ADVERTISEMENT

ಮಹಿಳಾ ವಿಶ್ವಕಪ್ | 200ಕ್ಕಿಂತ ಅಧಿಕ ರನ್ ಗುರಿ: ಸತತ 10ನೇ ಪಂದ್ಯ ಸೋತ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2025, 8:29 IST
Last Updated 20 ಅಕ್ಟೋಬರ್ 2025, 8:29 IST
<div class="paragraphs"><p>ಭಾರತ ಮಹಿಳಾ ಕ್ರಿಕೆಟ್‌ ತಂಡದ</p></div>

ಭಾರತ ಮಹಿಳಾ ಕ್ರಿಕೆಟ್‌ ತಂಡದ

   

ಕೃಪೆ: ಪಿಟಿಐ

ಇಂದೋರ್‌: ಭಾರತ ತಂಡವು ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾನುವಾರ ಕೇವಲ 4 ರನ್‌ ಅಂತರದ ಸೋಲು ಅನುಭವಿಸಿದೆ. ಇದರೊಂದಿಗೆ, ಸೆಮಿಫೈನಲ್‌ ತಲುಪುವ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ.

ADVERTISEMENT

ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌, ಹೀದರ್‌ ನೈಟ್‌ (109) ಗಳಿಸಿದ ಅಮೋಘ ಶತಕದ ಬಲದಿಂದ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 288 ರನ್‌ ಗಳಿಸಿತ್ತು.

ಸವಾಲಿನ ಗುರಿ ಎದುರು ಬ್ಯಾಟಿಂಗ್ ಮಾಡಿದ ಭಾರತ, ನಾಯಕಿ ಹರ್ಮನ್‌ ಪ್ರೀತ್ ಕೌರ್‌ (70), ಉಪನಾಯಕಿ ಸ್ಮೃತಿ ಮಂದಾನ (88) ಹಾಗೂ ಆಲ್‌ರೌಂಡರ್ ದೀಪ್ತಿ ಶರ್ಮಾ (50) ಅರ್ಧಶತಕ ಗಳಿಸಿದರೂ ಗುರಿ ತಲುಪಲಿಲ್ಲ. ಪೂರ್ಣ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 284 ರನ್ ಗಳಿಸಿ ಹೋರಾಟ ಮುಗಿಸಿತು.

ಟೂರ್ನಿಯಲ್ಲಿ ಈವರೆಗೆ 5 ಪಂದ್ಯ ಆಡಿರುವ ಭಾರತ ಎರಡರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆಯಾದರೂ, ಸೆಮಿಫೈನಲ್‌ ಹಾದಿ ಇನ್ನೂ ಖಚಿತವಾಗಿಲ್ಲ. ಮುಂದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶದ ಸವಾಲು ಭಾರತಕ್ಕಿದೆ.

ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ 'ನಾಕೌಟ್‌' ಟಿಕೆಟ್‌ ಖಚಿತವಾಗಿದೆ.

ಸತತ 10ನೇ ಸೋಲು
ಮಹಿಳಾ ವಿಶ್ವಕಪ್‌ ಟೂರ್ನಿಗಳಲ್ಲಿ ಎದುರಾಳಿ ತಂಡ ಮೊದಲು ಬ್ಯಾಟಿಂಗ್‌ ಮಾಡಿ 200ಕ್ಕಿಂತ ಹೆಚ್ಚಿನ ಮೊತ್ತ ಕಲೆಹಾಕಿದಾಗ ಭಾರತ ಒಮ್ಮೆಯೂ ಗೆದ್ದಿಲ್ಲ.

ಟೀಂ ಇಂಡಿಯಾಗೆ ವಿಶ್ವಕಪ್‌ನಲ್ಲಿ ಈವರೆಗೆ 10 ಸಲ ಇನ್ನೂರಕ್ಕಿಂತ ಹೆಚ್ಚಿನ ಗುರಿ ಎದುರಾಗಿದೆ. ಭಾರತ ಒಮ್ಮೆಯೂ ಗುರಿ ಮುಟ್ಟಿಲ್ಲ.

ವಿಶೇಷವೆಂದರೆ, ಗುರಿ ಬೆನ್ನತ್ತುವಾಗ 250ಕ್ಕಿಂತ ಹೆಚ್ಚು ರನ್‌ ಗಳಿಸಿದ್ದು ಇದೇ ಮೊದಲು. 2013ರಲ್ಲಿ ಇಂಗ್ಲೆಂಡ್‌ ವಿರುದ್ಧವೇ 9 ವಿಕೆಟ್‌ಗಳನ್ನು ಕಳೆದುಕೊಂಡು 240 ರನ್ ಕಲೆಹಾಕಿದ್ದು ಈವರೆಗೆ ದಾಖಲೆಯಾಗಿತ್ತು.

(ಮಾಹಿತಿ: cricbuzz.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.