ADVERTISEMENT

ಟಿ20 ವಿಶ್ವಕಪ್: ಈಡನ್‌ಗಾರ್ಡನ್‌ನಲ್ಲಿ ರನ್‌ಹೊಳೆ ನಿರೀಕ್ಷೆ

ಭಾರತ– ವೆಸ್ಟ್‌ ಇಂಡೀಸ್‌ ನಡುವಣ ‘ಕ್ವಾರ್ಟರ್‌ಫೈನಲ್’ ಪಂದ್ಯಕ್ಕೆ ಕೋಲ್ಕತ್ತ ಸಜ್ಜು

ಪಿಟಿಐ
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
   

ಕೋಲ್ಕತ್ತ: ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಣ ಭಾನುವಾರ ಇಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯ ‘ಕ್ವಾರ್ಟರ್‌ಫೈನಲ್’ ಸ್ವರೂಪ ಪಡೆದಿದೆ. ಕೋಲ್ಕತ್ತದಲ್ಲಿ ಈ ಪಂದ್ಯ ನಡೆಯುತ್ತಿರುವ ಪಿಚ್‌ನಲ್ಲಿ ರನ್‌ಹೊಳೆ ಹರಿಯುವ ನಿರೀಕ್ಷೆಯಿದೆ.

ಹಾಲಿ ವಿಶ್ವಕಪ್‌ನಲ್ಲಿ ಮೊದಲ ಬಾರಿ 200+ ಮೊತ್ತ ದಾಖಲಾಗಿದ್ದು ಇದೇ ಪಿಚ್‌ನಲ್ಲಿ. ಸ್ಕಾಟ್ಲೆಂಡ್, ಇಟಲಿ ವಿರುದ್ಧ ಫೆ. 9ರಂದು ನಡೆದ ಆ ಪಂದ್ಯದಲ್ಲಿ 207 ರನ್ ಹೊಡೆದಿತ್ತು. ಇದೇ ಪಿಚ್‌ನಲ್ಲಿ ಮಾರ್ಚ್‌ 1ರಂದು ಪಂದ್ಯ ನಡೆಯಲಿದೆ ಎಂದು ಸ್ಥಳೀಯ ಕ್ಯುರೇಟರ್ ಸುಜನ್ ಮುಖರ್ಜಿ ತಿಳಿಸಿದ್ದಾರೆ.

ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಶುಕ್ರವಾರ ಪಿಚ್‌ಗೆ ಹೊದಿಕೆಹಾಕುವ ಮೊದಲು ಒಂದು ಸುತ್ತು ಪರಿಶೀಲನೆ ನಡೆಸಿದರು. ಮುಖರ್ಜಿ ಜೊತೆ ಬಿಸಿಸಿಐ ಮಾಜಿ ಅಧ್ಯಕ್ಷ ಸಹ ಆಗಿರುವ ಗಂಗೂಲಿ, ಬಿಸಿಸಿಐನ ಮುಖ್ಯ ಕ್ಯುರೇಟರ್ ಆಶಿಶ್‌ ಭೌಮಿಕ್‌ ಅವರು ದೀರ್ಘ ಸಮಾಲೋಚನೆ ನಡೆಸಿದರು. ಗಂಗೂಲಿ ಅವರು ಪಿಚ್‌ನ ಎರಡೂ ಎಂಡ್‌ಗಳ ದೃಢತೆ ಪರೀಕ್ಷಿಸಿದರು.

ADVERTISEMENT

‘ಪಿಚ್‌ ತಯಾರಿ ನೋಡಿ ಗಂಗೂಲಿ ಸಂತೃಪ್ತರಾದಂತೆ ಕಂಡರು. ಈಡನ್‌ನ ಮಾಮೂಲಿ ಪಿಚ್‌ನಂತೆ ಇಲ್ಲಿ ರನ್‌ಗಳು ಹರಿಯಲಿವೆ. ಬೌಲರ್‌ಗಳಿಗೂ ಇಲ್ಲಿ ಸ್ವಲ್ಪ ನೆರವು ಸಿಗಲಿದೆ’ ಎಂದು ಮುಖರ್ಜಿ ಸುದ್ದಿಸಂಸ್ಥೆಗೆ ತಿಳಿಸಿದರು. ರಾತ್ರಿಯ ಇಬ್ಬನಿಯೂ ಗಮನಾರ್ಹವಾಗಿರಲಿದೆ ಎಂದರು.

ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಇಲ್ಲಿ ಗಮನಸೆಳೆದಿದ್ದರು. ಹೀಗಾಗಿ ಜಸ್‌ಪ್ರೀತ್ ಬೂಮ್ರಾ, ಎಡಗೈ ವೇಗಿ ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ಅವರೂ ಪಿಚ್‌ನಿಂದ ನೆರವು ನಿರೀಕ್ಷಿಸಬಹುದು. ಈ ವಿಶ್ವಕಪ್‌ನಲ್ಲಿ ಭಾರತ ಮೊದಲ ಬಾರಿ ಈಡನ್‌ ಗಾರ್ಡನ್ಸ್‌ನಲ್ಲಿ ಆಡಲಿದೆ. ವೆಸ್ಟ್‌ ಇಂಡೀಸ್ ಈ ಕ್ರೀಡಾಂಗಣದಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು (ಸ್ಕಾಟ್ಲೆಂಡ್ ಮತ್ತು ಇಟಲಿ ವಿರುದ್ಧ) ಆಡಿದೆ.

ಭಾನುವಾರದ ಸೂಪರ್ ಎಂಟರ ಈ ಪಂದ್ಯ ‘ಕ್ವಾರ್ಟರ್‌ಫೈನಲ್‌’ ರೂಪ ತಳೆದಿದೆ. ದಕ್ಷಿಣ ಆಫ್ರಿಕಾ ತಂಡವು, ವೆಸ್ಟ್ ಇಂಡೀಸ್, ಭಾರತ ಎರಡೂ ತಂಡಗಳಿಗೆ ಸೋಲುಣಿಸಿದೆ. ಭಾರತ ಗುರುವಾರ ಜಿಂಬಾಬ್ವೆ ತಂಡವನ್ನು ಸೋಲಿಸಿ ಟೂರ್ನಿಯಿಂದ ಹೊರದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.