ ಟೇಲರ್‌ ಅವರ ಹೆಸರಲ್ಲಿತ್ತು. ಸಾವಿರ ರನ್‌ ಪೂರೈಸಲುಈ ಇಬ್ಬರೂ 31 ಇನಿಂಗ್ಸ್‌ ತೆಗೆದುಕೊಂಡಿದ್ದರು. ಕೊಹ್ಲಿ 30ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ ಕೊಹ್ಲಿ 17 ಎಸೆತಗಳಲ್ಲಿ 30 ರನ್ ಕಲೆಹಾಕಿದರು.25 ರನ್‌ ಗಳಿಸಿದ್ದ ವೇಳೆ ಈ ದಾಖಲೆ ನಿರ್ಮಾಣವಾಯಿತು.

ADVERTISEMENT

ಟಿ20ಯಲ್ಲಿ ಹೆಚ್ಚು ರನ್‌ (2,663) ಗಳಿಸಿದ ಆಟಗಾರ ಎಂಬ ದಾಖಲೆಯೂ ವಿರಾಟ್‌ ಅವರದ್ದಾಯಿತು. ಈ ಪಂದ್ಯಕ್ಕೂ ಮೊದಲು ಭಾರತ ತಂಡದ ಉಪನಾಯಕ ರೋಹಿತ್‌ ಶರ್ಮಾ ಹಾಗೂ ಕೊಹ್ಲಿ ಖಾತೆಯಲ್ಲಿ 2,633 ರನ್‌ ಗಳಿದ್ದವು.ರೋಹಿತ್‌ ಶರ್ಮಾಇದುವರೆಗೆ104 ಪಂದ್ಯ (96 ಇನಿಂಗ್ಸ್‌) ಆಡಿದ್ದಾರೆ. ಕೊಹ್ಲಿ 76 ಪಂದ್ಯಗಳ 71ನೇ ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ.

ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ, ನಿಗದಿತ 20 ಓವರ್‌ಗಳಲ್ಲಿ 142 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ ಮೂರು ವಿಕೆಟ್‌ ಕಳೆದುಕೊಂಡು 144 ರನ್‌ ಗಳಿಸಿತು.

ಜನವರಿ 5 ರಂದು ಗುವಾಹಟಿಯಲ್ಲಿ ನಡೆಯಬೇಕಿದ್ದ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.ಮೂರನೇ ಹಾಗೂ ಅಂತಿಮ ಪಂದ್ಯ ಜ.10ರಂದು ಪುಣೆಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.