
ಹೋಬಾರ್ಟ್: ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಮಹಿಳಾ ತಂಡವು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಪುಟಿದೇಳುವತ್ತ ಚಿತ್ತ ನೆಟ್ಟಿದೆ. ಆ ಮೂಲಕ, ‘ವೈಟ್‌ವಾಷ್’ ಮುಖಭಂಗದಿಂದ ಪಾರಾಗಲು ವಿಶ್ವ ಚಾಂಪಿಯನ್ ಹರ್ಮನ್‌ಪ್ರೀತ್ ಕೌರ್ ಪಡೆ ಎದುರು ನೋಡುತ್ತಿದೆ.
ಉಪನಾಯಕಿ ಸ್ಮೃತಿ ಮಂದಾನ (58 ಹಾಗೂ 31) ಹಾಗೂ ನಾಯಕಿ ಹರ್ಮನ್ (53 ಹಾಗೂ 54) ಹೊರತುಪಡಿಸಿದರೆ ಭಾರತ ತಂಡದ ಬ್ಯಾಟಿಂಗ್ ವಿಭಾಗವು ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿಲ್ಲ. ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ, ಅನುಭವಿ ಆಟಗಾರ್ತಿಯರಾದ ಜೆಮಿಮಾ ರಾಡ್ರಿಗಸ್ (8 ಹಾಗೂ 11) ಮತ್ತು ದೀಪ್ತಿ ಶರ್ಮಾ (2 ಹಾಗೂ 1 ರನ್) ಅವರಿಂದ ನಿರೀಕ್ಷಿತ ಆಟ ಮೂಡಿಬರದಿರುವುದು ಪ್ರವಾಸಿ ತಂಡಕ್ಕೆ ಮುಳುವಾಗಿದೆ.
‘ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗ ಕೈಕೊಟ್ಟಿರುವುದರಿಂದ ನಮಗೆ ಹಿನ್ನಡೆಯಾಗಿದೆ. ಕೊನೆಯ ಪಂದ್ಯದಲ್ಲಿ ನಮ್ಮ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುವ, ದೊಡ್ಡ ಇನಿಂಗ್ಸ್ ಆಡುವ ವಿಶ್ವಾಸವಿದೆ’ ಎಂದು ಹರ್ಮನ್ ಅವರು ಎರಡನೇ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಬ್ಯಾಟರ್‌ಗಳ ಅಸ್ಥಿರ ಆಟ ಒಂದು ಕಡೆಯಾದರೆ, ಬೌಲರ್‌ಗಳೂ ವಿಕೆಟ್ ಗಳಿಸಲು ಪರದಾಡುತ್ತಿದ್ದು ಭಾರತ ತಂಡದ ಚಿಂತೆಗೆ ಕಾರಣವಾಗಿದೆ. ಮತ್ತೊಂದೆಡೆ, ಬ್ಯಾಟಿಂಗ್– ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿರುವ ಆಸ್ಟ್ರೇಲಿಯಾ ತಂಡವು ಸರಣಿ ಗೆಲುವಿನ ಅಂತರವನ್ನು 3–0ಗೆ ಹೆಚ್ಚಿಸಿಕೊಳ್ಳುವತ್ತ ಯೋಜನೆ ರೂಪಿಸಿದೆ.
ನಾಯಕಿ ಅಲಿಸಾ ಹೀಲಿ ಅವರಿಗೆ ಇದು ವಿದಾಯದ ಏಕದಿನ ಪಂದ್ಯವಾಗಿದ್ದು, ಗೆಲುವಿನೊಂದಿಗೆ ಬೀಳ್ಕೊಡಲು ಆತಿಥೇಯರು ಸಜ್ಜಾಗಿದ್ದಾರೆ.
ಪಂದ್ಯ ಆರಂಭ: ಬೆಳಿಗ್ಗೆ 9.20
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.