
ರೋಹಿತ್ ಶರ್ಮಾ ಮತ್ತು ಶಾಯ್ ಹೋಪ್
ಕೋಲ್ಕತ್ತ: ಇಲ್ಲಿನ ಈಡೆನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವಕಪ್‌ನ ಸೂಪರ್–8ರ ಹಂತದ ಮಹತ್ವದ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಭಾನುವಾರದಂದು (ಮಾರ್ಚ್ 1) ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ.
ಭಾರತ–ವಿಂಡೀಸ್ ತಂಡಗಳ ನಡುವಿನ ಪಂದ್ಯ ಆರಂಭಕ್ಕೆ ಇನ್ನೂ ಎರಡು ದಿನಗಳು ಬಾಕಿ ಉಳಿದಿದೆ. ಆದರೆ, ಕ್ರಿಕೆಟ್ ಅಭಿಮಾನಿಗಳು ಮಾತ್ರ, ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಯಾರು ಮೇಲುಗೈ ಸಾಧಿಸಿದ್ದಾರೆ. ಎಷ್ಟು ಬಾರಿ ಮುಖಾಮುಖಿಯಾಗಿವೆ ಎಂಬುದನ್ನು ಹುಡುಕಲು ಪ್ರಾರಂಭಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ಹಣಾಹಣಿ
ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇದುವರೆಗೆ 4 ಬಾರಿ ಮುಖಾಮುಖಿಯಾಗಿದ್ದು, ವಿಂಡೀಸ್ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ಮುಖಾಮುಖಿಯಲ್ಲಿ ಭಾರತ 1 ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ವೆಸ್ಟ್ ಇಂಡೀಸ್ 3ರಲ್ಲಿ ಗೆಲುವು ಸಾಧಿಸಿದೆ.
2009 – ವೆಸ್ಟ್ ಇಂಡೀಸ್‌ಗೆ ಗೆಲುವು
2009ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಭಾರತವನ್ನು ಸುಲಭವಾಗಿ ಸೋಲಿಸಿತು. ಭಾರತ ನೀಡಿದ್ದ 154 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪುವ ಮೂಲಕ ಗೆಲುವಿನ ಅಭಿಯಾನ ಆರಂಭಿಸಿತ್ತು.
2010 ವಿಂಡೀಸ್‌ಗೆ 14 ರನ್‌ಗಳ ಗೆಲುವು
ಕೆರಿಬಿಯನ್‌ನಲ್ಲಿ ನಡೆದ 2010ರ ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್ ಪರ ಕ್ರಿಸ್ ಗೇಯ್ಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅವರ 99 ರನ್‌ಗಳ ನೆರವಿನಿಂದ ವಿಂಡೀಸ್ 169 ರನ್ ಕಲೆಹಾಕಿತು. 170 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 155/9 ವಿಕೆಟ್ ಕಳೆದುಕೊಂಡು, ಪಂದ್ಯವನ್ನು 14 ರನ್‌ಗಳಿಂದ ಸೋಲು ಅನುಭವಿಸಿತು.
2014–ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್ ವಿರುದ್ಧ ಭಾರತಕ್ಕೆ ಮೊದಲ ಗೆಲುವು
ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯಲ್ಲಿ, ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಸೋಲು ಅನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸುಲಭದ ಗುರಿ ಬೆನ್ನಟ್ಟಿದ ಭಾರತ ತಂಡವು ಗೆಲುವು ದಾಖಲಿಸಿತು.
2016 ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲಿನ ಆಘಾತ
2016ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತ ತಂಡವನ್ನು ರೋಚಕವಾಗಿ ಸೋಲಿಸಿ ಫೈನಲ್ ತಲುಪಿತು. ಭಾರತ ನೀಡಿದ್ದ ಬೃಹತ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪರ ಲೆಂಡ್ಲ್ ಸಿಮನ್ಸ್ ಅವರು ಅಜೇಯ 82 ಬಾರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ ಗೆಲುವು ಸಾಧಿಸಿತು. ಆ ಮೂಲಕ ಭಾರತ ಸೆಮಿಫೈನಲ್‌ನಲ್ಲೇ ಟೂರ್ನಿಯಿಂದ ಹೊರಬಿದ್ದಿತು.
ಸದ್ಯ, ಎರಡೂ ತಂಡಗಳು ಸೂಪರ್–8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೋಲು ಅನುಭವಿಸಿವೆ. ಭಾನುವಾರ ನಡೆಯುವ ಪಂದ್ಯವು ಮಹತ್ವದ್ದಾಗಿದ್ದು, ಗೆಲ್ಲುವ ತಂಡ ಸೆಮಿಫೈನಲ್ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.